ಶ್ರೀಮಂಗಲ, ಆ 26 : ಕೊಡಗು ಜಿಲ್ಲೆಯ ಮೂಲಕ ನಾಲ್ಕು ರಾಷ್ಟ್ರೀಯ ಹೆದ್ದಾರಿ ಮತ್ತು ಎರಡು ರೈಲು ಮಾರ್ಗಗಳನ್ನು ವಿರೋಧಿಸಿ ‘ಕೊಡಗು ಉಳಿಸಿ ಕಾವೇರಿ ನದಿ ರಕ್ಷಿಸಿ’ ಅಂದೋಲನ ಸಮಿತಿ ನೇತೃತ್ವ ದಲ್ಲಿ ವಿವಿಧ ಸಂಘಟನೆಗಳ ಬೆಂಬಲ ದೊಂದಿಗೆ ನಡೆಸಿದ ಬೃಹತ್ ವಾಹನ ಜಾಥಾಕ್ಕೆ ಪೊನ್ನಂಪೇಟೆ ಬಶವೇಶ್ವರ ದೇವಸ್ಥಾನದಲ್ಲಿ ವಾಹನಕ್ಕೆ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭ ಪೊನ್ನಂಪೇಟೆ ಯಿಂದ ನೂರಕ್ಕೂ ಹೆಚ್ಚ್ಚು ವಾಹನಗಳಲ್ಲಿ ಹುದಿಕೇರಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ ಮೂಲಕ ಕುಟ್ಟಕ್ಕೆ ಜಾಥಾ ನಡೆಸಿ ಕುಟ್ಟ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ವಾಹನಗಳಿಗೆ ಕಪ್ಪು ಬಾವುಟ ಮತ್ತು ಪ್ರತಿಭಟನಾಕಾರರು ಕಪ್ಪು ಪಟ್ಟಿಗಳನ್ನು ಕೈಗಳಿಗೆ ಕಟ್ಟಿಕೊಂಡು ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಬೆಂಗಳೂರು, ಮೈಸೂರು ಅಲ್ಲದೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಜನರು ಪಾಲ್ಗೊಂಡಿದ್ದರು. ಬೆಂಗಳೂರು ಮತ್ತು ಮೈಸೂರಿನಿಂದ ವಿಶೇಷ ಬಸ್‍ನಲ್ಲಿ ಜನರು ಆಗಮಿಸಿ ಪ್ರತಿಭಟನೆಗೆ ಬೆಂಬಲ ನೀಡಿದ್ದು ವಿಶೇಷವಾಗಿತ್ತು.

ಟಿ.ಶೆಟ್ಟಿಗೇರಿ ಗ್ರಾಮ ಪ್ರಮುಖರ ಅನಿಸಿಕೆ

ಈ ಪ್ರತಿಭಟನೆಗೆ ವಿರೋಧ ಮಾಡಿ ತಡೆವೊಡ್ಡುವದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದ ಇವರು ಟಿ.ಶೆಟ್ಟಿಗೇರಿಗೆ ಪ್ರತಿಭಟನೆ ತಲುಪುತ್ತಿದ್ದಂತೆ ಟಿ.ಶೆಟ್ಟಿಗೇರಿ-ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಿಂದ ಆಗಮಿಸಿದ್ದ ಪ್ರಮುಖರು ಪ್ರತಿಭಟನಾ ಮುಖಂಡರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭ ತಮ್ಮ ಮನವಿ ಪತ್ರದಲ್ಲಿ ಕೊಡಗು ಉಳಿಸಿ ಹಾಗೂ ಕಾವೇರಿ ನದಿ ರಕ್ಷಿಸಿ ಅಂದೋಲನಕ್ಕೆ ತಮ್ಮ ವಿರೋಧವಿಲ್ಲ. ಆದರೆ, ಈ ಹೋರಾಟದೊಂದಿಗೆ ಸೂಕ್ಷ್ಮ ಪರಿಸರ ತಾಣ ಯೋಜನೆಯನ್ನು ಕೇರಳ ಮಾದರಿಯಲ್ಲಿ ಶೂನ್ಯ ಕಿ.ಮೀ.ಗೆ ಇಳಿಸುವದು, ಹುಲಿ ಸಂರಕ್ಷಣಾ ವಲಯವೆಂದು ದ.ಕೊಡಗಿನ 9 ಗ್ರಾಮಗಳನ್ನು ಸೇರಿಸಿದ್ದು, ಇವುಗಳನ್ನು ಕೈಬಿಡುವದು. ಹಾಗೆಯೆ ಕೊಡಗಿನ ಮೂಲ ನಿವಾಸಿಗಳ ಹಕ್ಕಾದ ಕೋವಿ ಇತ್ಯಾದಿ ಹಕ್ಕಿಗೆ ತೊಂದರೆಯಾಗದಂತೆ ಕ್ರಮ, ಪೈಸಾರಿ ಜಾಗ ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿರುವ ಜಿಲ್ಲೆಯ ಎಲ್ಲಾ ಮೂಲ ನಿವಾಸಿಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು. ಕೊಡಗಿನ ನದಿ ನೀರು ಬಳಕೆಗೆ ರೈತರಿಗೆ ಅವಕಾಶ ನೀಡಬೇಕು, ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು.

ಈ ವಿಚಾರದ ಬಗ್ಗೆ ವೀರಾಜಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಅವರ ನೇತೃತ್ವದಲ್ಲಿ ಟಿ.ಶೆಟ್ಟಿಗೇರಿ ಬಿಜೆಪಿ ಅಧ್ಯಕ್ಷ ಕಟ್ಟೇರ ಈಶ್ವರ, ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್, ಕಾಫಿ ಮಂಡಳಿ ಸದಸ್ಯ ಬೊಟ್ಟಂಗಡ ರಾಜು, ಬೆಳೆಗಾರ ಅಪ್ಪಚ್ಚಂಗಡ ಮೋಟಯ್ಯ ಪ್ರತಿಭಟನಾ ಮುಖಂಡರಿಗೆ ಮನವಿ ಸಲ್ಲಿಸಿ ತಮ್ಮ ಬೇಡಿಕೆಯೊಂದಿಗೆ ಈ ಬೇಡಿಕೆಯ ಬಗ್ಗೆಯೂ ಗಮನಹರಿಸುವಂತೆ ಚರ್ಚಿಸಿದರು. ಈ ಸಂದರ್ಭ ಮನವಿ ಪತ್ರ ಸಲ್ಲಿಸಿದವರು ರೈಲು ಮಾರ್ಗಕ್ಕೆ ವಿರೋಧವಿದೆ. ಆದರೆ, ಹೆದ್ದಾರಿ ಯೋಜನೆ ಆಗಲಿ ಎಂದು ಹೇಳಿದರು.

ಈ ಸಂದರ್ಭ ಪ್ರತಿಭಟನಾ ನೇತೃತ್ವ ವಹಿಸಿದ್ದ ಕರ್ನಲ್ ಮುತ್ತಣ್ಣ ಅವರು ಸಮಜಾಯಿಷಿಕೆ ನೀಡಿ ಕೊಡಗು ಜಿಲ್ಲೆಯ ಮಣ್ಣಿಗೆ ಹಾಗೂ ಮೂಲ ನಿವಾಸಿಗಳಿಗೆ ಯಾವದೇ ತೊಂದರೆ ಮಾಡುವದು ನಮ್ಮ ಉದ್ದೇಶವಲ್ಲ. ಕೊಡಗನ್ನು ಕೊಡಗಾಗಿ ಉಳಿಸಿಕೊಳ್ಳಲು, ಕೃಷಿ ಭೂಮಿ ಕೃಷಿಯೇತರ ಚಟುವಟಿಕೆಗೆ ಪರಿವರ್ತನೆಯಾಗದಂತೆ ತಡೆಯಲು ಸೂಕ್ಷ್ಮ ಪರಿಸರ ತಾಣ ಯೋಜನೆ ಹೊರತುಪಡಿಸಿ ಬೇರೆ ಯಾವ ಮಾರ್ಗೋಪಾಯವಿದೆ ಎಂದು ಪ್ರಶ್ನಿಸಿದರು. ಅವರ ಬೇಡಿಕೆಗಳ ಈಡೇರಿಕೆಗೆ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಪ್ರಯತ್ನಿಸುವದಾಗಿ ಹೇಳಿದರು.

ಈ ಸಂದರ್ಭ ಯುಕೊ ಸಂಘಟನೆ ಸಂಚಾಲಕ ಮಂಜು ಚಿಣ್ಣಪ್ಪ ಅವರು ಪ್ರತಿಕ್ರಿಯಿಸಿ ಶಾಸಕರು, ಸಂಸದರು ಮಾಡಬೇಕಾದ ಕೆಲಸಗಳನ್ನು ನÀಮ್ಮ ಹೆಗಲಿಗೆ ಹಾಕುತ್ತಿದ್ದಿರಿ. ನಮಗೆ ಯಾವದೇ ರಾಜಕೀಯ ಅಜಂಡ ಇಲ್ಲ. ನಮ್ಮಲ್ಲಿ ಎರಡೇ ಅಜಂಡ ಇರುವದು ಅದು ಕೊಡಗು ಹಾಗೂ ಕೊಡಗಿನ ಮೂಲ ನಿವಾಸಿಗಳ ಸಂರಕ್ಷಣೆ ಎಂದು ಹೇಳಿದರು.

ಪ್ರತಿಭಟನೆಯ ಮುಖಂಡರಾದ ಚೆಪ್ಪುಡಿರ ಶರಿ ಸುಬ್ಬಯ್ಯ ಮಾತನಾಡಿ ಸೂಕ್ಷ್ಮ ಪರಿಸರ ತಾಣದ ಬಗ್ಗೆ ಈಗಾಗಲೇ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಅವರು ಈ ಯೋಜನೆಯಿಂದ ಜನರಿಗೆ ಯಾವದೇ ತೊಂದರೆ ಇಲ್ಲ ಎಂದು ನಿಮ್ಮ ಎದುರೇ ಹೇಳಿದ್ದಾರೆ ಎಂಬದನ್ನು ಜ್ಞಾಪಿಸಿದರು.

ಕುಟ್ಟದಲ್ಲಿ ವಿರೋಧವಿಲ್ಲ

ಕುಟ್ಟದಲ್ಲಿ ಕುಟ್ಟ ಕೊಡವ ಸಮಾಜ ಹಾಗೂ ಫೆÉಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ನೇತೃತ್ವದಲ್ಲಿ ಈ ಪ್ರತಿಭಟನೆಗೆ ಬೆಂಬಲ ನೀಡುವದಿಲ್ಲ ಎಂದು ಘೋಷಿಸಿದ್ದರು. ಆದರೆ, ಕೊನೆಗಳಿU Éಯಲ್ಲಿ ನಡೆದ ದೀಢಿರ್ ಬೆಳವಣಿಗೆಯಲ್ಲಿ ವಿಷ್ಣ ಕಾರ್ಯಪ್ಪ ಅವರು ತಮ್ಮ ನಿರ್ಧಾರವನ್ನು ಬದಲಿಸಿ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸುವ ನಿರ್ಧಾರದಿಂದ ಹಿಂದೆ ಸರಿದರು. ಈ ಹಿನೆÀ್ನಲೆಯಲ್ಲಿ ಕುಟ್ಟ ಕೊಡವ ಸಮಾಜದ ಅನುಪಸ್ಥಿತಿಯಲ್ಲಿ ಕುಟ್ಟ ತಲುಪಿದ ಜಾಥಾಕ್ಕೆ ಕುಟ್ಟದ ಕೆ-ಬಾಡಗ, ಕೊಡವ ವೇಲ್‍ಫೇರ್ ಅಸೋಸಿಯೇಷನ್, ನಾಲ್ಕೇರಿಯ ಶ್ರೀಕೃಷ್ಣ ಕೊಡವ ಸಂಘದ ಸದಸ್ಯರು ಸ್ವಾಗತ ಕೋರಿದರು. ಕೊಡವ ಸಮಾಜದ ಹಲವು ಸದಸ್ಯರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಕಂಡುಬಂತು.

ಕುಟ್ಟ ಬಸ್ ನಿಲ್ದಾಣದಲ್ಲಿ ರ್ಯಾಲಿಯಲ್ಲಿ ಆಗಮಿಸಿದ ಜನರು ಸೇರಿ ಇಲ್ಲಿನ ಮಾನಂದವಾಡಿ- ಕುಟ್ಟ, ಕುಟ್ಟ-ನಾಗಹೊಳೆ, ಕುಟ್ಟ-ಶ್ರೀಮಂಗಲ ರಸ್ತೆಗಳ ಜಂಕ್ಷನ್‍ನಲ್ಲಿ ಪ್ರತಿಭಟನೆ ಹಮ್ಮಿಕೊಂಡಾಗ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು, ಪಾಲ್ಗೊಂಡು ಹೋರಾಟಕ್ಕೆ ಬಲ ತುಂಬಿದರು. ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.

ಸಂಘಟನೆಗಳ ಬೆಂಬಲ

ಪ್ರತಿಭಟನೆಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ, ಯುಕೊ, ಬೆಳೆಗಾರರ ಒಕ್ಕೂಟ, ಸಾರ್ವಜನಿಕ ಹಿತರಕ್ಷಣ ಸಮಿತಿ, ಕೊಡಗು ವನ್ಯ ಜೀವಿ ಸಂಘ, ಭಾರತೀಯ ಕಿಸಾನ್ ಸಂಘ, ಪೊನ್ನಂಪೇಟೆ, ಗೋಣಿಕೊಪ್ಪ, ಮಡಿಕೇರಿ, ಮೈಸೂರು, ಕುಶಾಲನಗರ, ಕೊಡವ ಸಮಾಜ ಕೊಡವ ಮಕ್ಕಡ ಕೂಟ, ಕ್‍ಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣ ಸಮಿತಿ, ಪೊನ್ನಂಪೇಟೆ ಮಾಜಿ ಸೈನಿಕರ ಸಂಘ, ಕೊಣಕೇರಿ ಭಗವತಿ ಈಶ್ವರ ದೇವಸ್ಥಾನ ಮುಗುಟಗೇರಿ, ಪೊನ್ನಂಪೇಟೆ ಅಪ್ಪಚ್ಚಕವಿ ಕೊಡವ ಕೂಟ, ಪೊನ್ನಂಪೇಟೆಯ ಕೊಡವ – ಅಮ್ಮಕೊಡವ ಹಿರಿಯ ನಾಗರಿಕ ವೇದಿಕೆ, ಪೊನ್ನಂಪೇಟೆಯ ನಾಗರಿಕ ಸೇವಾ ಸಮಿತಿ, ಬಸವಣ್ಣ ದೇವಕಾಡು ಸಂರಕ್ಷಣ ಸಮಿತಿ, ನಡಿಕೇರಿ ಗೋವಿಂದ ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ, ಸಿದ್ಧಾಪುರ ಕೊಡವ ಕಲ್ಚರ್ ಅಸೋಸಿಯೇಷನ್, ಕಾವೇರಿ ಸ್ವಚ್ಚತ ಅಂದೋಲನ, ಮಾಯಮುಡಿಯ ಮಾನಿಲ್ ಅಯ್ಯಪ್ಪ ಹಾಗೂ ಕೊಡವ ಒಕ್ಕೂಟ, ಚೇರಂಗಾಲ ಶ್ರೀ ಕನ್ನಿಕಾವೇರಿ ಸೇವಾ ಟ್ರಸ್ಟ್, ಬೆಂಗಳೂರ್ ಸೇವ್ ಕೊಡಗು ಫೋರ್, ಮಾಯಮುಡಿಯ ಕಂಗಳತ್‍ನಾಡ್ ಕೊಡವ ಸಮಾಜ, ಪೊನ್ನಂಪೇಟೆ ಇಗ್ಗುತ್ತಪ್ಪ ಸೌಹಾದರ್À ಸಂಘ, ಕೆ-ಬ ಆಡಗದ ಕೊಡವ ವೇಲ್‍ಫೇರ್ ಅಸೋಸಿಯೇಷನ್, ನಾಲ್ಕೇರಿ ಶ್ರೀಕೃಷ್ಣ ಕೊಡವ ಸಂಘ, ಅಮ್ಮತ್ತಿ ರೈತ ಸಂಘ, ಕೊಡಗು ಜಾವ ರೈಡರ್ಸ್, ಅಮ್ಮತ್ತಿ ಒಂಟಿಯಂಗಡಿ ಕೊಡವ ಕಲ್ಚರ್ ಅಸೋಸಿಯೇಷನ್, ಅಖಿಲ ಅಮ್ಮಕೊಡವ ಸಮಾಜ ಸೇರಿದಂತೆ 40ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ನೀಡಿದವು.