ಸೋಮವಾರಪೇಟೆ, ಆ.28: ಕೊಡಗಿನ ಮೂರು ಸಾವಿರಕ್ಕೂ ಅಧಿಕ ಮಂದಿಯ ನಿದ್ದೆಗೆಡಿಸಿದ್ದ ಸಿ ಮತ್ತು ಡಿ ಜಾಗದ ಹಕ್ಕು ಕುರಿತಾಗಿನ ಸಮಸ್ಯೆ ಕೊನೆಗೂ ಬಗೆಹರಿದಿದ್ದು, ಎಲ್ಲರಿಗೂ ಹಕ್ಕುಪತ್ರ ನೀಡಲು ತಕ್ಷಣ ಕ್ರಮ ಕೈಗೊಳ್ಳುವದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.ಸುಮಾರು 12 ವರ್ಷಗಳ ನಿರಂತರ ಹೋರಾಟ, ಸರ್ಕಾರದ ಗಮನ ಸೆಳೆದ ಹಿನ್ನೆಲೆ ಇದೀಗ ಅಧಿಕೃತ ಆದೇಶ ಹೊರಬಂದಿದ್ದು, ಅರ್ಜಿ ಸಮಿತಿಯಲ್ಲಿ ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ಸಿ ಮತ್ತು ಡಿ ಜಾಗದ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿದ ರಾಜ್ಯ ಸರ್ಕಾರದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಶಾಸಕ ರಂಜನ್ ಅಭಿನಂದನೆ ಸಲ್ಲಿಸುವದಾಗಿ ತಿಳಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಶಾಸಕ ರಂಜನ್, ಕಳೆದ ಹಲವಾರು ದಶಕಗಳಿಂದ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದ ಮತ್ತು ಕೃಷಿ ಕಾರ್ಯಗಳನ್ನು ಕೈಗೊಂಡಿದ್ದ ಸಾವಿರಾರು ರೈತರಿಗೆ ಸರ್ಕಾರದಿಂದ ಯಾವದೇ ಸವಲತ್ತು ಸಿಗುತ್ತಿರಲಿಲ್ಲ. ಕಳೆದ 1978 ಮತ್ತು 79 ಮತ್ತು 1994-95ರಲ್ಲಿ ನಡೆದ ಸರ್ವೆಯಲ್ಲಿ ಇಂತಹ ಜಾಗವನ್ನು ಸಿ ಮತ್ತು ಡಿ ಎಂದು ವರ್ಗೀಕರಿಸಿ ಅರಣ್ಯ ಇಲಾಖೆ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. ಸರ್ಕಾರ ಕೇವಲ ಸರ್ವೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದರೂ ಸಹ ಅರಣ್ಯ ಇಲಾಖೆ ತನ್ನ ವಶಕ್ಕೆ ತೆಗೆದುಕೊಂಡ ಹಿನ್ನೆಲೆ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕುವಂತಾಯಿತು ಎಂದು ಶಾಸಕರು ಮಾಹಿತಿ ನೀಡಿದರು.

ಇಂತಹ ಜಾಗದಲ್ಲಿ ನೆಲೆನಿಂತು ಕೃಷಿ ಕಾರ್ಯ ಕೈಗೊಂಡು ಬದುಕು ಕಟ್ಟಿಕೊಂಡಿರುವ ರೈತರಿಗೆ ಜಾಗದ ಮಾಲೀಕತ್ವದ ಬಗ್ಗೆ ಯಾವದೇ ದಾಖಲೆಗಳು ಇಲ್ಲದ್ದರಿಂದ ಸರ್ಕಾರದ ಅನೇಕ ಯೋಜನೆಗಳು ಹಾಗೂ ಸೌಲಭ್ಯಗಳಿಂದ ವಿಮುಖರಾಗಿದ್ದರು. ಇದನ್ನು ಮನಗಂಡು ತಾನು ಕಳೆದ 12 ವರ್ಷಗಳಿಂದ ವಿಧಾನ ಸಭೆಯಲ್ಲಿ ನಿರಂತರ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ಹಿಂದೆ ಅರ್ಜಿ ಸಮಿತಿಯ ಅಧ್ಯಕ್ಷರಾಗಿದ್ದಾಗಲೂ ಈ ಬಗ್ಗೆ ಕ್ರಮ ವಹಿಸಲಾಗಿತ್ತು. ಅದರಂತೆ ಯಡವನಾಡು ಮತ್ತು ಅತ್ತೂರು ಭಾಗದಲ್ಲಿನ ರೈತರಿಗೆ ಹಕ್ಕುಪತ್ರ ಲಭಿಸಿ ನೆಮ್ಮದಿಯ ಜೀವನಕ್ಕೆ ಅನುವು ಮಾಡಿಕೊಡಲಾಗಿತ್ತು ಎಂದು ರಂಜನ್ ಸ್ಮರಿಸಿದರು.

ಇದೀಗ ಸಿ ಮತ್ತು ಡಿ ಜಾಗದ ಸಮಸ್ಯೆ ಬಗೆಹರಿದಿದೆ. ಅರ್ಜಿ ಹಾಕಿದ್ದ ರೈತರಿಗೆ ಸಿ ಮತ್ತು ಡಿ ಜಾಗದ ಸಮಸ್ಯೆ ಯಿಂದ ಹಕ್ಕುಪತ್ರ ನೀಡಲು ಸಾಧ್ಯ ವಾಗಿರಲಿಲ್ಲ. ಕೆಲವರ ಅರ್ಜಿಯನ್ನು ತಡೆ ಹಿಡಿದಿದ್ದರೆ, ಕೆಲವರ ಅರ್ಜಿ ಯನ್ನು ತಿರಸ್ಕರಿಸಲಾಗಿತ್ತು. ಈ ಬಗ್ಗೆಯೂ ಅರ್ಜಿ ಸಮಿತಿಯಡಿ ಮನವಿ ಸಲ್ಲಿಸಿ ಇದೀಗ ಅಧಿಕೃತ ಆದೇಶ ತಂದಿರುವದಾಗಿ ರಂಜನ್ ತಿಳಿಸಿದರು.

(ಮೊದಲ ಪುಟದಿಂದ)

ಫಾರಂ 50 ಮತ್ತು 53ರಡಿ ಅರ್ಜಿ ಸಲ್ಲಿಸಿರುವ ಸಿ ಮತ್ತು ಡಿ ಜಾಗದಲ್ಲಿರುವ ರೈತರು ತಕ್ಷಣ ತಮ್ಮ ಅರ್ಜಿಯ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲು ತಮ್ಮ ಕಚೇರಿಯನ್ನು ಸಂಪರ್ಕಿಸಬೇಕು. ಇಂತಹ ಜಾಗದಲ್ಲಿ ನೆಲೆನಿಂತು ಇದುವರೆಗೂ ಅರ್ಜಿ ಹಾಕದೇ ಇರುವವರ ಬಗ್ಗೆಯೂ ಮುಂದಿನ ದಿನಗಳಲ್ಲಿ ವಿಧಾನ ಸಭೆಯಲ್ಲಿ ಪ್ರಸ್ತಾಪಿಸಲಾಗುವದು ಎಂದು ರಂಜನ್ ಭರವಸೆ ನೀಡಿದರು.

ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ರೈತರ ಸಮಸ್ಯೆಯ ಬಗ್ಗೆ ಸಂಪೂರ್ಣ ಅರಿವಿದ್ದುದರಿಂದ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿದ್ದಾರೆ. ತಾನು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಆಗಾಗ್ಗೆ ಈ ಬಗ್ಗೆ ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ, ಕ್ರಮಕ್ಕೆ ಆಗ್ರಹಿಸಿದ ಮೇರೆ ಸಚಿವರು ಹೆಚ್ಚಿನ ಕಾಳಜಿ ವಹಿಸಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದರು.

ಇದರೊಂದಿಗೆ ತಕ್ಷಣಕ್ಕೆ ಎರಡು ಸಭೆ ಕರೆದು ಬಾಕಿ ಉಳಿದಿರುವ ಇಂತಹ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಿದ್ದು, ಉಳಿದಿರುವ ಅರ್ಜಿಗಳನ್ನು ವಿಲೇ ಮಾಡಲಾಗುವದು. ಸರ್ವೆ ಆಗದೇ ಇರುವ ಅರ್ಜಿಗಳಲ್ಲಿನ ಜಾಗವನ್ನು ಸರ್ವೆ ಮಾಡಲು ಸಂಬಂಧಿಸಿದವರಿಗೆ ಸೂಚಿಸಲಾಗುವದು ಎಂದು ರಂಜನ್ ತಿಳಿಸಿದರು.

ಈ ವರ್ಷವೂ ಸಹ ಶಾಸಕ ರಂಜನ್ ಅವರು ರಾಜ್ಯ ಅರ್ಜಿ ಸಮಿತಿಗೆ ಸಲ್ಲಿಸಿದ ಅರ್ಜಿಯಲ್ಲಿ, ಕೊಡಗು ಜಿಲ್ಲೆಯಲ್ಲಿ ಇಲಾಖೆಯಿಂದ ಯಾವದೇ ಭೌತಿಕ ಪರಿಶೀಲನೆ ನಡೆಸದೇ ಕೇವಲ ಭೂಪಟವನ್ನು ಆಧರಿಸಿ ಸಿ ಮತ್ತು ಡಿ ವರ್ಗದ ಜಮೀನಾಗಿ ಪರಿವರ್ತಿಸಿರುವದರಿಂದ ಸದರಿ ಜಾಗದಲ್ಲಿ ಮನೆ ನಿರ್ಮಿಸಿರುವವರಿಗೆ ಹಾಗೂ ಹಲವಾರು ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಜೀವನವನ್ನು ನಡೆಸುತ್ತಿರುವ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಸಿ ಮತ್ತು ಡಿ ಜಾಗವನ್ನು ಹಿಂದಕ್ಕೆ ಪಡೆದು ಸದರಿ ಜಮೀನನ್ನು ಪೈಸಾರಿಯಾಗಿ ಪರಿವರ್ತಿಸಬೇಕು ಎಂದು ಸಾರ್ವಜನಿಕರ ಪರವಾಗಿ ಮನವಿ ಮಾಡಿದ್ದರು.

ಕೊಡಗಿನಲ್ಲಿ ಒಟ್ಟು 6105ಎಕರೆ 20 ಸೆಂಟ್ಸ್ ಜಾಗ ಸಿ ಮತ್ತು ಡಿ ಇದ್ದುದು ಇನ್ನು ಮುಂದೆ ಕಂದಾಯ ಇಲಾಖೆಗೆ ವಾಪಸ್ ಪಡೆದು, ಇದರಲ್ಲಿ ಕೃಷಿ ಕಾರ್ಯ ಕೈಗೊಂಡಿರುವ, ಮನೆ ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ನೀಡಲು ಕ್ರಮ ವಹಿಸಲು ನಿರ್ಧರಿಸಲಾಗಿದೆ.

6105.20 ಏಕರೆ ಪ್ರದೇಶಕ್ಕೆ ಸಂಬಂಧಿಸಿದಂತೆ ಕೊಡಗಿನ ಮೂರು ತಾಲೂಕುಗಳಿಂದ 3669 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿಯೇ ಅತೀ ಹೆಚ್ಚು ಅಂದರೆ 3032 ಮಂದಿ 4368.20 ಏಕರೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ 1249 ಏಕರೆಗೆ ಸಂಬಂಧಿಸಿದಂತೆ 523 ಮಂದಿ, ವೀರಾಜಪೇಟೆ ತಾಲೂಕಿಗೆ ಸಂಬಂಧಿಸಿದಂತೆ 488 ಏಕರೆಗೆ 114 ಮಂದಿ ಅರ್ಜಿ ಸಲ್ಲಿಸಿದ್ದು, ಇದೀಗ ಹಕ್ಕುಪತ್ರ ಪಡೆಯಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಆ ಮೂಲಕ ಅನೇಕ ದಶಕಗಳಿಂದ ಸಾವಿರಾರು ರೈತ ಕುಟುಂಬದ ನೆಮ್ಮದಿ ಕೆಡಿಸಿದ್ದ ಸಿ ಮತ್ತು ಡಿ ಜಾಗ ಸಮಸ್ಯೆ ಕೊನೆಗೂ ಬಗೆಹರಿದಿದೆ.