ಗೋಣಿಕೊಪ್ಪಲು, ಆ. 23 : ನೆಲ್ಯಹುದಿಕೇರಿಯಲ್ಲಿ ಇತ್ತೀಚೆಗೆ ನಡೆದ ಅಕ್ರಮ ಗೋಸಾಗಣೆ ಸಂದರ್ಭ ವಶ ಪಡಿಸಿಕೊಂಡ ಗೋವುಗಳನ್ನು ಮತ್ತೆ ಗೋ ಕಳ್ಳರ ವಶಕ್ಕೆ ನೀಡಲು ಮುಂದಾದರೆ ಪ್ರತಿಭಟನೆ ನಡೆಸಲಾಗುವದು ಎಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ ಜಿ ಅಯ್ಯಣ್ಣ ಎಚ್ಚರಿಸಿದ್ದಾರೆ.
ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿಯಲ್ಲಿ ಇತ್ತೀಚೆಗಷ್ಟೆ ವಶ ಪಡಿಸಿಕೊಂಡ ಗೋವುಗಳನ್ನು ಪಿಂಜರ್‍ಪೋಲ್‍ನಲ್ಲಿ ರಕ್ಷಿಸಲಾಗಿದೆ. ಆದರೆ, ಪೊಲೀಸರನ್ನು ಬೆದರಿಸಿ ಮತ್ತೆ ಗೋವುಗಳನ್ನು ತಮ್ಮ ವಶಕ್ಕೆ ಪಡೆಯಲು ಗೋವು ಕಳ್ಳರು ಮುಂದಾಗಿರುವದು ಖಂಡನಾರ್ಹ. ಒಂದು ವರ್ಗ ಮತ್ತೆ ಗೋವುಗಳನ್ನು ಅವರಿಗೆ ನೀಡಿದರೆ ಜಿಲ್ಲಾಧ್ಯಂತ ಪ್ರತಿಭಟನೆ ನಡೆಸಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಈ ಪ್ರಕಣದಲ್ಲಿ ಪೊಲೀಸರನ್ನು ಕೂಡ ಹೆದರಿಸುವ ಘಟನೆ ನಡೆಯುತ್ತಿದೆ. ಗೋಕಳ್ಳತನದಲ್ಲಿ ತೊಡಗಿದವರು ಹಿಂದೂ ಕಾರ್ಯಕರ್ತರ ಮೇಲೆ ಕೊಲೆ ಬೆದರಿಕೆ ಹಾಕುವ ಮೂಲಕ ಭಯದ ವಾತವರಣ ಮೂಡಿಸುತ್ತಿದ್ದಾರೆ. ಆದರೂ ಪೊಲೀಸರು ಅಂತಹವರನ್ನು ಬಂಧಿಸಲು ಮುಂದಾಗುತ್ತಿಲ್ಲ ಎಂದು ಅರೋಪಿಸಿದರು.
ಎಸ್‍ಡಿಪಿಐ ಮುಖಂಡ ಅಮೀನ್ ಮೋಹಿಸಿನ್ ಅವರ ಚಲನ ವಲನದ ಬಗ್ಗೆ ಪೊಲೀಸರು ಗಮನ ಹರಿಸಬೇಕು. ಇಂತಹ ಘಟನೆ ಮತ್ತೆ ನಡೆಯದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳದಿದ್ದಲ್ಲಿ ಗ್ರಾಮ ಮಟ್ಟದಲ್ಲಿ ಗೋ ಕಳ್ಳತನದ ಬಗ್ಗೆ ಆತಂಕದ ವಾತಾವರಣ ಉಂಟಾಗುವ ಸಾಧ್ಯತೆ ಇರುವದನ್ನು ಜಿಲ್ಲಾಡಳಿತ ಅರಿತುಕೊಳ್ಳಬೇಕು ಎಂದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಕರ್ಕೆರಾ ಕಿರಣ್, ತಾಲೂಕು ಅಧ್ಯಕ್ಷ ಅಲ್ಲುಮಾಡ ಶರತ್, ಉಪಾಧ್ಯಕ್ಷ ಮೋಹನ್‍ರಾಜ್, ಸಂಚಾಲಕ ಯೋಗೇಶ್ ಉಪಸ್ಥಿತರಿದ್ದರು.