ಮಡಿಕೇರಿ, ಆ. 26: ಕೊಡಗಿನಲ್ಲಿ ಬೆಲೆ ಬಾಳುವ ಮರಗಳು ಲೂಟಿ ಯೊಂದಿಗೆ, ನಿಷ್ಠಾವಂತ ಪೊಲೀಸ್ ಅಧಿಕಾರಿ ಡಿವೈಎಸ್‍ಪಿ ಗಣಪತಿ ಅವರ ಸಾವಿಗೆ ಕಾರಣರಾಗಿರುವ ಸಚಿವ ಕೆ.ಜೆ. ಜಾರ್ಜ್ ನೈತಿಕ ಹೊಣೆಗಾರಿಕೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲೂ ಸಚಿವರ ವಿರುದ್ಧ ಹರಿಹಾಯ್ದ ಸಂಸದರು, ಬಳಿಕ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಿವೈಎಸ್‍ಪಿ ಸಂಶಯಾಸ್ಪದ ಸಾವಿನ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಮಾಧ್ಯಮ ಗಳಿಂದ ಬಹಿರಂಗ ಗೊಂಡಿದ್ದರೂ, ರಾಜ್ಯ ಸರಕಾರ, ಪೊಲೀಸ್ ಗುಪ್ತಚರ ಇಲಾಖೆ ಹಾಗೂ ಸಚಿವ ಜಾರ್ಜ್ ಮೌನವಹಿಸಿರುವದು ಸಾಕಷ್ಟು ಸಂಶಯಗಳಿಗೆ ಕಾರಣ ವಾಗಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಈ ದಿಸೆಯಲ್ಲಿ ಕೊಡಗಿನ ಬಗ್ಗೆ ಮತ್ತು ಕಾನೂನಿನ ಬಗ್ಗೆ ಗೌರವವಿದ್ದರೆ ಮುಖ್ಯಮಂತ್ರಿಗಳು ತಾವಾಗಿಯೇ ಸಚಿವ ಜಾರ್ಜ್ ಅವರ ರಾಜೀನಾಮೆ ಪಡೆಯಲೆಂದು ಒತ್ತಾಯಿಸಿದ ಸಂಸದರು, ಗಣಪತಿ ಸಾವಿನ ಸಂದರ್ಭ ಭಾರೀ ಹೋರಾಟ ಎದುರಾದಾಗ ರಾಜೀನಾಮೆ ನೀಡಿದ್ದ ಸಚಿವ ಜಾರ್ಜ್ ಅವರಿಂದ ಕೋಟಿಗಟ್ಟಲೆ ಹಣಕ್ಕಾಗಿ ತರಾತುರಿಯಲ್ಲಿ ಮತ್ತೆ ಮಂತ್ರಿಗಿರಿ ನೀಡಲಾಗಿದೆ ಎಂದು ಗಂಭೀರ ಆರೋಪಿಸಿದರು.

ಪ್ರಸಕ್ತ ಮೃತ ಅಧಿಕಾರಿ ಗಣಪತಿ ಕುಟುಂಬಸ್ಥರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿರುವ ಕಾರಣ, ನಿಶ್ಚಿತವಾಗಿ ಗಣಪತಿ ಸಾವಿಗೆ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಂಸದರು, ಈಗಾಗಲೇ ಸಚಿವ ಜಾರ್ಜ್ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸರ್ವೋಚ್ಚ ನ್ಯಾಯಾಲಯ ನೋಟೀಸ್ ಜಾರಿಗೊಳಿ ಸಿದೆ ಎಂದು ಬಹಿರಂಗಗೊಳಿಸಿದರು.

ಕಾಂಗ್ರೆಸ್ ಮೌನವೆಕೆ?

ಕೊಡಗಿನ ನಿಷ್ಠಾವಂತ ಪೊಲೀಸ್ ಅಧಿಕಾರಿ ಗಣಪತಿ ಅವರ ನಿಗೂಢ ಸಾವಿನ ಬಗ್ಗೆ ಕಾಂಗ್ರೆಸ್ಸಿಗರ ಮೌನವೇಕೆ? ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ ಮುಂಬರುವ ಚುನಾವಣೆಯಲ್ಲಿ ಕೊಡಗಿನ ಜನತೆ ಮತ್ತೊಮ್ಮೆ ತಕ್ಕ ಪಾಠ ಕಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಸಹಿತ ಪದಾಧಿಕಾರಿಗಳು ಹಾಜರಿದ್ದರು.