ಶ್ರೀಮಂಗಲ, ಆ. 26: ಕಾಫಿ ಬೆಳೆಗಾರರು ವೈಜ್ಞಾನಿಕ ರೀತಿಯಲ್ಲಿ ಕ್ರಮಬದ್ಧವಾಗಿ ಬೆಳೆದರೆ ಮಾತ್ರ ಲಾಭಪಡೆಯಲು ಸಾಧ್ಯ. ಅಗತ್ಯ ಮಾಹಿತಿ ನೀಡಲು ಕಾಫಿ ಮಂಡಳಿ ಸದಾ ಸಿದ್ಧವಿದೆ ಎಂದು ಶ್ರೀಮಂಗಲ ಕಾಫಿ ಮಂಡಳಿಯ ವಿಸ್ತರಣಾಧಿಕಾರಿ ಕೆ.ಆರ್. ಗಣೇಶ್ ತಿಳಿಸಿದರು.

ಶ್ರೀಮಂಗಲ ಕಾಫಿ ಮಂಡಳಿಯ ಆಶ್ರಯದಲ್ಲಿ ಹುದಿಕೇರಿ ತ್ರಿವೇಣಿ ಸ್ವಸಹಾಯ ಸಂಘದ ಸಭಾಂಗಣದಲ್ಲಿ ನಡೆದ ಕಾಫಿ ಬೆಳೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಾಫಿ ಬೆಳೆಯಲ್ಲಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯೆಂದರೆ ಕಾಂಡ ಕೊರೆತವಾಗಿದ್ದು, ಇದನ್ನು ಸುಲಭ ವಿಧಾನದಲ್ಲಿ ನಿರ್ಮೂಲನೆ ಮಾಡಬಹುದು.

ಕೊರೆತಕ್ಕೆ ಒಳಗಾಗಿರುವ ಕಾಫಿ ಕೊಂಬೆಗಳನ್ನು ಒಂದು ಅಡಿ ಅಂತರದಲ್ಲಿ ಕತ್ತರಿಸಿ ಹುಳುಗಳನ್ನು ನಾಶ ಪಡಿಸಬೇಕು ಎಂದರು. ಕಾಫಿ ಮಂಡಳಿ ಅಧಿಕಾರಿ ಎಲ್ಹೋಸ್ ಅಬ್ರಾಹಾಂ ಮಾತನಾಡಿ, ಕಾಂಡ ಕೊರೆಯುವ ಹುಳುಗಳನ್ನು ನಾಶ ಮಾಡುವದರ ಜೊತೆಗೆ ಕಾಲಕಾಲಕ್ಕೆ ಅನವಶ್ಯಕ ಬೆಳೆದಿರುವ ಚಿಗುರನ್ನು ತೆಗೆದು ಸಮರ್ಪಕ ರೀತಿಯಲ್ಲಿ ಉತ್ತಮ ಗೊಬ್ಬರವನ್ನು ಗಿಡಕ್ಕೆ ಪೂರೈಸುವದು ಕೂಡ ಅಗತ್ಯವಾಗಿದ್ದು, ಬೆಳೆಗಾರರು ಕಾಫಿ ಮಂಡಳಿಯಿಂದ ಕಾಲಕಾಲಕ್ಕೆ ಮಾಹಿತಿ ಪಡೆದು ಉತ್ತಮ ನಿರ್ವಹಣೆ ಮಾಡಿ, ಉತ್ತಮ ಫಸಲು ಪಡೆಯಲು ಕ್ರಮ ಕೈಗೊಳ್ಳಬೇಕು ಎಂದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಧಿಕಾರಿಗಳಾದ ಕೆ.ಆರ್. ಗಣೇಶ್ ಹಾಗೂ ಎಲ್ಹೋಸ್ ಅಬ್ರಾಹಾಂ ಕಾಫಿ ಸಸಿ ಮಡಿ ತಯಾರಿಸುವದರಿಂದ ಫಸಲು ಕೊಯ್ಲಿನವರೆಗೆ ಸಮಗ್ರ ಮಾಹಿತಿ ನೀಡಿದರು.

ಈ ಸಂದರ್ಭ ಪ್ರಮುಖ ಕಾಫಿ ಬೆಳೆಗಾರ ಚಂಗುಲಂಡ ಸೂರಜ್, ಮಂಡಂಗಡ ಅಶೊಕ್, ಐಪುಮಾಡ ರೋನಿ, ಚಂಗುಲಂಡ ಈಶ್ ಅಯ್ಯಪ್ಪ, ಮಧು ತಮ್ಮಯ್ಯ, ಎಂ.ಎ ರಮೇಶ್, ಕೇಚೆಟ್ಟಿರ ಅರುಣ್, ಚಂಗುಲಂಡ ಅಜಿತ್ ಅಯ್ಯಪ್ಪ, ಕರುಂಬಯ್ಯ ಮುಂತಾದವರು ಸಂವಾದದಲ್ಲಿ ಭಾಗವಹಿಸಿದ್ದರು.