ಮಡಿಕೇರಿ ಆ.28 : ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತರಾಷ್ಟ್ರೀಯ ಸಂಸ್ಥೆಯೊಂದು ವಿಯೆಟ್ನಾಂನಿಂದ ಕಾಳು ಮೆಣಸನ್ನು ಆಮದು ಮಾಡಿಕೊಂಡು ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಳಿಗೆಯೊಂದರ ಮೂಲಕ ವ್ಯವಹಾರ ನಡೆಸುತ್ತಿದೆ; ಇದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಸಮಿತಿಯ ನಾಮ ನಿರ್ದೇಶಿತ ಸದಸ್ಯರುಗಳು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದಸ್ಯರಾದ ಮಾಳೇಟಿರ ಕೆ.ಬೋಪಣ್ಣ, ಆಮದು ಮಾಡಿಕೊಂಡ ಕಾಳು ಮೆಣಸನ್ನು ಕಲಬೆರಕೆ ಮಾಡಿ ವ್ಯವಹಾರ ನಡೆಸಲಾಗುತ್ತಿದೆ. ಇದರಲ್ಲಿ ಎಪಿಎಂಸಿ ಆಡಳಿತ ಮಂಡಳಿ ಶಾಮೀಲಾಗಿರುವ ಬಗ್ಗೆ ಸಂಶಯವಿದೆ ಎಂದು ಆರೋಪಿಸಿದರು. ವಿಯೆಟ್ನಾಂನ 45 ಮೆಟ್ರಿಕ್ ಟನ್ ಕಾಳು ಮೆಣಸಿಗೆ ಅಂತರಾಷ್ಟ್ರೀಯ ಸಂಸ್ಥೆ 1,51,637 ರೂ. ಸೆಸ್ ಪಾವತಿ ಮಾಡಿದೆ. ಈ ಸಂಸ್ಥೆಯ ಶಾಖೆÉಯು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಮದು ಮಾಡಿಕೊಂಡ ಕಾಳು ಮೆಣಸನ್ನು ಬೆಂಗಳೂರಿನಲ್ಲೆ ವಿಲೇವಾರಿ ಮಾಡಬಹುದಿತ್ತು. ಆದರೆ, ಗೋಣಿಕೊಪ್ಪ ಎಪಿಎಂಸಿಯ ಮಳಿಗೆ ಮೂಲಕ ವ್ಯವಹಾರ ನಡೆಸುತ್ತಿರುವದು ಸಂಶಯಕ್ಕೆ ಕಾರಣವಾಗಿದೆ ಎಂದರು.

ಆಮದು ಮಾಡಿಕೊಂಡಿರುವ ಕಾಳು ಮೆಣಸು ಕಳಪೆ ಗುಣಮಟ್ಟದಿಂದ ಕೂಡಿದ್ದು, ಇದರ ಬೆಲೆ ಕೆ.ಜಿ.ಗೆ 223 ರೂ. ಮತ್ತು 225 ರೂ. ಎಂದು ದೃಢೀಕರಿಸಲಾಗಿದೆ. ಈ ಕಾಳು ಮೆಣಸನ್ನು ಕೊಡಗಿನ ಉತ್ತಮ ದರ್ಜೆಯ ಮೆಣಸೆಂದು ಬಿಂಬಿಸಿ ಕೊಡಗಿನ ಕಾಳು ಮೆಣಸಿನೊಂದಿಗೆ ಮಾರಾಟ ಮಾಡುವ ಹುನ್ನಾರ ನಡೆಯುತ್ತಿದೆ. ಇದರಿಂದ ಉತ್ತಮ ಗುಣಮಟ್ಟದ ಕಾಳು ಮೆಣಸನ್ನು ನೀಡುತ್ತಿರುವ ಕೊಡಗು ಜಿಲ್ಲೆಗೆ ಕಪ್ಪು ಚುಕ್ಕೆ ಮೂಡಲಿದೆ ಎಂದು ಬೋಪಣ್ಣ ಆತಂಕ ವ್ಯಕ್ತಪಡಿಸಿದರು.

ಎಪಿಎಂಸಿ ಆವರಣದಲ್ಲಿ ಈ ಸಂಸ್ಥೆ ಆರು ಮಳಿಗೆಗಳನ್ನು ಹೊಂದಿದ್ದು, ಕೇವಲ ಒಂದು ಮಳಿಗೆಗೆ ಮಾತ್ರ ಬಾಡಿಗೆ ಪಾವತಿಸುತ್ತಿದೆ. ಈ ಬಗ್ಗೆ ಏಪ್ರಿಲ್ 17 ರಂದು ಪರಿಶೀಲನೆ ನಡೆಸಿದಾಗ ಉಳಿದ ಮಳಿಗೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿರುವ ಮಳಿಗೆಗಳು ಎಂದು ತಿಳಿದು ಬಂದಿದೆ. ನಾಮನಿರ್ದೇಶಿತ ಸದಸ್ಯರುಗಳಾಗಿರುವ ನಾವುಗಳು ಆಡಳಿತ ಮಂಡಳಿ ಬಳಿ ಚರ್ಚಿಸಿದಾಗ ಮರು ಹರಾಜು ಪ್ರಕ್ರಿಯೆ ನಡೆಸುವದಾಗಿ ಭರವಸೆ ದೊರೆತಿತ್ತು. ಆದರೆ, ಇಲ್ಲಿಯವರೆಗೂ ಹರಾಜು ಪ್ರಕ್ರಿಯೆ ನಡೆದಿಲ್ಲ. ಈ ಎಲ್ಲಾ ಬೆಳವಣಿಗೆಗಳು ಕಾಳು ಮೆಣಸು ವ್ಯವಹಾರ ನಡೆಸುತ್ತಿರುವ ಸಂಸ್ಥೆ ಹಾಗೂ ಎಪಿಎಂಸಿ ಆಡಳಿತ ಮಂಡಳಿಯ ಬಗ್ಗೆ ಸಂಶಯವನ್ನು ಮೂಡಿಸುತ್ತಿದೆ ಎಂದು ಬೋಪಣ್ಣ ಆರೋಪಿಸಿದರು.

ಕೊಡಗಿನ ರೈತರಿಗೆ ಅನ್ಯಾಯವಾಗಬಾರದು ಎನ್ನುವ ಉದ್ದೇಶದಿಂದ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು. ಮತ್ತೊಬ್ಬ ಸದಸ್ಯರಾದ ಕಡೇಮಾಡ ಜೆ.ಕುಸುಮ ಮಾತನಾಡಿ, ಉತ್ತಮ ಗುಣಮಟ್ಟದ ಕೊಡಗಿನ ಕಾಳು ಮೆಣಸಿಗೆ ಕೆ.ಜಿ.ಗೆ 800 ರೂ. ಧಾರಣೆ ಇತ್ತು. ಆದರೆ, ಇಂದು ಆಮದಾಗಿರುವ ಕಳಪೆ ಗುಣಮಟ್ಟದ ಕಾಳು ಮೆಣಸಿನಿಂದಾಗಿ ಕೊಡಗಿನ ಮೆಣಸಿನ ದರ 400 ರೂ.ಗಳಿಗೆ ಕುಸಿದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸ್ಥಳೀಯ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಸರಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ ಉಪಸ್ಥಿತರಿದ್ದರು.