ಮಡಿಕೇರಿ, ಆ. 26: ವೇದ ಬಂದಿತ..., ಆದಿಪೂಜಿತ ವಿಘ್ನನಿವಾರಕ ನಿನಾಯಕನನ್ನು ಆರಾದಿಸುವಂತಹ ಗಣೇಶ ಚತುರ್ಥಿಯನ್ನು ಜಿಲ್ಲೆಯಾದ್ಯಂತ ಭಕ್ತ ವೃಂದ ಸಡಗರ - ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಎಲ್ಲೆಡೆ ಗಣಪತಿ ಬಪ್ಪ ಮೋರಿಯಾ... ಜಯ ಘೋಷ ಮೊಳಗಿತು. ಜಿಲ್ಲೆಯ 536 ಕಡೆಗಳಲ್ಲಿ ಸಾರ್ವಜನಿಕ ವಿನಾಯಕನ ಆರಾಧನೆ ನಡೆದಿದ್ದು, ಪ್ರಥಮ ದಿನ ಮಡಿಕೇರಿ ನಗರ ಸೇರಿಂದತೆ ಜಿಲ್ಲೆಯಲ್ಲಿ 75 ಉತ್ಸವ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.ಗಣಹೋಮ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಸಾಂಸ್ಕøತಿಕ ಕಾರ್ಯಕ್ರಮಗಳು, ಗ್ರಾಮೀಣ ಕ್ರೀಡೆಗಳೊಂದಿಗೆ ವಿನಾಯಕನ ಉತ್ಸವವನ್ನು ಆಚರಿಸಿದರು. ಜಿಲ್ಲೆಯ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗಗಳಲ್ಲಿಯೂ ಗಣೇಶೋತ್ಸವದ ಸಂಭ್ರಮ ಮನೆ ಮಾಡಿತ್ತು. ದೇವಾಲಯಗಳಲ್ಲಿ ಶ್ರೀ ಗಣಪತಿಗೆ ವಿಶೇಷ ಪೂಜೆ, ಹೋಮ, ಹವನಗಳು ನಡೆದವು.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇತಿಹಾಸ ಪ್ರಸಿದ್ಧ ಪವಿತ್ರ ಕ್ಷೇತ್ರ ಶ್ರೀ ಕೋಟೆ ಮಹಾಗಣಪತಿ ಸನ್ನಿಧಿಯಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ತಾ. 24ರಂದು ಗೌರಿಪೂಜೆ, 25ರಂದು ಬೆಳಿಗ್ಗೆಯಿಂದಲೇ ಗುರು ಗಣಪತಿ ಪೂಜೆ ಪುಣ್ಯಾಹಃ ಸಂಕಲ್ಪ ಮಹಾಗಣಪತಿ ಹೋಮ, ಪಂಚವಿಂಶತಿ ಸ್ಥಾಪನೆ, ತತ್ವಕಲಾ ಹೋಮ, ಶಾಂತಿ ಹೋಮ, ಕಲಶಾಭಿಷೇಕ, ಮಹಾಪೂಜೆ ನಡೆಯಿತು. ರಾತ್ರಿ 8 ಗಂಟೆವರೆಗೆ ದೇವರ ದರ್ಶನ ಜರುಗಿತು.

ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿಯೂ ಸಾಮೂಹಿಕ ಗಣ ಹೋಮ ಸೇರಿದಂತೆ ಹಲವು ಧಾರ್ಮಿಕ ಕೈಂಕರ್ಯಗಳು ಜರುಗಿದವು. ನಗರದ ಶಾಂತಿನಿಕೇತನ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿಯನ್ನು ಸೆ. 6 ತನಕ ಪೂಜಿಸಿ ಅಂದು ಅಲಂಕೃತ ಮಂಟಪದಲ್ಲಿ ಇರಿಸಿ ನಗರದ ಮುಖ್ಯ ರಸ್ತೆಗಳಲಿ ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜಿಸಲಾಗುವದು. ಬ್ರಾಹ್ಮಣರ ಬೀದಿಯ ಓಂಕಾರ ಯುವ ವೇದಿಕೆ ವತಿಯಿಂದ ಪ್ರತಿಷ್ಠಾಪಿಸಿದ ಮೂರ್ತಿಯನ್ನು ತಾ. 29ರಂದು ಮಧ್ಯಾಹ್ನ 12 ಗಂಟೆ ಬಳಿಕ ಪುಷ್ಪಾಲಂಕೃತ ಮಂಟಪದಲ್ಲಿ ಇರಿಸಿ ಮೆರವಣಿಗೆ ಬಳಿಕ ವಿಸರ್ಜಿಸ ಲಾಗುವದು. ಮಡಿಕೇರಿ ನಗರದಲ್ಲಿ ಮೂವತ್ತಕ್ಕೂ ಅಧಿಕ ಕಡೆ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಚತುರ್ಥಿಯ ದಿನವೇ ನಗರ ವ್ಯಾಪ್ತಿಯಲ್ಲಿ ಸುಮಾರು 8 ಕಡೆ ಪ್ರತಿಷ್ಠಾಪಿಸಿದ ಗಣೇಶನ ಮೂತಿಯನ್ನು ವಿಸರ್ಜಿಸಲಾಯಿತು. ಜಿ.ಟಿ. ರಸ್ತೆಯ ಧಾರ್ಮಿಕ ಯುವ ವೇದಿಕೆ, ಸುದರ್ಶನ ಬಡಾವಣೆಯ ಮುನೀಶ್ವರ ಯುವಕ ಸಂಘ, ಸಂಪಿಗೆಕಟ್ಟೆಯ ಸಂಪಿಗೆ ಯುವಕ ಸಂಘ, ರಾಘವೇಂದ್ರ ದೇವಸ್ಥಾನದ ಕಲಾನಗರ ಸಾಂಸ್ಕøತಿಕ ವೇದಿಕೆ, ಕನ್ನಂಡಬಾಣೆಯ ದೃಷ್ಟಿ ಗಣಪತಿ ಯುವಕ ಸಂಘ, ಬನ್ನಿಮಂಟಪ ಸ್ವಸ್ತಿಕ್ ಯುವ ವೇದಿಕೆ ಹಾಗೂ ಜ್ಯೋತಿ ನಗರದ ಶ್ರೀ ಶಿವ ಶಕ್ತಿ ಯುವಕ ಮಿತ್ರ ಮಂಡಳಿ ಸಮಿತಿಗಳು ಪ್ರತಿಷ್ಠಾಪಿಸಿದ ಗಣಪತಿ ಮೂತಿಯನ್ನು ಇಂದು ವಿಸರ್ಜಿಸಲಾಯಿತು.

ಉಡೋತ್‍ಮೊಟ್ಟೆ : ಇಲ್ಲಿ ಶ್ರೀ ಆದಿಶಕ್ತಿ ಸೇವಾ ಸಮಿತಿ ವತಿಯಿಂದ ಶ್ರೀ ಆದಿಶಕ್ತಿ ದೇವಾಲಯದಲ್ಲಿ ಶ್ರೀ ಗಣಪತಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣಹೋಮ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ಜರುಗಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ನಂತರ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿರಿಸಿ ರಾತ್ರಿ ಅಪ್ಪಂಗಳ ಬಳಿಯ ಹೊಳೆಯಲ್ಲಿ ವಿಸರ್ಜಿಸ ಲಾಯಿತು.

ಶನಿವಾರಸಂತೆ : ಶನಿವಾರಸಂತೆ - ಕೊಡ್ಲಿಪೇಟೆ ವ್ಯಾಪ್ತಿಯ ಸುಮಾರು 48 ಕಡೆಗಳಲ್ಲಿ ಗೌರಿ ಗಣೇಶ ಆಚರಣಾ ಸಮಿತಿ ವತಿಯಿಂದ ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸ ಲಾಯಿತು.

ಶನಿವಾರಸಂತೆ ಪಟ್ಟಣದ ಸೇವಾ ಸಮಿತಿಯ ಪದಾಧಿಕಾರಿಗಳು ಭಕ್ತಾದಿಗಳು, ಮಹಿಳೆಯರು, ಗುರುವಾರ ಬೆಳಿಗ್ಗೆ ಗೌರಿ ಮೂರ್ತಿ ಯನ್ನು ಹಾಗೂ ತಾ. 25ರಂದು ಬೆಳಿಗ್ಗೆ ಗಣೇಶ ಮೂರ್ತಿಯನ್ನು ಕಲಶ ಮತ್ತು ಮೆರಣಿಗೆಯ ಮೂಲಕ 1ನೇ ವಿಭಾಗದ ಶ್ರೀ ಗಣಪತಿ ಪಾರ್ವತಿ ಮೂರ್ತಿ ಯನ್ನು ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ತ್ಯಾಗರಾಜ ಕಾಲೋನಿಯಲ್ಲಿ ಆದರ್ಶ ಸೇವಾ ಸಮಿತಿಯ ವತಿಯಿಂದ ತ್ಯಾಗರಾಜ ಕಾಲೋನಿಯ ಗಣಪತಿ ದೇವಾಲಯದಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ವಿಧಿ ವಿಧಾನದಂತೆ ನಡೆಯುತ್ತಿದೆ.

ತಾ. 27ರಂದು ಕೊಡ್ಲಿಪೇಟೆ ವ್ಯಾಪ್ತಿಯ ಜನಾರ್ದನಹಳ್ಳಿ, ಚಿಕ್ಕ ಬಂಡಾರ, ದೊಡ್ಡಕೊಡ್ಲಿ, ಕೋರ್‍ಗಲ್ಲು ಗ್ರಾಮಗಳಲ್ಲಿ ಪ್ರತಿಷ್ಠಾಪಿಸಲಾದ ಗೌರಿಗಣೇಶ ಮೂರ್ತಿಗಳನ್ನು ವಿಸರ್ಜನೆ ನಡೆಯಲಿದೆ.

ಗೌರಿಗಣೇಶ ಹಬ್ಬದ ಪ್ರಯುಕ್ತ ಡಿ.ಆರ್. ಪೊಲೀಸ್ ತುಕ್ಕಡಿಯೊಂದು ಶನಿವಾರಸಂತೆಯಲ್ಲಿ ಬೀಡು ಬಿಟ್ಟಿದ್ದು, ಪೊಲೀಸ್ ಠಾಣಾಧಿಕಾರಿ ಎಂ.ಡಿ. ಅಪ್ಪಾಜಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದಾರೆ.

ವೀರಾಜಪೇಟೆ : ವೀರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ತಾ.27ರಂದು (ಇಂದು) ರಾತ್ರಿ 8 ಗಂಟೆಗೆ ಮಂಗಳೂರಿನ ಮಾಯಾಲೋಕ ಕಲ್ಲಡ್ಕ ಶ್ಯಾಮ್ ಜಾದೂಗರ್ ಬಳಗದವರಿಂದ ಜಾದೂ, ಹಾಡು ಮತ್ತು ಮಿಮಿಕ್ರಿ ಏರ್ಪಡಿಸಲಾಗಿದೆ.

ಮುಖ್ಯ ಅತಿಥಿಯಾಗಿ ಮಾನವ ಹಕ್ಕು ಜಾಗೃತಿ ಸಮಿತಿಯ ರಾಜ್ಯ ಸಮಿತಿ ಅಧ್ಯಕ್ಷ ಡಾ. ಸಮೆಂತನ ಹಳ್ಳಿ ಲಕ್ಷ್ಮಣ್ ಸಿಂಗ್, ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್, ಅಂಜಪರವಂಡ ಅನಿಲ್, ಬೊಪ್ಪಂಡ ಜೂನಾ, ಎಸ್.ಎಚ್. ಮೈನುದ್ದೀನ್, ಎಂ.ಎಲ್. ಸೈನುದ್ದೀನ್ ಸಿ.ಕೆ.ರಂಜಿತ್ ಮಹಮ್ಮದ್ ರಾಫಿ ಹಾಗೂ ಕಾಳೇಂಗಡ ಜೈನ್ ತಿಮ್ಮಯ್ಯ ಭಾಗವಹಿಸಲಿದ್ದಾರೆ.

ವೀರಾಜಪೇಟೆ: ಆಧ್ಯಾತ್ಮಿಕ ಚಿಂತನೆಯಿಂದ ಸಾರ್ವತ್ರಿಕವಾಗಿ ವಿಘ್ನೇಶ್ವರನ ಉತ್ಸವದ ಆಚರಣೆ ಸಮಾಜಕ್ಕೆ ಒಳಿತಾಗಲಿದೆ. ಉತ್ಸವದಲ್ಲಿ ಸೇವಾ ಮನೋಭಾವನೆ ಉಂಟಾಗಿ ಉತ್ತಮ ಪರಿಸರ ಕಾಪಾಡುವಿಕೆ, ಸ್ವಚ್ಚತೆಗೂ ಆದ್ಯತೆ ದೊರೆಯಲಿದೆ ಎಂದು ಅರಮೇರಿ ಕಳಂಚೇರಿ ಮಠಾಧೀಶರಾದ ಶಾಂತಾ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ವೀರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಗಣೇಶೋತ್ಸವದ ಪ್ರಯುಕ್ತ ಗಣೇಶನ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಪ್ರತಿಷ್ಠಾಪಿಸಿ ಮಾತನಾಡಿದರು. ಇಂತಹ ಉತ್ಸವಗಳಲ್ಲಿ ಶ್ರದ್ಧಾ ಭಕ್ತಿ ಪರಸ್ಪರ ಅನ್ಯೋನ್ಯತೆ ಪ್ರೀತಿ ವಾತ್ಸಲ್ಯವನ್ನು ಕಾಣಬಹುದು. ಇದರಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಶಾಶ್ವತವಾಗಿ ನೆಲೆಯೂರಲಿದೆ ಎಂದರು.

ಅತಿಥಿಗಳಾಗಿ ಗಾಂಧಿನಗರದ ಪ್ರಕಾಶ್, ಮುಂಡಂಡ ಸಾಗರಿ ಪೂಣಚ್ಚ, ಕುಯ್ಮಂಡ ಕಾವೇರಿಯಪ್ಪ, ಅಯ್ಯಂಡ ಉಷಾ ಕುಶಾಲಪ್ಪ ಮುಂಡಂಡ ರಾಣು ಮಂದಣ್ಣ, ರಾಮಣ್ಣ ಭಾಗವಹಿಸಿದ್ದರು.

ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಪಿ.ಎ.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

ವೀರಾಜಪೇಟೆ : ಇತಿಹಾಸ ಪ್ರಸಿದ್ಧ ಗೌರಿ ಗಣೇಶನ ಉತ್ಸವದ ಅಂಗವಾಗಿ ವಿವಿಧ ಉತ್ಸವ ಸಮಿತಿಗಳಿಂದ ಇಲ್ಲಿನ 21 ಸ್ಥಳಗಳಲ್ಲಿ ಗೌರಿ ಗಣೇಶನನ್ನು ಶ್ರದ್ಧಾ ಭಕ್ತಿಯಿಂದ ಪ್ರತಿಷ್ಠಾಪಿಸಲಾಯಿತು.

ನಿನ್ನೆ ದಿನ ಬೆಳಗಿನಿಂದಲೇ ಬಿಸಿಲಿನ ವಾತಾವರಣವಿದ್ದುದರಿಂದ ಮೂರ್ತಿಗಳ ಪ್ರತಿಷ್ಠಾಪನೆಗೆ ಯಾವದೇ ಅಡಚಣೆಯಾಗಲಿಲ್ಲ. ಎಲ್ಲೆಡೆ ಗಳಲ್ಲಿಯೂ ಹಬ್ಬದ ವಾತಾವರಣ ವಿದ್ದು, ಸಂಭ್ರಮದಿಂದ ವಾದ್ಯಗೋಷ್ಠಿ ಯೊಂದಿಗೆ ಪ್ರತಿಷ್ಠಾಪನೆ ನೆರವೇರಿತು.

ಅಪರಾಹ್ನ 3ಗಂಟೆ ವೇಳೆಗೆ ಮಳೆ ಸುರಿದರೂ ಉತ್ಸವ ಸಮಿತಿಗಳಿಗೆ ರಾತ್ರಿಯ ಪೂಜೆಗೆ ಪೂಜೆಗೆ ತೊಂದರೆಯಾಗಲಿಲ್ಲ. ಪಟ್ಟಣದ ಎಲ್ಲ ಪ್ರತಿಷ್ಠಾಪನೆಯ ಸ್ಥಳಗಳಲ್ಲಿ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.

ಕುಶಾಲನಗರ : ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಣೇಶ ಚತುರ್ಥಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಸ್ಥಳೀಯ ಗಣಪತಿ ದೇವಾಲಯದಲ್ಲಿ ದೇವರ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಿಸ ಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಪೂಜೋತ್ಸವದಲ್ಲಿ ಪಾಲ್ಗೊಂಡರು. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 25 ಕ್ಕೂ ಅಧಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ನಡೆದು ಪೂಜಾ ಕಾರ್ಯಕ್ರಮಗಳು ಜರುಗಿದವು.

ಕುಶಾಲನಗರ ಪಟ್ಟಣ ಸೇರಿದಂತೆ ನೆರೆಯ ಮುಳ್ಳುಸೋಗೆ, ಬೈಚನಹಳ್ಳಿ, ಮಾದಾಪಟ್ಟಣ, ಕೂಡಿಗೆ, ಕೂಡುಮಂಗಳೂರು, ಗುಡ್ಡೆಹೊಸೂರು ಗ್ರಾಮಗಳಲ್ಲಿ 100 ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಬೈಚನಹಳ್ಳಿಯ ಶ್ರೀ ಮಾರಿಯಮ್ಮ ಸೇವಾ ಸಮಿತಿ, ಮಾರುಕಟ್ಟೆ ರಸ್ತೆಯ ಶ್ರೀ ನಾಗದೇವತಾ ಸೇವಾ ಸಮಿತಿ, ಮುಳ್ಳುಸೋಗೆಯ ಶ್ರೀ ಕನ್ನಂಬಾಡಮ್ಮ ಯುವಕ ಸಂಘ, ಮಾದಾಪಟ್ಟಣದ ನ್ಯೂಫ್ರೆಂಡ್ಸ್, ಜೋಡಿ ಬಸವೇಶ್ವರ ಯುವಕ ಸಂಘ, ಶ್ರೀ ವಿನಾಯಕ ಸೇವಾ ಸಮಿತಿ ಸೇರಿದಂತೆ ವಿವಿಧ ಸೇವಾ ಸಮಿತಿಯ ಆಶ್ರಯದಲ್ಲಿ ಗಣೇಶೋತ್ಸವ ಕಾರ್ಯಕ್ರಮ ಅದ್ಧೂರಿ ಯಾಗಿ ನಡೆಯಿತು. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 67 ಕಡೆ ಗಣಪತಿ ಪ್ರತಿಷ್ಠಾಪನೆ ನಡೆದಿದೆ.

ಕುಶಾಲನಗರ ಪಟ್ಟಣದ ಆದಿಶಂಕರಾಚಾರ್ಯ ಬಡಾವಣೆ ಯಲ್ಲಿ ಪೋಷಕರ ಮಾರ್ಗದರ್ಶನ ದಲ್ಲಿ ಮಕ್ಕಳೇ ಸೇರಿ ಸಂಘಟಿಸಿರುವ ಬಾಲ ಗಣಪತಿ ಬಾಲಕರು-ಬಾಲಕಿಯರ ಸಂಘದ ವತಿಯಿಂದ ಶುಕ್ರವಾರ ಗಣೇಶ ಚತುರ್ಥಿ ಸಂದರ್ಭ ಪರಿಸರ ಸ್ನೇಹಿ ಜೇಡಿಮಣ್ಣಿನಿಂದ ತಯಾರಿಸಿದ್ದ ಗಣೇಶ ಮೂರ್ತಿ ಹಾಗೂ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ‘ಪರಿಸರ ಸ್ನೇಹಿ ಗಣೇಶ ಉತ್ಸವ’ಕ್ಕೆ ಚಾಲನೆ ನೀಡಲಾಯಿತು.

ಸೋಮವಾರಪೇಟೆ : ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಸಂಭ್ರಮ-ಸಡಗರದಿಂದ ಗೌರಿ ಹಾಗೂ ಗಣೇಶನ ವಿಗ್ರಹ ಪ್ರತಿಷ್ಠಾಪನೆ ನೆರವೇರಿದೆ.

ಇಲ್ಲಿನ ಖಾಸಗಿ ಬಸ್ ನಿಲ್ದಾಣ ದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ನೂರಾರು ಮಂದಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸುತ್ತಿದ್ದಾರೆ.

ಇದರೊಂದಿಗೆ ನಗರದ ವಿವಿಧ ದೇವಾಲಯಗಳು, ಕಾನ್ವೆಂಟ್ ಬಾಣೆ, ಮಾನಸ ಹಾಲ್ ಸಮೀಪ, ಆಲೇಕಟ್ಟೆ ರಸ್ತೆ, ಕಿಬ್ಬೆಟ್ಟ, ಹಾನಗಲ್ಲು, ಯಡೂರು, ಶಾಂತಳ್ಳಿ, ಹಿರಿಕರ, ಬಜೆಗುಂಡಿ, ಬೇಳೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲೂ ಹಬ್ಬದ ಸಂಭ್ರಮ ಕಂಡುಬರುತ್ತಿದೆ.

ಗ್ರಾಮಸ್ಥರು, ಸಂಘ ಸಂಸ್ಥೆಗಳ ವತಿಯಿಂದ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಗೌರಿ ಆಗಮನ ದಿನದಂದು ಗಂಗೆ ಪೂಜೆಯೊಂದಿಗೆ, ಬಾಗಿನ ಸಹಿತ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿ ಮಂಟಪದಲ್ಲಿ ಪ್ರತಿಷ್ಠಾಪಿಸ ಲಾಯಿತು.

ಕೆಲವೆಡೆ ಮೂರು ದಿನಗಳಿಗೆ ವಿಸರ್ಜನಾ ಮಹೋತ್ಸವ ನಿಗದಿ ಯಾಗಿದ್ದು, ಹನ್ನೊಂದನೇ ದಿನಕ್ಕೆ ಬಹುತೇಕ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲು ಆಯೋಜಕರು ಚಿಂತಿಸಿದ್ದಾರೆ. ಸೋಮವಾರಪೇಟೆ ನಗರ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸಿರುವ ಉತ್ಸವಮೂರ್ತಿಗಳನ್ನು ಸಾಮೂಹಿಕ ವಾಗಿ ಮೆರವಣಿಗೆ ನಡೆಸಿ ಒಂದೇ ದಿನ ವಿಸರ್ಜಿಸಲು ಸಂಘ ಸಂಸ್ಥೆಗಳು ಚಿಂತಿಸಿವೆ.

ಗುಡ್ಡೆಹೊಸೂರು : ಇಲ್ಲಿನ ಸಮುದಾಯಭವನದಲ್ಲಿ 23ನೇ ವರ್ಷದ ಗಣೇಶನ ಉತ್ಸವ ಮೂರ್ತಿ ಯನ್ನು ಪ್ರತಿಷ್ಠಾಪಿಸಲಾಯಿತು. ಗೌರಿ ಗಣೇಶ ಹಬ್ಬದ ಪ್ರಯುಕ್ತ ಗ್ರಾಮವನ್ನು ಹಸಿರು ತೋರಣಗಳಿಂದ ಶೃಂಗರಿಸಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬೆಟ್ಟಗೇರಿ, ಬೊಳ್ಳೂರು ಬಸವೇಶ್ವರ ದೇವಸ್ಥಾನ ಆವರಣ ಹಾರಂಗಿ ರಸ್ತೆಯ ಸೀಗೆಹಳ್ಳ ನಿಸರ್ಗಧಾಮ ಎನ್.ಟಿ.ಸಿ ವತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.