ಮಡಿಕೇರಿ, ಆ.28 : ಡಿವೈಎಸ್‍ಪಿ ಗಣಪತಿ ಅವರನ್ನು ರಾಜ್ಯ ಸರಕಾರ ಕೊಲೆ ಮಾಡಿದೆ ಎಂದು ಆರೋಪಿಸಿರುವ ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವವರೆಗೆ ಪಕ್ಷದ ವತಿಯಿಂದ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದಲ್ಲಿ ಹಾಗೂ ಬಿ.ಎ.ಜೀವಿಜಯ ಅವರ ಮುಂದಾಳತ್ವದಲ್ಲಿ

(ಮೊದಲ ಪುಟದಿಂದ) ಕೊಡಗು ಜಿಲ್ಲೆಯಲ್ಲಿ ಹೋರಾಟ ನಡೆಯಲಿದೆ ಎಂದರು. ಗಣಪತಿ ಅವರ ಸಾವಿನ ಪ್ರಕರಣದಲ್ಲಿ ಸ್ವತಃ ಮುಖ್ಯಮಂತ್ರಿಯೇ ಪೊಲೀಸರ ಮೇಲೆ ಒತ್ತಡ ಹೇರಿ ತನಿಖೆಯ ಹಾದಿ ತಪ್ಪುವಂತೆ ನೋಡಿಕೊಂಡರು ಎಂದು ಆರೋಪಿಸಿದ ಅವರು, ಸಿಐಡಿ ತನಿಖೆಯಿಂದ ಸಾಕ್ಷ್ಯಗಳು ನಾಶವಾಗುತ್ತವೆ ಎಂದು ಈ ಹಿಂದೆ ಕುಮಾರಸ್ವಾಮಿ ಅವರು ವ್ಯಕ್ತಪಡಿಸಿದ್ದ ಅಭಿಪ್ರಾಯ ನಿಜವಾಗಿದೆ ಎಂದರು.

ನ್ಯಾಯಾಂಗ ತನಿಖೆಯ ವರದಿ ಬರುವ ಮೊದಲೇ ಕೆ.ಜೆ.ಜಾರ್ಜ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಸಂಕೇತ್ ಪೂವಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಗಣಪತಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳುವುದಕ್ಕೂ ಜಿಲ್ಲೆಗೆ ಬಾರದ ಮುಖ್ಯಮಂತ್ರಿಗಳು ಕೊಡಗು ಜಿಲ್ಲೆಯಲ್ಲಿ ಕೇವಲ ಎರಡು ಕ್ಷೇತ್ರಗಳಿವೆ ಎನ್ನುವ ಕಾರಣಕ್ಕಾಗಿ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ. ಕಾಡಾನೆ ಧಾಳಿಗೆ 38 ಮಂದಿ ಕಾರ್ಮಿಕರು ಹಾಗೂ ಬಡವರು ಸಾವನ್ನಪ್ಪಿದ್ದಾರೆ. ಯಾವದೇ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸುತ್ತಿಲ್ಲವೆಂದರು.

ಡಿವೈಎಸ್‍ಪಿ ಗಣಪತಿ ಪ್ರಕರಣದಲ್ಲಿ ವಕಾಲತ್ತು ವಹಿಸಿರುವ ವಕೀಲ ಅಮೃತ್ ಸೋಮಯ್ಯ ಮಾತನಾಡಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವ ಮೊದಲೇ ಬಿ ರಿಪೋರ್ಟ್ ನೀಡಿರುವದು ಸರಿಯಾದ ಕ್ರಮವಲ್ಲವೆಂದರು. ಗಣಪತಿ ಕುಟುಂಬ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಆರೋಪಿಗಳಿಗೆ ಈಗಾಗಲೆ ನೋಟೀಸ್ ಜಾರಿಯಾಗಿದೆ. ಈ ಪ್ರಕರಣವನ್ನು ಸಿಬಿಐ ತನಿಖೆÉಗೆ ಯಾಕೆ ಒಪ್ಪಿಸಬಾರದೆಂದು ಆರೋಪಿಗಳಿಂದ ಸ್ಪಷ್ಟೀಕರಣವನ್ನು ಬಯಸಲಾಗಿತ್ತು. ಇದಕ್ಕೆ ಉತ್ತರ ನೀಡದ ಕಾರಣ ನ್ಯಾಯಾಲಯ 15 ದಿನಗಳ ಕಾಲಾವಕಾಶವನ್ನು ನೀಡಿತ್ತು. ಈ ಬೆಳವಣಿಗೆಯ ನಡುವೆಯೆ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದಿದೆ ಎಂದರು.

ಗೋಷ್ಠಿಯಲ್ಲಿ ಜೆಡಿಎಸ್‍ನ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್.ಮತೀನ್, ವಾಣಿಜ್ಯ ಘಟಕದ ಅಧ್ಯಕ್ಷ ಪಾರೆಮಜಲು ಕುಸುಮ ಕಾರ್ಯಪ್ಪ, ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಎಸ್.ಜಿ.ಗೋಪಾಲ್ ಹಾಗೂ ಪ್ರಮುಖ ಮಚ್ಚಮಾಡ ಮಾಚಯ್ಯ ಉಪಸ್ಥಿತರಿದ್ದರು.