*ಸಿದ್ದಾಪುರ, ಆ. 28: ಇತ್ತೀಚೆಗೆ ಇಲ್ಲಿ ಹತ್ಯೆ ಮಾಡಲು ಗೋವುಗಳನ್ನು ಅಕ್ರಮವಾಗಿ ಸಾಗಿಸಿ ನೆಲ್ಯಹುದಿಕೇರಿ ಮಸೀದಿ ಹಿಂಭಾಗ ಕಟ್ಟಿದಲ್ಲದೆ ಗೋವುಗಳ ರಕ್ಷಣೆಗೆ ತೆರಳಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಕೊಲೆ ಬೆದರಿಕೆ ಹಾಕಿರುವ ಬೆಳವಣಿಗೆಯನ್ನು ಸಿದ್ದಾಪುರ ಭಾರತೀಯ ಜನತಾ ಪಕ್ಷದ ಸ್ಥಾನೀಯ ಸಮಿತಿ ಖಂಡಿಸುತ್ತದೆ ಎಂದು ಹೇಳಿಕೆ ನೀಡಿದೆ.

ಸಿದ್ದಾಪುರ ಮತ್ತು ನೆಲ್ಯಹುದಿಕೇರಿಯಲ್ಲಿ ಗೋವುಗಳ ಅಕ್ರಮ ಸಾಗಾಟ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಸಮಾಜದ ಸ್ವಾಸ್ಥ್ಯ ಹಾಳುಗೆಡುತ್ತಿರುವ ಪ್ರಕರಣದ ಕುರಿತು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕುಕ್ಕುನೂರು ನಾಣಯ್ಯ, ಕಾರ್ಯದರ್ಶಿ ಪಂದಿಕಂಡ ಅಶೋಕ್, ತಾಲೂಕು ಪಂಚಾಯತ್ ಸದಸ್ಯ ಕೆ.ಎಂ. ಜನೀಶ್, ಜಿಲ್ಲಾ ಕಾರ್ಯದರ್ಶಿ ಅನಿಲ್ ಶೆಟ್ಟಿ, ಕಾರ್ಯದರ್ಶಿ ಕೆ. ವಸಂತ್ ಕುಮಾರ್ ಹಾಗೂ ಸದಸ್ಯರು ಸಿದ್ದಾಪುರ ಮತ್ತು ನೆಲ್ಯಹುದಿಕೇರಿಯಲ್ಲಿ ಇತರೆ ಧರ್ಮೀಯರ ಭಾವನೆಗಳಿಗೆ, ಬದುಕಿಗೆ ಹಿಂದುಗಳು ತೊಂದರೆ ಮಾಡುತ್ತಿಲ್ಲ. ಹಿಂದುಗಳು ಹಾಗೂ ಹಿಂದೂ ಧರ್ಮದ ಧಾರ್ಮಿಕ ಭಾವನೆಗೆ ಅಡ್ಡಿ ಪಡಿಸಿ ಅವಮಾನಿಸುವದು ಖಂಡನೀಯ ಎಂದಿದ್ದಾರೆ.

ಕೊಡಗಿನಲ್ಲಿ ಗೋವುಗಳ ಹತ್ಯೆಗೆ ನಿಷೇಧವಿದೆ. ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣಾ ವೇದಿಕೆ ಹಾಗೂ ಗೋ ರಕ್ಷಾ ಸಮಿತಿಯ ಪ್ರಮುಖರು ಕಾನೂನು ಪಾಲಿಸುವ ಕೆಲಸವನ್ನಷ್ಟೇ ಮಾಡಿದ್ದಾರೆ. ಗ್ರಾಮದಲ್ಲಿ ಕೋಮು ಭಾವನೆ ಸೃಷ್ಟಿಸುವ ಕೆಲಸ ಮಾಡಿಲ್ಲ ಹಿಂದೂಗಳ ಭಾವನೆ ಕೆರಳಿಸಲು ಮುಂದಾದರೇ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಎಸ್‍ಡಿಪಿಐ ಕಾರ್ಯಕರ್ತರು ಗೂಂಡಾಗಳಂತೆ ವರ್ತಿಸುವದನ್ನು ಭಾರತೀಯ ಜನತಾ ಪಕ್ಷ ಖಂಡಿಸುತ್ತದೆ.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಕ್ರಮ ಗೋವುಗಳ ಸಾಗಾಣಿಕೆ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸಬೇಕು. ಕೊಡಗಿನ ನೆಲ, ಜಲ, ಸಂಸ್ಕøತಿ ಗೋವುಗಳ ರಕ್ಷಣೆ ಕೇವಲ ಭಾರತೀಯ ಜನತಾ ಪಕ್ಷ ಹಿಂದೂ ಸಂಘಟನೆಗಳ ಜವಾಬ್ದಾರಿ ಮಾತ್ರವಲ್ಲ. ಒಲೈಕೆ ರಾಜಕಾರಣ ಬಿಟ್ಟು ಭಾರತೀಯ ಸಂಸ್ಕøತಿಯ ಉಳಿವಿಗೆ ಎಲ್ಲರೂ ಶ್ರಮಿಸುವಂತಾಗಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.