ಗೋಣಿಕೊಪ್ಪಲು, ಆ. 28: ಸೂಕ್ಷ್ಮ ಪರಿಸರ ವಲಯಕ್ಕೆ ಬಾಳೆಲೆ ಸುತ್ತಮುತ್ತಲಿನ 9 ಗ್ರಾಮಗಳನ್ನು ಸೇರಿಸಲು ಮುಂದಾಗಿರುವ ಬಗ್ಗೆ ಜನಾಭಿಪ್ರಾಯದ ಮೂಲಕ ಆಕ್ಷೇಪ ಸಲ್ಲಿಸಲು ತಾ. 30 ರಂದು ಬಾಳೆಲೆ ಕೊಡವ ಸಮಾಜದಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವದು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಬಾನಂಡ ಪ್ರಥ್ಯು ತಿಳಿಸಿದ್ದಾರೆ. ಅಂದು ಬೆ. 10.30 ಕ್ಕೆ ನಡೆಯುವ ಸಭೆಗೆ ಸುತ್ತಮುತ್ತಲಿನ ಸಾರ್ವಜನಿಕರು, ಸಮಾಜಗಳು, ವಿವಿಧ ಸಂಘ ಸಂಸ್ಥೆಗಳು ಹಾಗೂ ವಿವಿಧ ಪಕ್ಷದ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಮನವಿ ಮಾಡಲು ಸಭೆ ನಡೆಸಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾಳೆಲೆ ಗ್ರಾ ಪಂ ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್ ಮಾತನಾಡಿ, ಗ್ರಾಮಸಭೆಯಲ್ಲಿ ಅರಣ್ಯ ಇಲಾಖೆ ಎಸಿಎಫ್ ಶ್ರೀಪತಿ ಅವರಿಂದ ಈ ಬಗ್ಗೆ ಮಾಹಿತಿ ಬಯಸಿದಾಗ ಯಾವದೇ ಮಾಹಿತಿ ಅವರಿಂದ ದೊರೆತಿಲ್ಲ. ಇದರಿಂದಾಗಿ ಜನರು ಗೊಂದಲಕ್ಕೆ ಒಳಪಟ್ಟಿದ್ದಾರೆ. ಅಧಿಸೂಚನೆ ಹೊರಡಿಸಿರುವ 60 ದಿನಗಳಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶವಿರುವದರಿಂದ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ಸಾರ್ವಜನಿಕ ಸಭೆಗೆ ಬೆಂಬಲ ನೀಡಬೇಕಾಗಿದೆ ಎಂದರು. ಗೋಷ್ಠಿಯಲ್ಲಿ ಕೋತೂರು ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಇದ್ದರು.