ಕರಿಕೆ, ಆ. 26: ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಹಾಗೂ ರಾಜೀವ್ ಗಾಂಧಿಯವರ ಜನ್ಮ ಸಂಸ್ಮರಣೆ ಕಾರ್ಯಕ್ರಮ ಮತ್ತು ಕರಿಕೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವು ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಿಕೆ ವಲಯ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ದೇವರಾಜ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಕರಿಕೆ ಗ್ರಾಮದಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ನಂತರ ಹಲವು ಅಭಿವೃದ್ಧಿ ಕೆಲಸಗಳು ನಡೆದಿದ್ದು, ಗ್ರಾಮದಲ್ಲಿ ನೈಸರ್ಗಿಕ ಕುಡಿಯುವ ನೀರು ಹಾಗೂ ಬಸ್ ನಿಲ್ದಾಣ ನಿರ್ಮಿಸಲು ಸರಕಾರದ ಗಮನ ಸೆಳೆಯುವದಾಗಿ ಭರವಸೆ ನೀಡಿದರು. ಗ್ರಾಮದ ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸಹಕಾರ ನೀಡಬೇಕು ಎಂದರು.

ಸಭೆ ಪ್ರಾರಂಭಕ್ಕೆ ಮೊದಲು ಪಂಚಾಯಿತಿ ಕಚೇರಿಯಿಂದ ಸಭಾ ಭವನದವರೆಗೆ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಜಿಲ್ಲಾ ಪದಾಧಿಕಾರಿಗಳನ್ನು ಮೆರವಣಿಗೆಯಲ್ಲಿ ಕರೆದೊಯ್ದರು. ಸಭೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಅರಣ್ಯ ನಿಗಮದ ಅಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಟಿ.ಪಿ. ರಮೇಶ್, ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ತೆನ್ನೀರ ಮೈನಾ, ಯುವ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷ ಹನೀಫ್, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ, ನೆರವಂಡ ಉಮೇಶ್, ಬೇಕಲ್ ಹರಿಪ್ರಸಾದ್ ಸೇರಿದಂತೆ ಇತರ ಪ್ರಮುಖರು, ಪಕ್ಷದ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬೇಕಲ್ ರಮಾನಾಥ ಕಾರ್ಯಕ್ರಮ ನಿರೂಪಿಸಿದರು.