ಸಿದ್ದಾಪುರ, ಆ. 26: ಹುಲಿ ಧಾಳಿಗೆ ಸಿಲುಕಿ ಮತ್ತೊಂದು ಜಾನುವಾರು ಸಾವನ್ನಪ್ಪಿದ ಘಟನೆ ಬಾಡಗ ಬಾಣಂಗಾಲ ಗ್ರಾಮದ ಮೈಲಾತ್‍ಪುರ ವ್ಯಾಪ್ತಿಯಲ್ಲಿ ನಡೆದಿದೆ.

ಕಳೆದ ಎರಡು ವಾರಗಳ ಹಿಂದೆ ಹುಲಿಯೊಂದು ಧಾಳಿ ನಡೆಸಿದ ಪರಿಣಾಮ ಎರಡು ಜಾನುವಾರುಗಳು ಮೃತಪಟ್ಟಿದ್ದವು. ಇದೀಗ ಶುಕ್ರವಾರ ರಾತ್ರಿ ಹುಲಿ ಧಾಳಿಗೆ ಕರುವೊಂದು ಮೃತಪಟ್ಟಿದ್ದು, ಗ್ರಾಮದಲ್ಲಿ ಆತಂಕ ಸೃಷ್ಠಿಯಾಗಿದೆ. ಕಾಫಿ ತೋಟದಲ್ಲಿ ಕರು ಮೇಯುತ್ತಿದ್ದ ಸಂದರ್ಭದಲ್ಲಿ ಹುಲಿಯು ಧಾಳಿ ನಡೆಸಿದ್ದು, ಕರುವಿನ ಕುತ್ತಿಗೆ ಬಾಗಕ್ಕೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು. ಹುಲಿಯ ಚಲನವಲನದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದು ಗ್ರಾಮದ ಹಿರಿಯರಾದ ಅಜ್ಜಿನಿಕಂಡ ರಾಜು ಅಪ್ಪಯ್ಯ ತಿಳಿಸಿದ್ದಾರೆ.

ಮಾಲ್ದಾರೆ ಮೈಲಾತ್‍ಪುರ ವ್ಯಾಪ್ತಿಯಲ್ಲಿ ಹುಲಿ ಧಾಳಿಗೆ ಜಾನುವಾರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹುಲಿಯ ಚಲನವಲನ ಅರಿಯಲು ಸಿಸಿ ಕ್ಯಾಮರಾ ಅಳವಡಿಸಿತ್ತು. ಈ ಸಂದರ್ಭ ಹುಲಿಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸಭೆ ನಡೆಸಿ, ಹುಲಿಯ ಸೆರೆಗೆ ಬೋನು ಅಳವಡಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಹುಲಿ ಸೆರೆಗೆ ಸಂಕೇತ್ ಒತ್ತಾಯ

ಕಾಡಾನೆಗಳ ಉಪಟಳದಿಂದ ತತ್ತರಿಸಿರುವ ಮಾಲ್ದಾರೆ ಗ್ರಾಮಸ್ಥರು, ಕಾರ್ಮಿಕರು ಹಾಗೂ ಬೆಳೆಗಾರರಿಗೆ ಇದೀಗ ಹುಲಿಯ ಹಾವಳಿಯಿಂದ ಮತ್ತಷ್ಟು ಭಯಭೀತರಾಗಿದ್ದಾರೆ. ಕಳೆದ ಎರಡು ವಾರಗಳಿಂದ ಈ ಭಾಗದಲ್ಲಿ ಜಾನುವಾರುಗಳ ಮೇಲೆ ಧಾಳಿ ನಡೆಸಿ ಕೊಂದಿರುವ ಘಟನೆ ನಡೆದಿದ್ದು, ಸಿಸಿ ಕ್ಯಾಮೆರಾದಲ್ಲಿ ಹುಲಿ ದೃಶ್ಯ ಸೆರೆಯಾಗಿದ್ದರೂ, ಅರಣ್ಯ ಇಲಾಖೆ ಹುಲಿಯನ್ನು ಹಿಡಿಯಲು ಮುಂದಾಗದೆ ನಿರ್ಲಕ್ಷ್ಯ ವಹಿಸುತ್ತಿದೆ. ಕೂಡಲೇ ಹುಲಿಯನ್ನು ಸೆರೆಹಿಡಿಯ ಬೇಕೆಂದು ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಒತ್ತಾಯಿಸಿದ್ದಾರೆ.

ವರದಿ: ಎ.ಎನ್. ವಾಸು