ಗೋಣಿಕೊಪ್ಪಲು, ಆ. 26: ಗೋಣಿಕೊಪ್ಪಲಿನಲ್ಲಿ ತಾ.21 ರಂದು ಕುಕ್ಕೆ ವ್ಯಾಪಾರಿ ಹಾಗೂ ಗೂಡ್ಸ್ ಅಟೋ ಮಾಲೀಕ ಎಂ. ರಮೇಶ್ (32) ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಮುಖ ಹಂತಕ ಮತ್ತೋರ್ವ ಕುಕ್ಕೆ ವ್ಯಾಪಾರಿ ನಾರಾಯಣ್ ಎಂಬಾತನನ್ನು ಇಂದು ಪೆÇಲೀಸರು ಮೈಸೂರಿನಲ್ಲಿ ಬೆಳಗ್ಗಿನ ಜಾವ ಬಂಧಿಸಿದ್ದು, ಮತ್ತೋರ್ವ ಆರೋಪಿ ಮನೋಜ್ ಗೋಣಿಕೊಪ್ಪಲಿನಲ್ಲಿ ಸೆರೆಯಾಗಿದ್ದಾನೆ. ಗೋಣಿಕೊಪ್ಪಲು-ಅರುವತ್ತೊಕ್ಕಲು ಮುಖ್ಯರಸ್ತೆಯ ಸಮೀಪದ ಗಿರೀಶ್ ಎಂಬವರಿಗೆ ಸೇರಿದ ನಿವೇಶನಕ್ಕೆ ತೆರಳುವ ನಿರ್ಜನ ರಸ್ತೆಮಾರ್ಗದಲ್ಲಿ ಗೂಡ್ಸ್ ಆಟೋದಲ್ಲಿ ಪಾರ್ಟಿ ಮಾಡುವ ಸೋಗಿನಲ್ಲಿ ಕರೆದೊಯ್ದು ಕುತ್ತಿಗೆ ಸೀಳಿ ಬರ್ಬರವಾಗಿ ಅಂದು ರಾತ್ರಿ 10.10 ಗಂಟೆ ಸಮಯಕ್ಕೆ ಹತ್ಯೆ ಮಾಡಲಾಗಿತ್ತು.

ಗೋಣಿಕೊಪ್ಪಲಿನ ಕುಕ್ಕೆ ವ್ಯಾಪಾರಿಗಳಾದ ವಸಂತಿ ಹಾಗೂ ರಾಜೇಶ್ವರಿ ಎಂಬವರು ಇಲ್ಲಿನ ಗ್ರಾಮ ಪಂಚಾಯಿತಿ ವಾಣಿಜ್ಯ ಸಂಕೀರ್ಣ ಮುಂಭಾಗ ಹಲವು ವರ್ಷಗಳಿಂದ ಕುಕ್ಕೆ ವ್ಯಾಪಾರ

(ಮೊದಲ ಪುಟದಿಂದ) ಮಾಡಿ ಜೀವನ ಸಾಗಿಸುತ್ತಿದ್ದು, ಸುಮಾರು ವರ್ಷಗಳಿಂದಲೂ ವ್ಯಾಪಾರದ ವಿಚಾರವಾಗಿ ತೀವ್ರ ಪೈಪೆÇೀಟಿ ಹಾಗೂ ಸಣ್ಣ ಪುಟ್ಟ ಜಗಳವೂ ನಡೆಯುತ್ತಿತ್ತು. ಈ ಹಿಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇಲ್ಲಿನ 8ನೇ ವಾರ್ಡ್‍ನಿಂದ ರಾಜೇಶ್ವರಿ, ವಸಂತಿ ಅವರ ವಿರುದ್ಧ ಜಯ ಗಳಿಸಿದ್ದರೆ, ಈಚೆಗೆ ನಡೆದ ಗ್ರಾ.ಪಂ.ಚುನಾವಣೆಯಲ್ಲಿ ರಾಜೇಶ್ವರಿ ಪುತ್ರಿ ಸೆಲ್ವಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿ ವಸಂತಿ ಅವರ ಪುತ್ರಿ ಪದ್ಮಿನಿ (ಕಾಂಗ್ರೆಸ್ ಬೆಂಬಲಿತ) ಅವರನ್ನು ಸೋಲಿಸಿ ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು.

ಒಂದೆಡೆ ರಾಜಕೀಯ ಪೈಪೆÇೀಟಿ ಯಲ್ಲಿನ ಮುಖಭಂಗ ಮತ್ತೊಂದೆಡೆ ಕುಕ್ಕೆ ವ್ಯಾಪಾರ ಇತರೆ ವ್ಯವಹಾರದಲ್ಲಿನ ನಷ್ಟ ವಸಂತಿ ಹಾಗೂ ಆಕೆಯ ಪುತ್ರ ನಾರಾಯಣನನ್ನು ಕಂಗೆಡಿಸಿತ್ತು.

ಕುಕ್ಕೆ ವ್ಯಾಪಾರ ವಿಚಾರವಾಗಿ ನಾರಾಯಣನಿಗೂ ಹತ್ಯೆಗೀಡಾದ ರಮೇಶ್ ನಡುವೆಯೂ ಗಲಾಟೆ ಗಳಾಗಿವೆ. ಪೊಲೀಸರಿಗೆ ನಾರಾಯಣ ನೀಡಿರುವ ಹೇಳಿಕೆ ಪ್ರಕಾರ ರಮೇಶ್ ತನ್ನನ್ನು ಮುಗಿಸುವದಾಗಿ ಒಮ್ಮೆ ಬೆದರಿಕೆ ಹಾಕಿದ್ದು, ಇದನ್ನು ಹೀಗೆ ಬಿಟ್ಟರೆ ಸರಿಯಿಲ್ಲ ಎಂದು ತಾನೇ ಹತ್ಯೆ ಮಾಡಲು ಸಂಚು ರೂಪಿಸಿದ ಎನ್ನಲಾಗಿದೆ.

ರಮೇಶ್ ಹತ್ಯೆಗೆ ಮೂರು ತಿಂಗಳ ತಯಾರಿ

ರಮೇಶ್‍ನ ಹತ್ಯೆ ಮಾಡುವ ಮೂಲಕ ರಾಜೇಶ್ವರಿಯ ಮೇಲೆ ಸೇಡು ತೀರಿಸಿಕೊಳ್ಳಲು ಮೂರು ತಿಂಗಳ ಹಿಂದೆಯೇ ಮಲಯಾಳಂ ಮೋಹನ್‍ಲಾಲ್ ನಟನೆಯ ‘ದೃಶ್ಯಂ’ ಸಿನೆಮಾ ಹಾಗೂ ಹಲವು ಹಾಲಿವುಡ್ ಸಿನೆಮಾವನ್ನು ದಿನನಿತ್ಯ ವೀಕ್ಷಣೆ ಮಾಡಿ ಉಪಾಯ ಕಂಡು ಕೊಳ್ಳುತ್ತಿದ್ದುದ್ದಾಗಿಯೂ ನಾರಾಯಣನ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ‘ದೃಶ್ಯಂ’ ಮೂಲ ಮಲಯಾಳ ಚಿತ್ರ ಹಲವು ಭಾಷೆಗಳಿಗೆ ಡಬ್ ಆಗಿದ್ದು, ಕೊಲೆಗಾರನಾಗುವ ನಾಯಕ ಕೊನೆಯವರೆಗೂ ಪೆÇಲೀಸರಿಗೆ ಯಾವದೇ ಸುಳಿವು ನೀಡದೆ ಬಚಾವಾಗುತ್ತಾನೆ. ಇದರಿಂದ ಪ್ರೇರೇಪಣೆ ಪಡೆದ ನಾರಾಯಣ ಹರಿತವಾದ ಚೂರಿಯನ್ನು ತಿಂಗಳ ಹಿಂದೆಯೇ ಸಿದ್ಧತೆ ಮಾಡಿಕೊಳ್ಳುತ್ತಾನೆ.

ರಮೇಶನನ್ನು ಉಪಾಯದಿಂದ ನಿರ್ಜನ ಪ್ರದೇಶಕ್ಕೆ ಕರೆತರಬೇಕು ಹಾಗೂ ಬಿಯರನ್ನು ಮಾತ್ರ ಕುಡಿಯುವ ಆತನಿಗೆ ಮತ್ತೇರುವಂತೆ ಮಾಡಿ ಹತ್ಯೆಮಾಡಬೇಕು ಎಂದು ಸಂಚುರೂಪಿಸುತ್ತಾನೆ. ರಮೇಶನ್ನು ಓಲೈಸಲು ಈ ಹಿಂದೆ ವಾಹನ ತೆರಿಗೆ ಸಂಗ್ರಹಕಾರನಾಗಿದ್ದ ಮನೋಜ್ ಎಂಬ ಸ್ನೇಹಿತನ ಸಹಕಾರ ಬಯಸುತ್ತಾನೆ. ಪೈಟಿಂಗ್ ಕೆಲಸ ನಿರ್ವಹಿಸುವ ಅರುವತ್ತೊಕ್ಕಲುವಿನ ಚಂದ್ರ ಎಂಬವರ ಪುತ್ರ ಮನೋಜ್‍ನನ್ನು ಹತ್ಯೆ ಸಹಕಾರಕ್ಕೆ ಮನವೋಲಿಸುತ್ತಾನೆ.

ನಾರಾಯಣ ಈ ಹಂತದಲ್ಲಿ ಮೂರು-ನಾಲ್ಕು ಬಾರಿ ಮನೋಜ್‍ನೊಂದಿಗೆ ಪಾರ್ಟಿ ನಡೆಸಿ ಹತ್ಯೆಗೆ ಸಿದ್ಧತೆ ಮಾಡಿಕೊಳ್ಳುತ್ತಾನೆ.

ಮೊನ್ನೆ ಮೊನ್ನೆ ಹತ್ಯೆ ನಡೆಯುವ ಮುನ್ನ ವೀರಾಜಪೇಟೆಯಿಂದ ನಾಲ್ಕು ಬಾಟಲಿ ಕಿಂಗ್‍ಫಿಷರ್ ಸ್ಟ್ರಾಂಗ್ ಬಿಯರನ್ನು ನಾರಾಯಣನೇ ತಂದಿದ್ದು ಮನೋಜ್‍ಗಾಗಿ ಒಂದು ಬಾಟಲ್ ಮೆಕ್ಡೋವೆಲ್ ಬ್ರಾಂದಿಯನ್ನು ಗೋಣಿಕೊಪ್ಪಲು ಬೈಪಾಸ್ ರಸ್ತೆಯ ಮದ್ಯದಂಗಡಿಯಿಂದ ಖರೀದಿಸಿ ಇಟ್ಟುಕೊಂಡಿರುತ್ತಾನೆ.

ಘಟನೆಯ ದಿನ ತಾ. 21 ರಂದು ಎಲ್ಲ ಪೂರ್ವ ಸಿದ್ಧತೆಗಳನ್ನು ನಾರಾಯಣ ಮಾಡಿಕೊಳ್ಳುತ್ತಾನೆ. ತನ್ನ ಸಹೋದರಿ ಕಾರನ್ನು ಎರಡು ತಿಂಗಳಿನಿಂದಲೂ ಬಳಸುತ್ತಿದ್ದು, ಹತ್ಯೆಯ ನಂತರ ತಲೆಮರೆಸಿಕೊಳ್ಳಲು ಕಾರನ್ನೇ ಬಳಸುತ್ತಾನೆ. ರಮೇಶ್ ತಾಯಿ ರಾಜೇಶ್ವರಿಯ ಪ್ರಕಾರ ಒಂದು ತಿಂಗಳಿನಿಂದ ಮನೋಜ್, ರಮೇಶ ವ್ಯಾಪಾರ ಮಾಡುವ ಸ್ಥಳಕ್ಕೆ ಬಂದು ಆತ್ಮೀಯ ಒಡನಾಟ ಬೆಳೆಸುತ್ತಾನೆ. ಕುಕ್ಕೆಯನ್ನು ಖರೀದಿಸುವ ನಾಟಕ, ಪ್ರತಿನಿತ್ಯ ಒಮ್ಮೆಯಾದರೂ ಭೇಟಿ ಮಾಡುವದು, ರಾತ್ರಿ ಕರೆದಾಗ ತನ್ನೊಂದಿಗೆ ಬರಲು ಸಿದ್ಧನಿದ್ದಾನೆಯೇ ಎಂಬ ಪರೀಕ್ಷೆಯೂ ಈ ಹಂತದಲ್ಲಿ ನಾರಾಯಣನ ಸೂಚನೆ ಮೇರೆ ಮನೋಜ್ ಚಾಚೂ ತಪ್ಪದೆ ಮಾಡುತ್ತಾನೆ.

ತಾ. 17 ರಂದು ಬೆಂಗಳೂರು ಯುವತಿ ರೇವತಿಯೊಂದಿಗೆ ನಿಶ್ಚಿತಾರ್ಥ ಮುಗಿಸಿ 20 ರಂದು ಬೆಳಿಗ್ಗೆ ಗೋಣಿಕೊಪ್ಪಲಿಗೆ ರಮೇಶ್ ಬರುತ್ತಾನೆ. ಅಂದೇ ರಮೇಶ್‍ನನ್ನು ಪಾರ್ಟಿಗೆ ಕರೆದು ಮುಗಿಸಲು ಮನೋಜ್ ಮತ್ತು ನಾರಾಯಣ್ ನಿರ್ಧರಿಸುತ್ತಾರೆ. ಆದರೆ, ಅಂದು ಸುಸ್ತಾಗಿದ್ದೇನೆ ಎಂದು ಹೇಳಿ ರಮೇಶ್ ನಿರಾಕರಣೆ ಹಿನ್ನೆಲೆ ಹತ್ಯೆ ಸಂಚು ಒಂದು ದಿನ ಮುಂದಕ್ಕೆ ಹೋಗುತ್ತದೆ.

ಸೋಮವಾರ ದಿನ ಕುಕ್ಕೆ ಅಂಗಡಿಯಲ್ಲಿ ರಾಜೇಶ್ವರಿ ಇರುವದಿಲ್ಲ. ಪುತ್ರಿ ಸೆಲ್ವಿಗೆ ಮನೆಯ ಬೀಗದ ಕೈಕೊಡಲು ತೆರಳಿರುತ್ತಾರೆ. ಇದೇ ಸಂದರ್ಭ ಸಾಧಿಸಿ ಮನೋಜ್ ರಮೇಶ್‍ನೊಂದಿಗೆ ಸುಮಾರು 8 ಗಂಟೆಯವರೆಗೂ ಕುಳಿತು ಅಂಗಡಿ ಮುಚ್ಚುವ ಸಂದರ್ಭ ಕುಕ್ಕೆಯನ್ನೆಲ್ಲಾ ತೆಗೆದುಕೊಟ್ಟು ಸಹಕರಿಸುವ ನಾಟಕವಾಡುತ್ತಾನೆ.

ಈ ಹಂತದಲ್ಲಿ 2ನೇ ಬ್ಲಾಕ್ ನಲ್ಲಿರುವ ನಾರಾಯಣನ ಮನೆಗೆ ತೆರಳಿ ಬ್ರಾಂದಿ ಕುಡಿದು ಅರುವತ್ತೊಕ್ಕಲು ರಸ್ತೆಯಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ಯಲು ಉಪಾಯ ಸಿದ್ಧವಾಗುತ್ತದೆ. ಜತೆಗೆ ಪಾರ್ಟಿ ಮಾಡಲು ಹಣಬೇಕೆಂದು ನಾರಾಯಣನಲ್ಲಿ ಸುಮಾರು ರೂ.3 ಸಾವಿರ ಮೊತ್ತವನ್ನು ಮನೋಜ್ ಹೊಂದಿಕೊಳ್ಳುತ್ತಾನೆ. ಇತ್ತ 8 ಗಂಟೆಯ ನಂತರ ಮಾರುಕಟ್ಟೆ ಪ್ರದೇಶದಲ್ಲಿ ನಿಲ್ಲಿಸಿದ್ದ ಗೂಡ್ಸ್ ಅಟೋದಲ್ಲಿಯೇ ಪಾರ್ಟಿಯ ನೆಪದಲ್ಲಿ ಬೈಪಾಸ್ ರಸ್ತೆಗೆ ಕರೆದೊಯ್ಯಲಾಗುತ್ತದೆ. ನಾಲ್ಕು ಬಾಟಲ್ ಬಿಯರ್ ಹಾಗೂ ಒಂದು ಬಾಟಲ್ ಬ್ರಾಂದಿಯನ್ನು ಬ್ಯಾಗಿನಲ್ಲಿ ಮನೋಜ್ ಇಟ್ಟುಕೊಳ್ಳುತ್ತಾನೆ.

ರಾತ್ರಿ 8.30ರ ಸುಮಾರಿಗೆ ಮನೋಜ್ ಗೂಡ್ಸ್ ಅಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗುತ್ತಾನೆ. ಮೂರು ಬಾಟಲ್ ಬಿಯರ್ ಕುಡಿದ ನಂತರ ರಮೇಶ್‍ನನ್ನು ಮುಗಿಸಲು ನಿರ್ಧಾರ ವಾಗುತ್ತದೆ. ಆದರೆ, ಬಿಯರ್ ಕುಡಿಯುವ ಸಂದರ್ಭ ಅತ್ತ ಬೆಂಗಳೂರಿನಿಂದ ಭಾವಿಪತ್ನಿ ಫೆÇೀನ್ ಸಂಭಾಷಣೆ ಹಿನ್ನೆಲೆ ಒಂದು ಬಾಟಲ್ ಬಿಯರ್ ಕೂಡಾ ಖಾಲಿಯಾಗಿ ರುವದಿಲ್ಲ. ಆಗಿಂದಾಗ್ಗೆ ಗೂಡ್ಸ್ ಅಟೋದಿಂದ ಕೆಳಗಿಳಿಯುವ ಮನೋಜ್ ಇತ್ತ ನಾರಾಯಣನಿಗೆ ರಮೇಶ್ ಚಲನ ವಲನದ ಬಗ್ಗೆ ಮಾಹಿತಿ ನೀಡುತ್ತಾನೆ.

ನಾರಾಯಣ ಹುಂಡೈ ಶೋ ರೂಂ ಮುಂಭಾಗ ಕಾರು ನಿಲ್ಲಿಸಿ, ತನ್ನ ಬೈಕ್‍ನಲ್ಲಿ ಚೂರಿಯೊಂದಿಗೆ ಘಟನಾ ಸ್ಥಳಕ್ಕೆ ಬರುತ್ತಾನೆ. ಡ್ರೈವರ್ ಸೀಟ್‍ನಲ್ಲಿಯೇ ಕಿಟಕಿ ತೆಗೆದು ರಮೇಶ್ ಫೆÇೀನ್ ಸಂಭಾಷಣೆಯಲ್ಲಿ ನಿರತನಾಗಿರುವ ಹಿನ್ನೆಲೆ ಹಿಂಬದಿಯಿಂದಲೇ ಹತ್ಯೆಗೆ ಸಿದ್ಧತೆ ಮಾಡಿಕೊಳ್ಳುತ್ತಾನೆ. ಕಾರಿನಲ್ಲಿ ಪರಾರಿಯಾಗಲು ಹಣ ಹಾಗೂ ಬಟ್ಟೆಗಳನ್ನು ನಾರಾಯಣ ಈ ಹಂತದಲ್ಲಿ ಸಿದ್ಧತೆ ಮಾಡಿ ಕೊಂಡಿದ್ದುದಾಗಿಯೂ ಪೆÇಲೀಸರಿಗೆ ಮಾಹಿತಿ ಸಿಕ್ಕಿದೆ. ಬಿಯರ್ ಅನ್ನು ಕುಡಿಯುವ ಸಂದರ್ಭ ನಾರಾಯಣ ಚೂರಿಯನ್ನು ಮೊದಲಿಗೆ ರಮೇಶ್ ಎದೆ ಭಾಗಕ್ಕೆ ಹಾಕುತ್ತಾನೆ. ಈ ಹಂತದಲ್ಲಿ ಗಲಿಬಿಲಿಗೊಂಡ ರಮೇಶ್ ಎರಡೂ ಕೈಯಲ್ಲಿ ಚೂರಿಯನ್ನು ಹಿಡಿದುಕೊಳ್ಳುತ್ತಾನೆ. ಆದರೆ, ರಮೇಶ್‍ಗಿಂತಲೂ ಶಕ್ತಿಶಾಲಿಯಾದ ನಾರಾಯಣ್ ಚೂರಿಯನ್ನು ಎಳೆದು ಕೈ. ಮುಖ, ಸಿಕ್ಕ ಸಿಕ್ಕ ಕಡೆಗೆ ಇರಿಯತೊಡಗುತ್ತಾನೆ. ಇದೇ ಸಂದರ್ಭ ಮನೋಜ್ ಸಹಕಾರವೂ ಸಿಕ್ಕಿ ರಮೇಶ್‍ನನ್ನು ಎಳೆದು ಕುತ್ತಿಗೆಯನ್ನು ಕುಯ್ಯಲಾಗುತ್ತದೆ. ಮಳೆಯೂ ಜೋರಾಗಿ ಬರುತ್ತಿದ್ದ ಹಿನ್ನೆಲೆ ಬೈಪಾಸ್ ರಸ್ತೆಯಲ್ಲಿ ಜನರ ಓಡಾಟವಿದ್ದರೂ ಕತ್ತಲೆಯಲ್ಲಿ ನಡೆಯುತ್ತಿರುವ ಕೃತ್ಯ ದಾರಿಹೋಕರಿಗೆ ಗೊತ್ತಾಗುವದಿಲ್ಲ. ಕುತ್ತಿಗೆ ಕುಯ್ದರೂ ಮತ್ತೆ ರಮೇಶ್ ಜೀವ ಒದ್ದಾಟ ನಡೆಸಿದ ಹಿನ್ನೆಲೆ ಮತ್ತೆ ಹಿಂತಿರುಗಿ ಬಂದು ಚೂರಿಯಲ್ಲಿ ಆಳವಾಗಿ ಕುತ್ತಿಗೆ ಭಾಗವನ್ನು ಸೀಳುತ್ತಾನೆ.

ಚೂರಿಯನ್ನು ತೆಗೆದುಕೊಂಡು ಮನೋಜ್‍ನನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಕಾರು ನಿಲ್ಲಿಸಿದ ಸ್ಥಳಕ್ಕೆ ಇಬ್ಬರೂ ಬರುತ್ತಾರೆ. ಮನೋಜ್‍ಗೆ ತನ್ನ ಬೈಕನ್ನು ನೀಡಿ ಕಾರನ್ನು ತಿತಿಮತಿಯತ್ತ ಚಾಲಿಸುತ್ತಾನೆ. ಪೆÇಲೀಸ್ ಮೂಲದ ಪ್ರಕಾರ ಕೇವಲ ಮೂರು ನಿಮಿಷದ ಅವಧಿಯಲ್ಲಿ ರಮೇಶ್‍ನನ್ನು ಹತ್ಯೆ ಮಾಡಲಾಗಿದೆ.

ಕಾರನ್ನು ತಿತಿಮತಿಯಿಂದ ಕೋಣನಕಟ್ಟೆ-ಬಾಳೆಲೆ ರಸ್ತೆ ಕಡೆ ತಿರುಗಿಸಿ ಅಲ್ಲಿಯೇ ರಸ್ತೆಯ ಗುಂಡಿಯಲ್ಲಿ ನಿಂತಿದ್ದ ನೀರಿನಲ್ಲಿ ಚಾಕು ಹಾಗೂ ರಕ್ತದ ಕಲೆಗಳನ್ನು ತೊಳೆದು ಬಟ್ಟೆ ಬದಲಾಯಿಸಿಕೊಳ್ಳುವ ನಾರಾಯಣ ತಿತಿಮತಿ, ಪಂಚವಳ್ಳಿ, ಪಿರಿಯಾಪಟ್ಟಣ ಮಾರ್ಗ ಮೂಲಕ ಹುಣಸೂರುವಿಗೆ ತೆರಳಿ ಮೈಸೂರು ರೈಲ್ವೇ ನಿಲ್ಧಾಣ ತಲುಪುತ್ತಾನೆ. ಕಾರನ್ನು ಅಲ್ಲಿ ಪಾರ್ಕ್ ಮಾಡಿ ಅಟೋ ಮೂಲಕ ಬಸ್ ನಿಲ್ದಾಣಕ್ಕೆ ತೆರಳಿ ಬೆಂಗಳೂರು, ಮತ್ತೆ ಅಲ್ಲಿಂದ ಚೆನ್ನೈನತ್ತ ಪ್ರಯಾಣ ಬೆಳಿಸಿರುವದಾಗಿ ಪೆÇಲೀಸರಿಗೆ ಮಾಹಿತಿ ಲಭ್ಯವಾಗುತ್ತದೆ.

ಇತ್ತ ಮನೋಜ್ ಗೂಡ್ಸ್ ಅಟೋವನ್ನು ಎಳೆದು ತರಲು ರೇಣು ಎಂಬವರನ್ನು ಹತ್ಯೆಯ ನಂತರ ಕರೆತರಲು ಪ್ರಯತ್ನ ಪಡುವದು, ಹಲವರ ಭೇಟಿ, ಬೆಳಿಗ್ಗೆ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣಗೆ ದೂರವಾಣಿ ಕರೆ ಮಾಡುವದು ಮುಂತಾದ ಸಂಶಯಾತ್ಮಕ ವರ್ತನೆಯಿಂದಾಗಿ ಮೊದಲಿಗೆ ಮನೋಜ್ ಪೆÇಲೀಸರ ಅತಿಥಿಯಾಗುತ್ತಾನೆ.

ಮನೋಜ್ ಮತ್ತು ನಾರಾಯಣ್ ಫೆÇೀನ್ ಸಂಭಾಷಣೆಯಿಂದಾಗಿ ನಾರಾಯಣ ಕೃತ್ಯ ಮೊದಲೇ ತಿಳಿದುಹೋಗುತ್ತದೆ. ಇತ್ತ ನಾರಾಯಣ ಕೃತ್ಯಕ್ಕೆ ಬಳಸಿದ ಚೂರಿಯನ್ನೂ ದಾರಿಯಲ್ಲಿ ಬಿಸುಟು, ಮೂರು ಸಿಮ್ ಇರುವ ಎರಡು ಮೊಬೈಲನ್ನು ಬೇರ್ಪಡಿಸಿ ಆನೆಚೌಕೂರು ಸಮೀಪ ಬಿಸಾಕುತ್ತಾನೆ. ಅಲ್ಲಿಗೆ ನಾರಾಯಣನ ಸಂಪರ್ಕ ಪೆÇಲೀಸರಿಗೆ ಕಷ್ಟ ಸಾಧ್ಯವಾಗುತ್ತದೆ.

ನಾರಾಯಣನ ಕಟ್ಟಡ ನಿರ್ಮಾಣ ಮಾಡಿರುವ ಇಂಜಿನಿಯರ್ ಸುರೇಶ್‍ನ ಸಂಪರ್ಕದಲ್ಲೆಲ್ಲೋ ನಾರಾಯಣ ಸಿಗುವದರಿಂದ ಪೆÇಲೀಸರಿಗೆ ನಾರಾಯಣ ಸ್ಥಳದ ವಿವರ ತಿಳಿದುಬರುತ್ತದೆ. ಇಂದು ಬೆಳಗ್ಗಿನ ಜಾವ ಚೆನ್ನೈನಿಂದ ವಾಪಾಸ್ಸಾಗುವ ಸಂದರ್ಭ ಮೈಸೂರಿನಲ್ಲಿ ನಾರಾಯಣ ಪೆÇಲೀಸರ ಸೆರೆಯಾಗುತ್ತಾನೆ.

ಗೋಣಿಕೊಪ್ಪ ಭಾಗದ ಸಾರ್ವಜನಿಕರಲ್ಲಿ ತಲ್ಲಣ ಉಂಟು ಮಾಡಿದ್ದ ಈ ಕೊಲೆ ಪ್ರಕರಣದ ಆರೋಪಿತರನ್ನು ಎಸ್.ಪಿ. ಪಿ. ರಾಜೇಂದ್ರ ಪ್ರಸಾದ್ ಹಾಗೂ ವೀರಾಜಪೇಟೆ ಉಪವಿಭಾಗದ ಉಪಾಧೀಕ್ಷಕ ನಾಗಪ್ಪರವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ಸಿ.ಪಿ.ಐ. ಪಿ.ಕೆ. ರಾಜುರವರ ನೇತೃತ್ವದ ತಂಡ ಬಂಧಿಸಿದೆ.

ಕಾರ್ಯಾಚರಣೆಯಲ್ಲಿ ಗೋಣಿಕೊಪ್ಪ ವೃತ್ತ ಸಿ.ಪಿ.ಐ. ಪಿ.ಕೆ. ರಜು, ಗೋಣಿಕೊಪ್ಪ ಪಿ.ಎಸ್.ಐ. ಹೆಚ್.ವೈ. ರಾಜು, ಪೊನ್ನಂಪೇಟೆ ಪಿ.ಎಸ್.ಐ. ಬಿ.ಜಿ. ಮಹೇಶ್ ಹಾಗೂ ಸಿಬ್ಬಂದಿಗಳಾದ ಕೃಷ್ಣ, ಮಹಮದ್ ಅಲಿ, ಎಂ.ಡಿ. ಮನು, ಸುರೇಂದ್ರ, ಪೂವಣ್ಣ, ಅಬ್ದುಲ್ ಮಜೀದ್, ಬಿ.ಟಿ. ಮಂಜುನಾಥ್, ಹರೀಶ್ ಕುಮಾರ್, ಮೋಹನ್, ಕೃಷ್ಣಮೂರ್ತಿ, ಪುಟ್ಟರಾಜು, ರಂಜಿತ್, ಶೇಖರ್, ಚಾಲಕ ಕೃಷ್ಣಪ್ಪ ಹಾಗೂ ಜಿಲ್ಲಾ ಸಿಡಿಆರ್ ಘಟಕದ ಸಿಬ್ಬಂದಿ ರಾಜೇಶ್ ಹಾಗೂ ಗಿರೀಶ್‍ರವರು ಪಾಲ್ಗೊಂಡಿದ್ದರು.

ವರದಿ: ಟಿ.ಎಲ್. ಶ್ರೀನಿವಾಸ್