ಮಡಿಕೇರಿ, ಆ. 26: ಪ್ರಸಕ್ತ ಸಾಲಿನಲ್ಲಿ ಹವಾಮಾನ ವ್ಯತ್ಯಾಸದಿಂದ ಜಿಲ್ಲೆಯಲ್ಲಿ ಮುಂಗಾರು ಕೃಷಿ ಭತ್ತದ ನಾಟಿಕಾರ್ಯ ತೀವ್ರ ಹಿನ್ನಡೆಯೊಂದಿಗೆ 30,500 ಹೆಕ್ಟೇರ್ ಗುರಿ ಹೊಂದಿದ್ದರೂ, ಕೇವಲ 18772 ಹೆಕ್ಟೇರ್ ನಾಟಿಯೊಂದಿಗೆ 11726 ಹೆಕ್ಟೇರ್‍ನಷ್ಟು ಹಿನ್ನೆಡೆ ಕಂಡುಬಂದಿದೆ. ಅಲ್ಲದೆ 3590 ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆಯಾಗಿದ್ದು, ಭತ್ತದ ನಾಟಿ ಮುಂದುವರಿಯುವ ನಿರೀಕ್ಷೆ ಹೊಂದಲಾಗಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರಮೇಶ್ ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷದಲ್ಲಿ ಕೃಷಿಗೆ ಪ್ರೋತ್ಸಾಹಿಸಲು ರೈತರಿಗೆ ಸಹಾಯಧನದಲ್ಲಿ ಕೃಷಿ ಪರಿಕರಗಳು ಮತ್ತು ಕೃಷಿ ಕಾರ್ಮಿಕರ ಕೊರತೆ ನೀಗಿಸಲು ಆಧುನಿಕ ಕೃಷಿ ಉಪಕರಣ ಬಳಸಿ ಕೃಷಿ ಮಾಡಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ರೈತರಿಗೆ ಸಹಾಯಧನದಲ್ಲಿ ಕೃಷಿ ಭತ್ತ ಮತ್ತು ಮುಸುಕಿನ ಜೋಳದ ಬಿತ್ತನೆ ಬೀಜ, ಹಸಿರೆಲೆ ಗೊಬ್ಬರದ ಬೀಜ, ಡೋಲೋಮೈಟ್ (ಕೃಷಿ ಸುಣ್ಣ) ಎರೆಗೊಬ್ಬರ, ಸಿಟಿ ಕಾಂಪೋಸ್ಟ್, ಸಾವಯವ ಗೊಬ್ಬರ ಮತ್ತು ಲಘುಪೋಷಕಾಂಶಗಳನ್ನು ವಿತರಿಸಲಾಗುತ್ತಿದೆ. ಕೃಷಿ ಉಪಕರಣಗಳಾದ ಸಣ್ಣ ಟ್ರ್ಯಾಕ್ಟರ್ ಪವರ್ ಟಿಲ್ಲರ್, ನಾಟಿಯಂತ್ರ, ಸ್ಪ್ರೇಯರ್ಸ್‍ಗಳನ್ನು ವಿತರಿಸುವ ಗುರಿ ಹೊಂದಲಾಗಿದ್ದು ಇದುವರೆಗೆ 5 ಸಣ್ಣ ಟ್ರ್ಯಾಕ್ಟರ್, 23 ಪವರ್ ಟಿಲ್ಲರ್, 11 ಭೂಮಿ ಸಿದ್ಧಪಡಿಸುವ ಉಪಕರಣ, 115 ಸ್ರ್ಪೇಯರ್ಸ್, 8 ಡೀಸೆಲ್ ಪಂಪ್‍ಸೆಟ್‍ಗಳನ್ನು ವಿತರಿಸಲಾಗಿದ್ದು, ವಿತರಣೆ ಕಾರ್ಯ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಗೆ ಹೊಸದಾಗಿ ಕೃಷಿ ಭಾಗ್ಯ ಯೊಜನೆ ನೀಡಲಾಗಿದ್ದು, ಈ ಯೋಜನೆಯಲ್ಲಿ ರೈತರಿಗೆ ಕ್ಲಿಷ್ಟ ಪರಿಸ್ಥಿತಿಯಲ್ಲಿ ಬೆಳೆಗೆ ನೀರು ಒದಗಿಸಲು ಸಾಮಾನ್ಯ ವರ್ಗದ ರೈತರಿಗೆ ಶೇ. 80 ರ ಸಹಾಯಧನದಲ್ಲಿ, ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ರೈತರಿಗೆ ಶೇ.90ರ ಸಹಾಯಧನದಲ್ಲಿ ಕೃಷಿ ಹೊಂಡಗಳ ನಿರ್ಮಾಣ, ಕೃಷಿ ಹೊಂಡಗಳಲ್ಲಿ ಸಂಗ್ರಹಿಸಿದ ನೀರನ್ನು ಮೇಲೆತ್ತಲು 5 ಎಚ್.ಪಿ ಡೀಸೆಲ್ ಪಂಪ್‍ಸೆಟ್‍ಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ.50ರ ಸಹಾಯಧನ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ರೈತರಿಗೆ ಶೆ.90ರ ಸಹಾಯಧನ ನೀಡಲಾಗುವದು. ನೀರಿನ ಮಿತ ಬಳಕೆಗಾಗಿ ಎಲ್ಲಾ ವರ್ಗಗಳ ರೈತರಿಗೆ ಶೇ.90ರ ಸಹಾಯಧನದಲ್ಲಿ ತುಂತುರು ನೀರಾವರಿ ಘಟಕಗಳನ್ನು ವಿತರಿಸಲಾಗುವದು. ಈಗಾಗಲೇ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಳೆಗಾಲ ಮುಗಿದ ತಕ್ಷಣ ಕೃಷಿ ಹೊಂಡಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವದು ಎಂದು ಕೃಷಿ ತಾಂತ್ರಿಕ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಶೇ. 90 ಸಹಾಯಧನದಲ್ಲಿ ತುಂತುರು ನೀರಾವರಿ ಯೋಜನೆಗೆ ಅರ್ಜಿ

ಕೃಷಿ ಹೊಂಡ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಇಲಾಖೆಯಿಂದ ರೈತರಿಗೆ ಅಗತ್ಯ ನೆರವು ಕಲ್ಪಿಸಲಾಗುವದು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮಳೆ ವಿವರ

ಜಿಲ್ಲೆಯಲ್ಲಿ ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ 61.13 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ವೇಳೆಗೆ 59.01 ಇಂಚು ದಾಖಲಾಗಿತ್ತು. ಮಡಿಕೇರಿ ತಾಲೂಕಿಗೆ ಪ್ರಸಕ್ತ 87.45 ಇಂಚು ಹಾಗೂ ಕಳೆದ ವರ್ಷ 89.24 ಇಂಚು ಮಳೆಯಾಗಿತ್ತು.

ವೀರಾಜಪೇಟೆ ತಾಲೂಕಿಗೆ ಪ್ರಸಕ್ತ ವರ್ಷದಲ್ಲಿ ಸರಾಸರಿ 48.14 ಇಂಚು ಹಾಗೂ ಕಳೆದ ಸಾಲಿನಲ್ಲಿ ಈ ಅವಧಿಗೆ 41.25 ಇಂಚು ಮಳೆ ದಾಖಲಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಪ್ರಸಕ್ತ 47.81 ಇಂಚು ಹಾಗೂ ಹಿಂದಿನ ವರ್ಷ 46.54 ಇಂಚು ಮಳೆಯಾಗಿತ್ತು.