ವೀರಾಜಪೇಟೆ, ಆ. 24: ದಕ್ಷಿಣ ಕೊಡಗಿನಲ್ಲಿ ಸರಕಾರ ಹಮ್ಮಿಕೊಂಡಿರುವ ರೈಲ್ವೆ ಹಾಗೂ ಹೆದ್ದಾರಿ ಯೋಜನೆಗೆ ಸಾರ್ವಜನಿಕ ಹಿತ ರಕ್ಷಣಾ ತಾಲೂಕು ಸಮಿತಿ ವಿರೋಧಿಸುವದಾಗಿ ಸಂಘಟನೆಯ ಅಧ್ಯಕ್ಷ ಕೆ.ಎಂ. ಕುಶಾಲಪ್ಪ ತಿಳಿಸಿದ್ದಾರೆ.

ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಶಾಲಪ್ಪ ಅವರು, ಈ ಎರಡು ಯೋಜನೆಗಳು ದಕ್ಷಿಣ ಕೊಡಗಿಗೆ ಮಾರಕವಾಗಿದ್ದು ಪರಿಸರ ನಾಶವಾಗುವದರೊಂದಿಗೆ ರೈತರು, ಬೆಳೆಗಾರರು, ಗ್ರಾಮಸ್ಥರಿಗೆ ತೊಂದರೆಯಾಗಲಿದೆ. ಇದಕ್ಕಾಗಿ ದಕ್ಷಿಣ ಕೊಡಗಿನ ವಿವಿಧ ಸಂಘಟನೆಗಳು ತಾ. 26 ರಂದು ಕುಟ್ಟದಲ್ಲಿ ಏರ್ಪಡಿಸಿರುವ ಪ್ರತಿಭಟನಾ ಸಭೆಯಲ್ಲಿ ಪೊನ್ನಂಪೇಟೆ ಯಿಂದ ಕುಟ್ಟದವರೆಗೆ ವಾಹನ ರ್ಯಾಲಿ ಮೂಲಕ ಭಾಗವಹಿಸಲಿರುವದಾಗಿ ತಿಳಿಸಿದರು.

ದಕ್ಷಿಣ ಕೊಡಗಿನ ವಿವಿಧ ಶಾಲಾ -ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಧರ್ಮ ರಹಿತವಾಗಿ, ಜಾತ್ಯತೀತವಾಗಿ ಸಮವಸ್ತ್ರ ಧರಿಸುವಂತಾಗಬೇಕು. ಸಮವಸ್ತ್ರ ಧರಿಸುವಾಗ ಹಿಂದೂ ಕ್ರಿಶ್ಚಿಯನ್, ಮುಸ್ಲಿಂ ಎಂಬ ಜಾತೀಯತೆಯ ಬೇಧ ಭಾವ ಇರಬಾರದು. ಇದರಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ಮೂಡಬೇಕು. ಕೆಲವು ಶಾಲಾ-ಕಾಲೇಜು ಆಡಳಿತ ಮಂಡಳಿ ಅವರವರ ಧರ್ಮವನ್ನುನಸರಿಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಧರಿಸಲು ಅವಕಾಶ ನೀಡಿರುವದನ್ನು ತಡೆಯಬೇಕು. ಈ ಸಂಬಂಧದಲ್ಲಿ ಶಿಕ್ಷಣ ಸಂಸ್ಥೆಯ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ. ಕ್ರಮ ಕೈಗೊಳ್ಳದಿದ್ದರೆ ಸಂಘಟನೆ ವತಿಯಿಂದ ನ್ಯಾಯಾ ಲಯದ ಮೊರೆ ಹೋಗುವದಾಗಿ ಕುಶಾಲಪ್ಪ ತಿಳಿಸಿದರು. ತಾಲೂಕಿನ ಪ್ರಮುಖ ಪಟ್ಟಣಗಳಲ್ಲಿ ಆಯ್ದ ರಸ್ತೆಗಳಲ್ಲಿ ಎರಡು ಬದಿಗಳಲ್ಲಿ ಜಲ್ಲಿ, ಮರಳು ಇತರ ಕಟ್ಟಡ ಸಾಮಗ್ರಿಗಳು ಶೇಖರಿಸಿಡಲಾಗುತ್ತಿದೆ. ಇದನ್ನು ಲೋಕೋಪಯೋಗಿ ಇಲಾಖೆ ತೆರವುಗೊಳಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಳೆ ತಜ್ಞ ವೈದ್ಯರೊಬ್ಬರು ಮರಣೋತ್ತರ ಪರೀಕ್ಷೆಗೆ ಕಾರ್ಮಿಕರಿಂದಲೂ ರೂ. 4000 ಹಣ ಪಡೆದಿದನ್ನು ಸಂಘಟನೆ ಅದನ್ನು ಪ್ರತಿಭಟಿಸಿ ವಾರೀಸುದಾರರಿಗೆ ಹಿಂತಿರುಗಿಸಿ ಮೇಲಧಿಕಾರಿಗಳಿಗೆ ದೂರು ನೀಡಿದೆ. ಇಂತಹ ವೈದ್ಯರು ಗಳನ್ನು ತಕ್ಷಣ ವರ್ಗಾಯಿಸುವಂತೆ ಕುಶಾಲಪ್ಪ ಆರೋಗ್ಯ ಇಲಾಖೆಯನ್ನು ಒತ್ತಾಯಿಸಿದರು. ಗೋಷ್ಠಿಯಲ್ಲಿ ಬಿ. ಕಾಳಪ್ಪ, ಕೆ. ಪ್ರಭು, ಕಾಳಮಂಡ ತಂಗಮ್ಮ, ನಾಣಯ್ಯ, ಕಾವೇರಪ್ಪ, ಎಂ. ಕಾರ್ಯಪ್ಪ, ಎಂ.ಬಿ. ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.