ಸೋಮವಾರಪೇಟೆ, ಆ. 28 : 1965ರಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಭಾರತ ಐತಿಹಾಸಿಕ ಜಯ ಸಾಧಿಸಿದ ಹಿನ್ನೆಲೆ ಸೋಮವಾರಪೇಟೆ ಲಯನ್ಸ್ ಸಂಸ್ಥೆ ವತಿಯಿಂದ ವಿಜಯೋತ್ಸವ ಆಚರಿಸಿ, ಯುದ್ಧದಲ್ಲಿ ಭಾಗವಹಿಸಿದ ನಾಲ್ವರು ಸೈನಿಕರನ್ನು ಸನ್ಮಾನಿಸಲಾಯಿತು.ಸ್ಥಳೀಯ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎ.ಎಸ್. ಮಹೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ 1965ರಲ್ಲಿ ಭಾರತ-ಪಾಕ್ ಯುದ್ಧದಲ್ಲಿ ಭಾಗವಹಿಸಿದ ಸೋಮವಾರಪೇಟೆಯ ಕಾಗಡಿಕಟ್ಟೆಯ ಮಾಜೀ ಸೈನಿಕ ಮೇಜರ್ ಮಂದಪ್ಪ, ಯಡವಾರೆ ಗ್ರಾಮದ ಲ್ಯಾನ್ಸ್‍ನಾಯಕ್ ಎಂ.ಎಸ್. ಪೊನ್ನಪ್ಪ, ಬಳಗುಂದ ಗ್ರಾಮದ ಹವಾಲ್ದಾರ್ ಡಿ. ಶಿವಪ್ಪ, ಶಿರಂಗಳ್ಳಿಯ ಲ್ಯಾನ್ಸ್ ನಾಯಕ್ ಎನ್.ಪಿ. ಅಯ್ಯಪ್ಪ ಅವರುಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

1965ರ ಯುದ್ಧ ಸಂದರ್ಭದ ಅನುಭವಗಳನ್ನು ಮೇಜರ್ ಮಂದಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಮತ್ತು ವಿದ್ಯಾರ್ಥಿಗಳೆದುರು ತೆರೆದಿಟ್ಟರು.