ಶ್ರೀಮಂಗಲ, ಆ. 26: ಕೊಡಗು ಜಿಲ್ಲೆಯ ಮೂಲಕ ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಮಾಡದಂತೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪತ್ರ ಚಳವಳಿಯ ಮೂಲಕ ಒತ್ತಡ ಹೇರುವದು. ಹಾಗೆಯೆ ಈ ಯೋಜನೆಯನ್ನು ಪ್ರಾಥಮಿಕ ಹಂತದಲ್ಲಿಯೇ ತಡೆಹಿಡಿಯಲು ಈ ಯೋಜನೆಯಿಂದ ಉಂಟಾಗುವ ದುಷ್ಪರಿಣಾಮವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡಲು ‘ಕೊಡಗು ಉಳಿಸಿ, ಕಾವೇರಿ ನದಿ ರಕ್ಷಿಸಿ’ ಅಂದೋಲನ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಡೆಸಿದ ಪ್ರತಿಭಟನಾ ರ್ಯಾಲಿಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಸಂಚಾಲಕ ನಿವೃತ್ತ ಕರ್ನಲ್ ಚೆಪ್ಪುಡಿರ ಪಿ.ಮುತ್ತಣ್ಣ ಅವರು ಕೊಡಗು ಜಿಲ್ಲೆಯ ಮೂಲಕ ಉದ್ದೇಶಿತ ನಾಲ್ಕು ರಾಷ್ಟ್ರೀಯ ಹೆದ್ದಾರಿ

(ಮೊದಲ ಪುಟದಿಂದ) ಹಾಗೂ ಎರಡು ರೈಲು ಮಾರ್ಗ ಯೋಜನೆ ಅನುಷ್ಠಾನವಾದರೆ ಲಕ್ಷಾಂತರ ಮರ ಹನನವಾಗಲಿದೆ. ಈಗಾಗಲೇ ಮೂರು ವರ್ಷದ ಹಿಂದೆ ಜಿಲ್ಲೆಯ ಮೂಲಕ ಕೇರಳ ರಾಜ್ಯದ ಉಪಯೋಗಕ್ಕೆ ರೂಪಿಸಿದ ಹೈಟೆನ್‍ಷನ್ ವಿದ್ಯುತ್ ಮಾರ್ಗದಿಂದ 54 ಸಾವಿರ ಮರ ಹನನವಾಗಿದೆ. ಇದರ ದುಷ್ಪರಿಣಾಮದಿಂದ ಸತತ ಮೂರು ವರ್ಷದಿಂದ ಮಳೆ ಕೊರತೆ ಅನುಭವಿಸುವಂತಾಗಿದೆ. ಮಳೆಗಾಲದಲ್ಲಿಯೇ ವಾಡಿಕೆ ಮಳೆ ಇಲ್ಲದೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಕೃಷಿ ಚಟುವಟಿಕೆಗೂ ತೊಂದರೆಯಾಗಿದೆ. ಜಿಲ್ಲೆಯ ಕೃಷಿ ಹಾಗೂ ಕಾಫಿ ಪ್ಲಾಂಟೆಷನ್‍ಗೆ ದೊಡ್ಡ ಮಟ್ಟದ ಧಕ್ಕೆಯಾಗಲಿದೆ. ಆದ್ದರಿಂದ ಈ ಯೋಜನೆಗಳ ವಿರುದ್ಧ ಪ್ರಥಮ ಹಂತದಲ್ಲಿಯೇ ಎಚ್ಚೆತ್ತುಕೊಂಡು, ಇಲ್ಲಿನ ಪರಿಸರ ನಾಶವಾದರೆ ಕಾವೇರಿ ನದಿ ಹಾಗೂ ಉಪನದಿಗಳು ಬರಡಾಗುವ ಅಪಾಯವಿದೆ. ಆದ್ದರಿಂದ ‘ಕೊಡಗನ್ನು ಉಳಿಸಿ ಮತ್ತು ಕಾವೇರಿ ನದಿ ರಕ್ಷಿಸಿ’ ಅಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಮೂಲಕ ಹೆದ್ದಾರಿ ಮತ್ತು ರೈಲ್ವೆ ಮಾರ್ಗ ವಿರೋಧಿಸಿ ಪೊನ್ನಂಪೇಟೆಯಿಂದ ಕೇರಳ ರಾಜ್ಯದ ಗಡಿ ಪ್ರದೇಶವಾದ ಕುಟ್ಟದವರೆಗೆ ವಾಹನ ಜಾಥ ಹಮ್ಮಿಕೊಂಡು ಕುಟ್ಟದಲ್ಲಿ ಪ್ರತಿಭಟನಾ ರ್ಯಾಲಿಯಲ್ಲಿ ಅವರು ಮಾತನಾಡಿದರು. ನನ್ನ ಶಿಕ್ಷಣದ ನಂತರ ನಾನು 23 ವರ್ಷ ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸಿದ್ದೇನೆ. ಈ ಸಮಯದಲ್ಲಿ ಜಿಲ್ಲೆಯ ಭೌಗೋಳಿಕ ಲಕ್ಷಣದ ಮೇಲೆ ಉಂಟಾಗಿರುವ ದೌರ್ಜನ್ಯ ಬಹಳಷ್ಟಾಗಿದೆ.

ಈ ಎರಡು ಮಾರ್ಗ ಯೋಜನೆಗಳಿಂದ ಕೊಡಗಿನ ಸಣ್ಣ ಹಿಡುವಳಿದಾರರು ಬೀದಿಗೆ ಬರಲಿದ್ದು, ಹಲವಾರು ಪಟ್ಟಣಗಳು ನಾಶವಾಗಲಿದೆ. ಕೊಡಗು ಜಿಲ್ಲೆಗೆ ರೈಲು ಮಾರ್ಗ ಕಲ್ಪಿಸುವದರಿಂದ ಅಕ್ರಮ ಬಾಂಗ್ಲಾ ದೇಶದ ವಲಸಿಗರು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಿಲ್ಲೆ ಮಿನಿ ಬಾಂಗ್ಲ ದೇಶವಾಗಲಿದೆ. ಇದು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಯಾಗಿ ಕಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊಡವ ಸಂಸ್ಕøತಿಗೆ ಧಕ್ಕೆ

ಪ್ರತಿಭಟನಾಕಾರರನ್ನು ಉದ್ದೇಶಿಸಿ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ ಹಲವರ ವಿರೋಧÀದ ನಡುವೆಯೂ ಇಂದಿನ ಹೋರಾಟದಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ಮಳೆಯನ್ನು ಲೆಕ್ಕಿಸದೆ ಕೊಡೆ ಹಿಡಿದು ಹಾಗೂ ಕೊಡೆ ಇಲ್ಲದೆ ಮಳೆಯಲ್ಲಿ ನೆನೆಯುತ್ತ ಹೋರಾಟದಲ್ಲಿ ಭಾಗಿಯಾಗಿರುವದರ ಹಿಂದೆ ಅವರ ಮನಸ್ಸಲ್ಲಿ ದೊಡ್ಡ ನೋವಿದೆ ಎನ್ನುವದನ್ನು ಅರ್ಥಮಾಡಿಕೊಳ್ಳಬೇಕು. ಪ್ರಪಂಚದಲ್ಲಿ ಕೇವಲ ಹಣಕ್ಕೆ ಮಾತ್ರ ಬೆಲೆ ನೀಡಿದರೆ ಮನುಷ್ಯತ್ವ ಜನರ ಭಾವನೆಗೆ ಬೆಲೆ ಇಲ್ಲದಂತಾಗುತ್ತದೆ. ಆದ್ದರಿಂದ ಅಭಿವೃದ್ಧಿ ಹೆಸರಿನಲ್ಲಿ ಕೊಡಗಿನ ವಿಶಿಷ್ಟ ಸಂಸ್ಕøತಿ, ಜನರ ಭಾವನೆಯ ಸ್ವರೂಪದ ಮೇಲೆ ದೌರ್ಜನ್ಯ ಮಾಡುವದು ಸರಿಯಲ್ಲ. ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ಅಸ್ತಿತ್ವ ಕಳೆದುಕೊಂಡರೆ ಬೇರೆ ಜಾಗದಲ್ಲಿ ಅವುಗಳ ಅಸ್ತಿತ್ವ ಇರುತ್ತದೆ. ಆದರೆ, ಕೊಡವ ತಾಯಿನಾಡಾದ ಈ ಪುಟ್ಟ ಜಿಲ್ಲೆಯ ಮೇಲೆ ಅನಗತ್ಯವಾದ ಹೆದ್ದಾರಿ, ರೈಲು ಮಾರ್ಗವನ್ನು ತರುವ ಮೂಲಕ ಕೊಡವರು ಅಸ್ತಿತ್ವ ಕಳೆದುಕೊಂಡರೆ ಒಂದು ಅಲ್ಪಸಂಖ್ಯಾತ ಜನಾಂಗ, ವಿಶಿಷ್ಟ ಸಂಸ್ಕøತಿ, ಅಳಿದುಹೋಗಲಿದೆ ಎಂದು ಎಚ್ಚರಿಸಿದರು.

ನಾವು ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ, ಕೆಲವು ಸ್ವಹಿತಾಸÀಕ್ತಿಯ ದೃಷ್ಟಿಯಿಂದ ನಮ್ಮಲ್ಲಿಯೇ ಒಡಕು ಮೂಡಿಸಲು ಷÀಡ್ಯಂತ್ರ ನಡೆಸುತ್ತಿದ್ದಾರೆ. ಈ ಬಗ್ಗೆ ನಮ್ಮ ಜನ ಎಚ್ಚೆತ್ತುಕೊಳ್ಳಬೇಕು. ಕೊಡವ ಜನಾಂಗ ಒಗ್ಗಟ್ಟಿನಿಂದ ಬೆರೆತರೆ ಇವರ ಕಾರ್ಯಸಾಧನೆ ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಇವರು ನಮ್ಮ ನಮ್ಮೊಳಗೆ ವಿಷ ಬೀಜವನ್ನು ಬಿತ್ತುತ್ತಿದ್ದಾರೆ. ಕೊಡಗಿನ ಉಳಿವು ಹಾಗೂ ಜನಾಂಗದ ಉಳಿವಿಗಾಗಿ ಪ್ರತಿಯೊಬ್ಬರು ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದು ತಿಳಿಸಿದರು. ರೈಲು ಸಂಪರ್ಕವಾದರೆ ಕಾಫಿಗೆ ಮಾರುಕಟ್ಟೆ ಹೆಚ್ಚಾಗುತ್ತದೆ. ಹಾಗೆಯೆ ರಸಗೊಬ್ಬರ ದರ ಬಾರಿ ಇಳಿಕೆಯಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿರುವ ಬಗ್ಗೆ ಕಿಡಿಕಾರಿದ ಮಂಜು ಚಿಣ್ಣಪ್ಪ ಅವರು ನಮ್ಮ ನೆರೆಯ ಕಾಫಿ ಬೆಳೆಯುವ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರುಗಳಲ್ಲಿ ಏಕೆ ಕಾಫಿ ದರ ಹೆಚ್ಚಾಗಿಲ್ಲ. ರಸಗೊಬ್ಬರ ದರ ಇಳಿಕೆಯಾಗಿಲ್ಲ ಎಂದು ಪ್ರಶ್ನಿಸಿದರು.

ಕೊಡಗಿನಲ್ಲಿ ಒಂಟಿ ಮನೆಗಳು ಚದುರಿದಂತೆ ಇರುತ್ತದೆ. ಹಾಗೆಯೆ ಜಿಲ್ಲೆಯಲ್ಲಿ ಕೊಡಗಿನ ಧಾರ್ಮಿಕ ಸ್ಥಳಗಳಾದ ಐನ್‍ಮನೆ, ಕೈಮಡ, ದೇವಸ್ಥಾನಗಳು ಇದ್ದು ರೈಲು ಮಾರ್ಗ ಇಲಾಖೆ ನಿಗದಿಪಡಿಸಿ ಸರ್ವೆಯ ಅನುಸಾರವಾಗಿ ನಡೆಯಲಿದೆ. ಈ ಮಾರ್ಗದಲ್ಲಿ ಬರುವ ಈ ಎಲ್ಲಾ ಸ್ಥಳಗಳು ನಿರ್ನಾಮವಾಗಲಿದೆ. ಕೇರಳ ರಾಜ್ಯದಲ್ಲಿ ರಸ್ತೆಗಳು ಇಕ್ಕಟ್ಟಾಗಿದೆ. ಆದರೆ, ಕೊಡಗಿನಲ್ಲಿ ಮಾತ್ರ ಷಟ್ಪಥÀ ಹೆದ್ದಾರಿಯನ್ನು ನಿರ್ಮಿಸುವ ಅವಶ್ಯಕತೆ ಏನಿದೆ.? ಎಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.

ಈ ಅಲ್ಪಸಂಖ್ಯಾತ ಕೊಡವರ ತಾಯಿ ನಾಡಿನ ಮೇಲೆ ಅಭಿವೃದ್ಧಿ ಹೆಸರಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರಧಾನಿ ಮೋದಿ ಜನರ ಈ ಹೋರಾಟವನ್ನು ಅರ್ಥ ಮಾಡಿಕೊಂಡು ಸ್ಪಂದಿಸಬೇಕೆಂದು ಹೇಳಿದರು.

ಕೊಡಗಿನ ರಕ್ಷಣೆ ಬೇಡವೇ?

ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ ತಿಮ್ಮಯ್ಯ ಮಾತನಾಡಿ ಇಂದು ಕೊಡವರಿಗೆ ತಮ್ಮ ತಾಯಿ ನೆಲದಲ್ಲೇ ಅಭದ್ರತೆ ಸ್ಥಿತಿ ಬಂದಿದೆ. ನಮ್ಮ ಎಲ್ಲಾ ಬೇಡಿಕೆಗಳನ್ನು ಪ್ರತಿಭಟನೆಯ ಮೂಲಕ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿರುವದು ಆತಂಕಕಾರಿ. ಇಂದಿನ ಈ ಪ್ರತಿಭಟನೆಗೆ ಜನಪ್ರತಿನಿಧಿಗಳು ಆಗಮಿಸಿ ಬೆಂಬಲವನ್ನು ವ್ಯಕ್ತಪಡಿಸಬೇಕಾಗಿತ್ತು. ಇಲ್ಲವೆ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕಾಗಿತ್ತು. ಆದರೆ, ನಮ್ಮಿಂದ ಚುನಾಯಿತರಾದ ಜನಪ್ರತಿನಿಧಿಗಳು ತಮ್ಮ ರಾಜಕೀಯ ಲೆಕ್ಕಚಾರದಲ್ಲಿ ಮುಳುಗಿದ್ದಾರೆ. ಈ ಹಿಂದೆ ಕೇರಳಕ್ಕೆ ಹೈಟೆನ್‍ಷನ್ ಮಾರ್ಗವನ್ನು ಕಲ್ಪಿಸುವಾಗಲು ಜನಪ್ರತಿನಿಧಿಗಳು ಬೆಂಬಲವನ್ನು ನೀಡಲಿಲ್ಲ. ಕೊಡಗು ಜಿಲ್ಲೆಯಲ್ಲಿ ತಮ್ಮ ಬದುಕನ್ನು ಕಂಡುಕೊಂಡಿರುವ ಇತರ ಜನಾಂಗದವರು ಈ ಹೋರಾಟದಲ್ಲಿ ಭಾಗಿಯಾಗಬೇಕಾಗಿತ್ತು. ಆದರೆ, ಕೇವಲ ಕೊಡವ ಜನಾಂಗದವರು ಮಾತ್ರ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಇತರ ಜನಾಂಗದವರಿಗೆ ಕೊಡಗಿನ ರಕ್ಷಣೆ ಬೇಡವೇ? ಎಂದು ಪ್ರಶ್ನಿಸಿದರು.

ಮೈಸೂರಿನ ಹಿರಿಯ ವಕೀಲರಾದ ಪಾಂಡಂಡ ಮೇದಪ್ಪ ಅವರು ಮಾತನಾಡಿ ಜನಪ್ರತಿನಿಧಿ ಗಳನ್ನು ನೇರವಾಗಿ ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಪ್ರಜೆಯೂ ಬೆಳೆಸಿಕೊಳ್ಳ ಬೇಕು. ಜಿಲ್ಲೆಗೆ ಮಾರಕವಾಗುವ ಯೋಜನೆಗಳಿಗೆ ಜನಪ್ರತಿನಿಧಿಗಳು ಬೆಂಬಲ ನೀಡದಿದ್ದರೆ ಅವರನ್ನು ನೇರವಾಗಿ ಸಾರ್ವಜನಿಕವಾಗಿ ಪ್ರಶ್ನಿಸಿಬೇಕು. ಹಾಗೆಯೆ ಜಿಲ್ಲೆಯ ಜನತೆಯ ಸಮಸ್ಯೆ ಹಾಗೂ ಮಾರಕ ಯೋಜನೆಗಳ ಪರಿಹಾರವನ್ನು ನಮ್ಮ ಜನಪ್ರತಿನಿಧಿಗಳೇ ಮಾಡುತ್ತಾರೆ ಎಂಬ ಭಾವನೆಯಲ್ಲಿ ಮುಳುಗಿರುವದು ತಪ್ಪು. ಇಲ್ಲಿನ ಜನತೆ, ಜನಪ್ರತಿನಿಧಿಗಳು ಅದನ್ನು ಮಾಡಲು ವೈಪಲ್ಯತೆ ಕಂಡಿರುವಾಗ ತಾವೇ ಬೀದಿಗಿಳಿದು ಹೋರಾಟ ನಡೆಸುವದರ ಮೂಲಕ ನ್ಯಾಯ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಎಚ್ಚರಿಸಿದರು.

ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷೆ ಅದೇಂಗಡ ತಾರಾ ಅಯ್ಯಮ್ಮ ಮಾತನಾಡಿ, ಕೊಡಗಿನ ನೈಜ ಅಭಿವೃದ್ಧಿಗೆ ತಡೆ ಮಾಡುವದಿಲ್ಲ. ಆದರೆ, ಕೊಡಗಿನ ಜನರ ಅಳಿವು- ಉಳಿವಿನ ಪ್ರಶ್ನೆಯಾಗಿರುವ ಮಾರಕ ಯೋಜನೆಗಳ ವಿರುದ್ಧ ಹೋರಾಟ ಅನಿವಾರ್ಯ. ಆದ್ದರಿಂದ ಇಲ್ಲಿನ ಜನರು ರಾಜಕೀಯ ರಹಿತವಾಗಿ, ಜಾತಿಭೇದ ಮರೆತು ಮುಂದಿನ ಪೀಳಿಗೆಗೆ ಕೊಡಗನ್ನು ನೆಮ್ಮದಿಯ ತಾಣವಾಗಿ ಉಳಿಸಿಕೊಳ್ಳಲು ಜಾಗೃತರಾಗಬೇಕು ಎಂದು ಹೇಳಿದರು.

ಕೇರಳದ ಪರಿಸರ ಹೋರಾಟಗಾರ್ತಿ ಮೀರಾ ರಾಜೇಶ್ ಮಾತನಾಡಿ ಇದು ಕೇರಳ ಅಥವಾ ಕರ್ನಾಟಕ ರಾಜ್ಯದ ಸಮಸ್ಯೆಯಲ್ಲ. ಇದು ಕಾವೇರಿ ನದಿಯ ರಕ್ಷಣೆ ಮತ್ತು ನೀರಿನ ಗಂಭೀರ ವಿಚಾರವಾಗಿದೆ. ಈ ಯೋಜನೆಯ ದುಷ್ಪರಿಣಾಮದಿಂದ ಕೊಡಗು ಜಿಲ್ಲೆಯ ಪರಿಸರಕ್ಕೆ ಹಾನಿಯಾಗಿ ಕಾವೇರಿ ನದಿ, ಹಾಗೂ ಅದರ ಉಪನದಿ ಬತ್ತಿಹೋದರೆ ಎಷ್ಟು ಜನರಿಗೆ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸುತ್ತದೆ ಎಂಬದನ್ನು ಸರ್ಕಾರ ಗಂಭೀರವಾಗಿ ಚಿಂತಿಸಿ ತೀರ್ಮಾನಿಸಬೇಕೆಂದು ಹೇಳಿದರು.