ಶ್ರೀಮಂಗಲ, ಆ. 24: ಪುಟ್ಟ ಕೊಡಗು ಜಿಲ್ಲೆಯ ಮೂಲಕ ನಾಲ್ಕು ರಾಷ್ಟ್ರೀಯ ಹೆದ್ದಾರಿ ಹಾಗೂ ಎರಡು ರೈಲು ಮಾರ್ಗದ ಉದ್ದೇಶಿತ ಯೋಜನೆ ಕಾರ್ಯಗತವಾದರೆ ಜಿಲ್ಲೆಯ ಅಸಂಖ್ಯಾತ ಸಣ್ಣ ಹಿಡುವಳಿದಾರರು ಬೀದಿಗೆ ಬೀಳಲಿದ್ದಾರೆ. ನೆರೆಯ ಕೇರಳ ರಾಜ್ಯದ ಅನುಕೂಲಕ್ಕಾಗಿ ಕೊಡಗು ಜಿಲ್ಲೆಯ ಮೇಲೆ ಅನಗತ್ಯವಾದ ಯೋಜನೆಗಳನ್ನು ಹೇರಿ ಜಿಲ್ಲೆಯ ಭೌಗೋಳಿಕ ಲಕ್ಷಣ ಹಾಗೂ ಪರಿಸರವನ್ನು ನಾಶಮಾಡುವ ಯೋಜನೆ ವಿರುದ್ಧ ತಾ. 26 ರಂದು ಕುಟ್ಟದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಿ ಪಾಲ್ಗೊಳ್ಳುವದಾಗಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಸ್ಪಷ್ಟಪಡಿಸಿದ್ದಾರೆ.

ಗೋಣಿಕೊಪ್ಪ ಸಿಲ್ವರ್ ಸ್ಕೈ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಮೂಲ ಸ್ವರೂಪಕ್ಕೆ ಹಾಗೂ ಕೃಷಿ ಮತ್ತು ಪ್ಲಾಂಟೇಷನ್‍ಗೆ ಈ ಮಾರ್ಗ ಯೋಜನೆಗಳಿಂದ ತೀವ್ರತರದ ತೊಂದರೆಯಾಗಲಿದೆ. ಈ ಯೋಜನೆ ರೂಪುಗೊಂಡರೆ ಜಿಲ್ಲೆಯ ಹಲವಾರು ಪಟ್ಟಣಗಳ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ಕಳೆದುಕೊಳ್ಳುತ್ತಾರೆ. ಹಾಗೆಯೇ ಅಸಂಖ್ಯಾತ ಸಣ್ಣ ಹಿಡುವಳಿದಾರರು ತಮ್ಮ ಕೃಷಿ ಜಮೀನನ್ನು ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ. ಆದ್ದರಿಂದ, ಈ ಯೋಜನೆಯನ್ನು ಒಗ್ಗಟ್ಟಾಗಿ ಎಲ್ಲರೂ ವಿರೋಧಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಕುಟ್ಟ ಕೆ. ಬಾಡಗ ಕೊಡವ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷ ಬೊಳ್ಳೇರ ರಾಜ ಸುಬ್ಬಯ್ಯ ಅವರು ಮಾತನಾಡಿ, ಜಿಲ್ಲೆಯ ಮೂಲಕ ನಾಲ್ಕು ಹೆದ್ದಾರಿ ಎರಡು ರೈಲು ಮಾರ್ಗ ರೂಪಿಸಲು ಈಗಾಗಲೇ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಸರ್ಕಾರ ಈ ಯೋಜನೆಗೆ ಅಂಗೀಕಾರ ನೀಡುವ ಮೊದಲೇ ಜಿಲ್ಲೆಯ ಶಾಸಕರು ಹಾಗೂ ಸಂಸದರು ಅದನ್ನು ವಿರೋಧಿಸಿ ಸ್ಥಗಿತಗೊಳಿಸಬೇಕು. ಸರ್ಕಾರ ಯೋಜನೆಗೆ ಅಂಗೀಕಾರ ನೀಡಿದ ನಂತರ ಈ ಯೋಜನೆ ಅಂಗೀಕರಿಸಲಾಗಿದೆ. ನಮ್ಮಿಂದ ಏನು ಮಾಡಲು ಆಗುವದಿಲ್ಲ ಎಂದು ಜವಾಬ್ದಾರಿಯಿಂದ ಕಳಚಿಕೊಳ್ಳದಂತೆ ಎಚ್ಚರವಹಿಸುವಂತೆ ಶಾಸಕರು ಮತ್ತು ಸಂಸದರಿಗೆ ಎಚ್ಚರ ವಹಿಸಬೇಕೆಂದು ತಿಳಿಸಿದರು.

ಕುಟ್ಟ ನಾಲ್ಕೇರಿ ಶ್ರೀಕೃಷ್ಣ ಕೊಡವ ಸಂಘದ ಅಧ್ಯಕ್ಷ ಗುಡಿಯಂಗಡ ನಾಚಪ್ಪ ಮಾತನಾಡಿ, ಜಿಲ್ಲೆಗೆ ರೈಲು ಮಾರ್ಗ ಮತ್ತು ಹೆದ್ದಾರಿ ಯೋಜನೆ ಅಗತ್ಯವಿಲ್ಲ. ಇದನ್ನು ವಿರೋಧಿಸುವ ನಾವು ಅಭಿವೃದ್ಧಿ ವಿರೋಧಿಗಳಲ್ಲ. ಇರುವ ರಸ್ತೆಯನ್ನೇ ನಿಯಮಾನುಸಾರ ಹಾಗೂ ಗುಣಮಟ್ಟದಿಂದ ಸೂಕ್ತ ಕಾಲದಲ್ಲಿ ಸರಿಯಾದ ನಿರ್ವಹಣೆ ಮಾಡಿದರೆ ಸಾಕಾಗುತ್ತದೆ. ಜಿಲ್ಲೆಯ ಪರಿಸರವನ್ನು ನಾಶ ಮಾಡಿ, ಜನರನ್ನು ಸಂಕಷ್ಟಕ್ಕೆ ದೂಡಿ ಅಭಿವೃದ್ಧಿ ಕೆಲಸ ಮಾಡುವ ಅಗತ್ಯ ಇಲ್ಲ. ಆದ್ದರಿಂದ, ಜಿಲ್ಲೆಯ ಸೂಕ್ಷ್ಮ ಪರಿಸರಕ್ಕೆ ಧಕ್ಕೆಯಾದರೆ ಅದು ಜಿಲ್ಲೆ ಮಾತ್ರವಲ್ಲದೆ ಕಾವೇರಿ, ಕಾವೇರಿ ಉಪನದಿಯ ನೀರಿನ ಹರಿಯುವಿಕೆಯ ಮೇಲೆ ಮತ್ತು ಮಳೆ ಕೊರತೆ ಉಂಟಾಗುವ ದುಷ್ಪರಿಣಾಮ ಎದುರಿಸುವಂತಾಗುತ್ತದೆ ಎಂದು ಹೇಳಿದರು.

ಕುಟ್ಟ ಕೆ. ಬಾಡಗ ಕೊಡವ ವೇಲ್‍ಫೇರ್ ಅಸೋಸಿಯೇಷನ್ ಖಜಾಂಚಿ ಕಳ್ಳಿಚಂಡ ರತ್ನ ಪೂಣಚ್ಚ ಮಾತನಾಡಿ ಕೊಡಗು ಜಿಲ್ಲೆಗೆ ಅತ್ಯಗತ್ಯವಾದ ಉತ್ತಮ ಆಸ್ಪತ್ರೆ, ಕುಡಿಯುವ ನೀರು, 24 ಗಂಟೆ ಗುಣಮಟ್ಟದ ವಿದ್ಯುತ್‍ಅನ್ನು ಕೃಷಿ ಹಾಗೂ ಮನೆಗಳಿಗೆ ನೀಡುವಂತಹ ಸೌಲಭ್ಯ ಆಗಬೇಕು. ಅದು ಬಿಟ್ಟು ಅನಗತ್ಯವಾದ ಯೋಜನೆ ಮಾಡಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಹಣ ಕೊಳ್ಳೆ ಹೊಡೆಯಲು ಯೋಜನೆ ರೂಪಿಸುವದು ಅವಶ್ಯವಿಲ್ಲ ಎಂದು ಕಿಡಿಕಾರಿದರು.

ಈ ಸಂದರ್ಭ ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಕೆ. ಮಂದಣ್ಣ, ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಕಾನೂನು ಸಲಹೆಗಾರ ಬಾಳೆಲೆ ಗ್ರಾಮದ ಪೋಡಮಾಡ ಕೆ. ಉತ್ತಪ್ಪ, ನಾಲ್ಕೇರಿ ಶ್ರೀಕೃಷ್ಣ ಕೊಡವ ಸಂಘದ ಕಾರ್ಯದರ್ಶಿ ಅಲ್ಲುಮಾಡ ಬಿ. ಮುಕುಂದ, ಕೆ. ಬಾಡಗದ ಬೆಳೆಗಾರ ಬೊಳ್ಳೇರ ಕೆ. ಅಪ್ಪಯ್ಯನವರು ಮಾತನಾಡಿ ತಾ. 26 ರಂದು ಕುಟ್ಟದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.