ಮಡಿಕೇರಿ, ಆ. 26: ಪ್ರಸಕ್ತ ಮೈಸೂರು ತನಕ ಇರುವಂತಹ ರೈಲ್ವೇ ಮಾರ್ಗವನ್ನು ಜನತೆಯ ಬೇಡಿಕೆ ಯಂತೆ ಹುಣಸೂರು, ಪಿರಿಯಾಪಟ್ಟಣ ಮಾರ್ಗವಾಗಿ ಕುಶಾಲನಗರದ ತನಕ ವಿಸ್ತರಿಸಲಾಗುವದು ಎಂದು ಸ್ಪಷ್ಟಪಡಿಸಿರುವ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ಈ ಯೋಜನೆಯಿಂದ ಜಿಲ್ಲೆಯ ಪರಿಸರಕ್ಕೆ ಯಾವ ರೀತಿಯೂ ಹಾನಿಯಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಕೊಡಗಿನ ಉದ್ದಗಲಕ್ಕೂ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಬಾಂಗ್ಲಾ ಮೂಲದ ಕಾರ್ಮಿಕರು, ಈ ಹಿಂದೆ ಮಾದಾಪುರ ಸಮೀಪದ ಹೊಸತೋಟದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಸಿದ್ದ ತಡಿಯಂಡ ವೀಡ್ ನಝಿರ್, ಆ ಮೊದಲು ಸೋಮವಾರಪೇಟೆ ಪಾಕ್ ಧ್ವಜ ಹಾರಾಡಿದಂತಹ ಘಟನೆಗಳಿಗೆ ಯಾವ ರೈಲ್ವೇ ಮಾರ್ಗ ಕಾರಣವೆಂದು ಪ್ರಶ್ನಿಸಿದರು.

ಕೊಡಗಿನ ಜನತೆಯನ್ನು ದಾರಿ ತಪ್ಪಿಸಲು ಕೆಲವರು ಪರಿಸರವಾದಿಗಳ ಹೆಸರಿನಲ್ಲಿ ಹೋರಾಟ ನಡೆಸುತ್ತಿರುವದು ಏಕೆಂದು ಪ್ರಶ್ನಿಸಿದ ಸಂಸದರು, ಅಭಿವೃದ್ಧಿ ಯೋಜನೆಗಳಿಂದ ಕೊಡಗಿನ ಜನತೆಯ ಹಿತವನ್ನು ಕಾಪಾಡುವದು ಬಿಜೆಪಿಯ ಜವಾಬ್ದಾರಿಯಾಗಿದ್ದು, ಅಪಪ್ರಚಾರ ದಿಂದ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಜಾಥಾ

(ಮೊದಲ ಪುಟದಿಂದ) ನಡೆಸುವವರನ್ನು ಹೆಸರಿಸದೇ ಟೀಕಾ ಪ್ರಹಾರ ನಡೆಸಿದರು.

ಯಾವ ಕಾರಣಕ್ಕೂ ಕುಶಾಲಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೇ ಯೋಜನೆ ಕೇರಳದತ್ತ ಮುಂದುವರಿಯುವದಿಲ್ಲವೆಂದು ಸ್ಪಷ್ಟಪಡಿಸುತ್ತಾ, ಹೆದ್ದಾರಿ ಅಭಿವೃದ್ಧಿಯಿಂದ ಜನರಿಗೆ ಉಪಯೋಗವಾಗಲಿದ್ದು, ಇರುವ ರಸ್ತೆ ವಿಸ್ತರಣೆಯಿಂದ ಮರಗಳ ನಾಶ ಆಗದೆಂದು ಬೊಟ್ಟು ಮಾಡಿದರು.

ಕೊಡಗಿನ ತಮ್ಮ ಆಸ್ತಿಪಾಸ್ತಿಯನ್ನು ಅನ್ಯರಿಗೆ ಮಾರಾಟ ಮಾಡುವ ಬದಲಿಗೆ, ಸ್ವತ್ತನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಸಹಯೋಗ ನೀಡುವ ಮೂಲಕ, ತಾವು ಬೆಳೆದ ಉತ್ಪನ್ನಗಳನ್ನು ಸರಿಯಾಗಿ ಮಾರುಕಟ್ಟೆಗೆ ಒದಗಿಸಲು ಮೂಲಭೂತ ಸೌಲಭ್ಯ ಅವಶ್ಯಕವೆಂದು ಸಂಸದರು ನೆನಪಿಸಿದರು.

ಅಪಪ್ರಚಾರ: ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಸರಕಾರ ಜನತೆಯನ್ನು ದಿಕ್ಕು ತಪ್ಪಿಸುತ್ತಾ, ಕೇಂದ್ರ ಸರಕಾರದ ಯೋಜನೆಗಳನ್ನು ದುರುಪಯೋಗದಲ್ಲಿ ‘ಇಂದಿರಾ ಕ್ಯಾಂಟೀನ್’ಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಂತ್ರಿಮಂಡಲ ಹಗರಣಗಳಲ್ಲಿ ಸಿಲುಕಿ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂಷಿಸಿದರು.

ರಾಜ್ಯ ಬಿಜೆಪಿ ಪ್ರಭಾರಿ ಉದಯಕುಮಾರ್ ಶೇಟ್ಟಿ, ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಬಿಜೆಪಿ ಮಾಜೀ ಜಿಲ್ಲಾಧ್ಯಕ್ಷ ಎಂ.ಪಿ. ಸುಜಾ ಕುಶಾಲಪ್ಪ, ಮಾಜೀ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮೊದಲಾದವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು,

ನಿರ್ಣಯ ಮಂಡನೆ: ಭ್ರಷ್ಟಾಚಾರದೊಂದಿಗೆ ಅನೇಕ ಹಗರಣಗಳಲ್ಲಿ ರಾಜ್ಯ ಸರಕಾರ ತೊಡಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಾಗೂ ಡಿವೈಎಸ್‍ಪಿ ಗಣಪತಿ ಸಂಶಯಾಸ್ಪದ ಸಾವಿನ ಪ್ರಕರಣ ಸಂಬಂಧ ಸಚಿವ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ನಿರ್ಣಯಕೈಗೊಳ್ಳಲಾಯಿತು. ಅಲ್ಲದೆ ಕುಶಾಲನಗರ ತನಕ ರೈಲ್ವೇ ಮಾರ್ಗ, ಡಿವೈಎಸ್‍ಪಿ ಗಣಪತಿ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುವದು ಕೆಎಫ್‍ಡಿ, ಪಿಎಫ್‍ಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ, ಟಿಪ್ಪು ಜಯಂತಿಗೆ ವಿರೋಧ, ಚೀನಾ ವಸ್ತುಗಳ ಬಹಿಷ್ಕಾರದೊಂದಿಗೆ ಆದೇಶದಿಂದ ಗಡಿ ತಂಟೆ ಖಂಡಿಸಿ ನಿರ್ಣಯ ಮಂಡಿಸಲಾಯಿತು. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕಾಂತಿ ಸತೀಶ್ ಹಾಗೂ ವಿ.ಕೆ. ಲೋಕೇಶ್ ನಿರ್ಣಯ ಮಂಡಿಸಿದರು.

ಬಿಜೆಪಿ ವಕ್ತಾರ ರವಿಕಾಳಪ್ಪ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ವಿಭಾಗ ಸಹ ಪ್ರಭಾರಿ ಯತೀಶ್ ಕುಮಾರ್, ಜಿ.ಪಂ. ಮಾಜೀ ಅಧ್ಯಕ್ಷ ಎಸ್.ಬಿ. ರವಿಕುಶಾಲಪ್ಪ, ಪದಾಧಿಕಾರಿಗಳಾದ ರಾಬಿನ್ ದೇವಯ್ಯ ಸೇರಿದಂತೆ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ, ಯುವಮೋರ್ಚಾ ಅಧ್ಯಕ್ಷ ಕಾಳನ ರವಿ ಸಹಿತ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಾಫಿ ಮಮಡಳಿ ಸದಸ್ಯರು ಮತ್ತಿತರರು ಹಾಜರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಸ್ವಾಗತಿಸಿದರು. ಪ್ರಕೋಷ್ಠದ ಸಂಚಾಲಕಿ ಭಾರತೀ ರಮೇಶ್ ಪ್ರಾರ್ಥನೆಯೊಂದಿಗೆ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ವಂದಿಸಿದರು.