ಮಡಿಕೇರಿ, ಆ. 23: ಪ್ರಸ್ತುತ ಕನ್ನಡ ಚಲನ ಚಿತ್ರ ರಂಗದಲ್ಲಿ ಹೊಸತನದ ಕಥೆ. ಸಂದೇಶಗಳನ್ನು ಒಳಗೊಂಡ ಚಲನಚಿತ್ರಗಳು ನಿರ್ಮಾಣವಾಗುತ್ತಿದ್ದು, ಈ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಲಿದೆ. ಯುವ ವೈದ್ಯರೊಬ್ಬರ ಪರಿಕಲ್ಪನೆಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಬಹುತೇಕ ಕೊಡಗಿನಲ್ಲೇ ಚಿತ್ರೀಕರಣವಾಗಲಿದೆ. ಬೆಂಗಳೂರು ಮೂಲದ ವೈದ್ಯ ವಿದೇಶದಲ್ಲಿ ಪ್ರೊಫೆಸರ್ ಆಗಿದ್ದ ಡಾ|| ವಿಜಯ್ ಅವರ ಕನಸ್ಸಿನ ಚಿತ್ರ ಇದಾಗಿದೆ. ಇವರ ಸ್ನೇಹಿತರಾಗಿರುವ ಮಡಿಕೇರಿಯ ಮಕ್ಕಳ ತಜ್ಞ ಕೆದಕಲ್‍ನಲ್ಲಿ ಮನೆಹೊಂದಿರುವ ಮೊಣ್ಣಂಡ ದೇವಯ್ಯ ಅವರ ಸಹಕಾರದೊಂದಿಗೆ ಡಾ|| ವಿಜಯ್ ಅವರೇ ನಾಯಕ ನಟರಾಗಿ ಅಭಿನಯಿಸುವದರೊಂದಿಗೆ ನಿರ್ದೇಶಿಸುತ್ತಿರುವ ‘ಪುನಾರಂಭ’ ಹೆಸರಿನ ಚಿತ್ರ ಇದಾಗಿದೆ. ಡಾ|| ದೇವಯ್ಯ ಅವರ ಸುಂದರ ನಿವಾಸ, ತೋಟ ಸೇರಿದಂತೆ ಮಡಿಕೇರಿಯ ಸುತ್ತಮುತ್ತಲಿನಲ್ಲೇ ಪುನಾರಂಭ ಚಿತ್ರೀಕರಣವಾಗುತ್ತಿದೆ.
ನಾಯಕ ಡಾ|| ವಿಜಯ್ ಅವರೊಂದಿಗೆ 2016ರ ಮಿಸ್ ಕರ್ನಾಟಕ ಹಾಗೂ ಮಿಸ್ ಕ್ವೀನ್ ಆಫ್ ಇಂಡಿಯಾ ಸ್ಪರ್ಧೆಯ ರನ್ನರ್ ಅಪ್ ಇಂಜಿನಿಯರ್ ಪದವೀಧರೆ ಐಶ್ವರ್ಯ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಿರಿಯ ನಟರುಗಳಾದ ಶೋಭರಾಜ್, ಶಂಕರ್ ಅಶ್ವಥ್, ಲಯಕೋಕಿಲ, ರಿಚರ್ಡ್ ಲೂಯಿಸ್, ಗಣೇಶ್ ರಾವ್ ಮತ್ತಿತರ ಕಲಾವಿದರ ಅಭಿನಯ ಈ ಚಿತ್ರದಲ್ಲಿದೆ.
ಕಿರುತೆರೆಯಲ್ಲಿ ಹಲವಾರು ಸೀರಿಯಲ್‍ಗಳಲ್ಲಿ ಅಭಿನಯಿಸಿರುವ ಡಾ|| ವಿಜಯ್ ಮದ್ಯದಲ್ಲಿ ನಟನೆ ನಿಲ್ಲಿಸಿ ವಿದೇಶದಲ್ಲಿದ್ದರು. ಇದೀಗ ತಲೆಯಲ್ಲಿದ್ದ ಹೊಸ ಕಥೆಯೊಂದರನ್ನು ಆಧರಿಸಿ ವಿಭಿನ್ನ್ ಕ್ರಿಯೇಷನ್ ಅಡಿಯಲ್ಲಿ ಈ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈ ಕಥೆಗೆ ಕೊಡಗಿನ ಈ ಪರಿಸರ ಅತ್ಯಂತ ಸೂಕ್ತ ಜಾಗವಾಗಿದೆ ಎನ್ನುತ್ತಾರೆ ವಿಜಯ್.
ಒಬ್ಬ ನಾಯಕ ತನ್ನ ಕನಸ್ಸಿನ ಒಂದು ಯೋಜನೆಗೆ ತನ್ನ ಎಲ್ಲಾ ಸಂಪಾದನೆಯನ್ನು ಸುರಿದು ನಷ್ಟಕ್ಕೆ ಒಳಗಾಗುತ್ತಾನೆ. ಇದರ ಕಷ್ಟ, ಒತ್ತಡವನ್ನು ಆತ ಹೇಗೆ ಎದುರಿಸಿ ನಿವಾರಿಸುತ್ತಾನೆ. ಒಂದು ಕುಟುಂಬ ಆರ್ಥಿಕ ಸಂಕಷ್ಟದ ಒತ್ತಡಕ್ಕೆ ಸಿಲುಕಿದರೆ, ಏನೆಲ್ಲಾ ಆಗುತ್ತದೆ. ಇದರಿಂದ ವಿಚಲಿತರಾಗದೆ ಇದನ್ನು ಯಾವ ರೀತಿ ಎದುರಿಸಿ ನಿಲ್ಲಬಹುದು ಎಂಬ ಕಥಾ ಸಾರಾಂಶ ಇದರಲ್ಲಿದೆ. ಇದರೊಂದಿಗೆ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಡ್ರಗ್ಸ್‍ನ ಚಟಕ್ಕೆ ತುತ್ತಾಗಿ ಆತನ ಕುಟುಂಬ ಯಾವ ರೀತಿ ಪರಿತಾಪಪಟ್ಟಿತು. ಡ್ರಗ್ಸ್‍ನ ದುಷ್ಟರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವನ್ನೂ ಈ ಚಿತ್ರದ ಮೂಲಕ ನೀಡಲಾಗುತ್ತಿದೆ ಎಂದು ವಿಜಯ್ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಡಾ|| ದೇವಯ್ಯ ಅವರ ನಿವಾಸದಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು ಜಿಲ್ಲೆಯಲ್ಲಿ ಸುಮಾರು 20 ದಿನ ಚಿತ್ರೀಕರಣ ನಡೆಯಲಿದೆ. ನಾಲ್ಕು ಹಾಡುಗಳನ್ನು ಸಂಪೂರ್ಣವಾಗಿ ಇಲ್ಲಿಯೇ ಚಿತ್ರಕರಿಸಲಾಗುವದು. ಡಾ|| ದೇವಯ್ಯ, ಅವರ ಪತ್ನಿ ರÀಶ್ಮಿ ಹಾಗೂ ಕುಟುಂಬದ ಸಹಕಾರ ಇರುವದು ಅನುಕೂಲವಾಗಿದೆ. ವೃತ್ತಿಯಲ್ಲಿ ವೈದ್ಯರಾದರೂ ಚಲನಚಿತ್ರ ತಮಗೆ ಫ್ಯಾಷನ್ ಎಂದರು. ನಾಯಕಿ ಐಶ್ವರ್ಯ ಮಾತನಾಡಿ ಇದು ತಮ್ಮ ಮೊದಲ ಚಿತ್ರವಾಗಿದ್ದು, ಸಂತಸವಾಗಿದೆ. ಬೆಂಗಳೂರು, ಶ್ರೀಲಂಕಾದಲ್ಲಿ ತಾನು ಪ್ರಿಂಟ್ ಮಾಡಲಿಂಗ್ ಆಗಿದ್ದು, ಹಲವು ಕನಸ್ಸಿದೆ ಯಾವ ಪಾತ್ರವಾದರೂ ನಟಿಸುವ ವಿಶ್ವಾಸವಿದೆ ಎಂದರು.
ಸಹ ನಿರ್ದೇಶಕರಾದ ನಟ ಗಣೇಶ್‍ರಾವ್ ತಾವು 158 ಚಿತ್ರಗಳಲ್ಲಿ ನಟಿಸಿದ್ದು, ಈ ಅನುಭವವನ್ನು ಸ್ನೇಹಿತ ವಿಜಯ್ ಚಿತ್ರಕ್ಕೆ ಧಾರೆ ಎರೆಯುವದಾಗಿ ಹೇಳಿದರು. ಕ್ಯಾಮರಾಮೆನ್‍ಗಳಾದ 48 ಚಿತ್ರಗಳಲ್ಲಿ ಕೆಲಸ ನಿರ್ವಹಿಸಿರುವ ಈ ಹಿಂದೆ ಕೊಡವ ಚಲನಚಿತ್ರವೊಂದರಲ್ಲೂ ಕ್ಯಾಮರಾಮೆನ್ ಆಗಿದ್ದ ಮುತ್ತುರಾಜ್ ಹಾಗೂ ಅವರ ಸಹವರ್ತಿ ಚೌಹಾಣ್ ಈ ಪರಿಸರ ಚಿತ್ರೀಕರಣಕ್ಕೆ ಸೂಕ್ತವಾಗಿದೆ. ಅದರಲ್ಲೂ ಈಗಿನ ವಾತಾವರಣದಿಂದ ಇನ್ನಷ್ಟು ಕಳೆ ಮೂಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಡಾ|| ದೇವಯ್ಯ ಅವರು ಕೂಡ ವೈದ್ಯರ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿರುವರಂತೆ ಇವರ ಪುತ್ರ ಮಾಸ್ಟರ್ ಕೌಶಿಕ್ ನಂಜಪ್ಪ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾನೆ. ಡಾ|| ವಿ. ನಾಗೇಂದ್ರ ಪ್ರಸಾದ್ ಸಂಗೀತ, ಜಯಂತ್ ಕಾಯ್ಕಿಣಿ ಸಾಹಿತ್ಯ ಈ ಚಿತ್ರಕ್ಕಿದೆ.
-ಶಶಿ ಸೋಮಯ್ಯ