ಮಡಿಕೇರಿ, ಆ. 28: ಕಳೆದ 24 ಗಂಟೆಗಳಲ್ಲಿ ಕೊಡಗಿನಾದ್ಯಂತ ಮುಂಗಾರು ವರ್ಷಾಧಾರೆಯ ಆರ್ಭಟದೊಂದಿಗೆ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿದೆ. ನಗರದ ದಾಸವಾಳ ಬಳಿಯ ಶ್ರೀ ಮುನೇಶ್ವರ ದೇಗುಲಕ್ಕೆ ಹೊಂದಿಕೊಂಡಂತೆ ಬುಡ ಸಹಿತ ಮರಗಳು ಧರೆಗುರುಳುವದರೊಂದಿಗೆ ಬರೆ ಕುಸಿದಿದ್ದು, ಸ್ವಲ್ಪದರಲ್ಲಿ ಹಾನಿ ತಪ್ಪಿದಂತಾಗಿದೆ. ಇನ್ನು ಕೂಡಿಗೆ ಬಳಿ ಬಸವನತ್ತೂರು ನಿವಾಸಿ, ಗಫರ್ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿದರೆ, ವೀರಾಜಪೇಟೆ ಕೊಟ್ಟೋಳಿಯ ಗುಂಡಿಕೆರೆ ಅಹಮ್ಮದ್ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.

ಕೊಡಗಿನ ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ 48 ಗಂಟೆಗಳಲ್ಲಿ 11 ಇಂಚು ಮಳೆಯಾಗುವದರೊಂದಿಗೆ ಭಾಗಮಂಡಲ ಸಂಗಮ ಕ್ಷೇತ್ರದಲ್ಲಿ ನದಿ ಪ್ರವಾಹ ಅಧಿಕಗೊಂಡಿದೆ. ಸಂಜೆಗತ್ತಲೆ ನಡುವೆ ಅಯ್ಯಂಗೇರಿ ಮಾರ್ಗ ಮುಳುಗಡೆಯ ಸಾಧ್ಯತೆಯಿದ್ದು, ಅರ್ಧ ಅಡಿಯಷ್ಟು ನೀರು ರಸ್ತೆಯ ಮೇಲೆ ಹರಿಯತೊಡಗಿದೆ. ಸಂಗಮ ಕ್ಷೇತ್ರ ಮುಳುಗಡೆಗೊಂಡು ಮಡಿಕೇರಿ - ಭಾಗಮಂಡಲ ಮಾರ್ಗದಲ್ಲೂ ನೀರು ಅಧಿಕಗೊಳ್ಳತೊಡಗಿದೆ. ಮಳೆಯ ರಭಸದಿಂದ ಜಿಲ್ಲೆಯಾದ್ಯಂತ ಸಾರ್ವಜನಿಕ ಗಣೇಶೋತ್ಸವಗಳು, ಅಲ್ಲಲ್ಲಿ ಕೈಲ್ ಮುಹೂರ್ತ ಕ್ರೀಡಾ ಕೂಟಕ್ಕೂ ಅಡಚಣೆ ಉಂಟಾಗಿದೆ.

ಹುಬ್ಬಾ ಮಳೆ

ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಮುಂಗಾರು ಹಿನ್ನೆಲೆಯ ಕೊರತೆಯನು ಕೊನೆಯ ದಿನಗಳಲ್ಲಿ ಮಖೆ ಮಳೆಯು ಭರಿಸುವದರೊಂದಿಗೆ ಕೃಷಿ ಹಂಗಾಮು ಹಿನ್ನೆಡೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಿದೆ. ತಾ. 30 (ನಾಳೆ) ಮಖೆ ಕೊನೆಗೊಳ್ಳಲಿದ್ದು, ತಾ. 31 ರಿಂದ ಹುಬ್ಬಾ ಮಳೆ ಅಡಿಯಿಡಲಿದೆ.

ಸಾಮಾನ್ಯವಾಗಿ ಕೊಡಗಿನಾದ್ಯಂತ ಮುಂಗಾರು ಕೃಷಿ ಚಟುವಟಿಕೆಯು ಕೈಲ್ ಮುಹೂರ್ತ ಹಬ್ಬದ ತನಕ ಸಾಗಲಿದ್ದು, ಆ ಬಳಿಕ ಕೃಷಿ ಉಪಕರಣಗಳಿಗೆ ಪೂಜಿಸಿ, ಅವುಗಳಿಗೆ ವಿರಾಮ ಹೇಳುವದು

(ಮೊದಲ ಪುಟದಿಂದ) ಈ ನಾಡಿನ ವಾಡಿಕೆ. ಆ ಮೇರೆಗೆ ಈಗಾಗಲೇ ಏಳು ಸಾವಿರ ಸೀಮೆಯ ಸೂರ್ಲಬ್ಬಿ ನಾಡಿನಲ್ಲಿ ತಾ. 21 ಹಾಗೂ 22 ರಂದು ಕೈಲ್ ಮುಹೂರ್ತ ಆಚರಣೆಗೊಂಡು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಟಿ ಕಾರ್ಯ ಪೂರೈಸಲಾಗಿದೆ.

ಆ ಬೆನ್ನಲ್ಲೇ ನಾಲ್ಕು ನಾಡು ವ್ಯಾಪ್ತಿಯ ಗ್ರಾಮೀಣ ಜನತೆ ಕೂಡ ತಾ. 26 ಹಾಗೂ 27 ರಂದು ಕೈಲ್ ಮುಹೂರ್ತ ಆಚರಿಸುವ ಮೂಲಕ ಪರಂಪರಾಗತ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ. ಇದರೊಂದಿಗೆ ಕಕ್ಕಡ ಮಾಸದಲ್ಲಿ ಪದ್ಧತಿಯಂತೆ ಗ್ರಾಮೀಣ ದೇವಾಲಯಗಳಲ್ಲಿ ಸ್ಥಗಿತಗೊಂಡಿದ್ದ ಪೂಜಾ ಕೈಂಕರ್ಯಗಳಿಗೂ ಚಾಲನೆ ಲಭಿಸಿದೆ. ವಿಶೇಷವಾಗಿ ಕೊಡಗಿನ ಮಳೆ - ಬೆಳೆ ದೇವನೆಂಬ ಖ್ಯಾತಿಯ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ತಾ. 26 ರಂದು ಸಿಂಹ ಮಾಸದ (ಚಿನ್ಯಾರ್ -10) ಪೂಜೆಯೊಂದಿಗೆ ನಿತ್ಯದ ವಿಶೇಷ ಸೇವೆಗಳು ಜರುಗುವಂತಾಗಿದೆ.

ಇನ್ನು ಭಾಗಮಂಡಲ ನಾಡಿನಲ್ಲಿ ಇಂದು ಸಾಮೂಹಿಕ ಕೈಲ್ ಮುಹೂರ್ತ ಆಚರಣೆಗೊಂಡಿದ್ದು, ನಾಲ್ಕುನಾಡು ಹಾಗೂ ಭಾಗಮಂಡಲ ನಾಡಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯು ಕೈಲ್ ಮುಹೂರ್ತ ಕ್ರೀಡಾಕೂಟಕ್ಕೆ ಆಡಚಣೆಯಾದ ಕುರಿತು ತಿಳಿದು ಬಂದಿದೆ. ಸೆ. 3 ರಂದು ಜಿಲ್ಲೆಯ ಇತರೆಡೆಗಳಲ್ಲಿ ಆಚರಣೆಯೊಂದಿಗೆ ನಾಡಿನ ಕೈಲ್ ಮುಹೂರ್ತ ಉತ್ಸವಕ್ಕೆ ತೆರೆ ಬೀಳಲಿದೆ.

ಬಾದ್ರಪದ ಮಾಸದ ಚೌತಿ ಯಂದು ಸಾರ್ವತ್ರಿಕವಾಗಿ ನಡೆದ ಶ್ರೀ ಗೌರಿ - ಗಣೇಶೋತ್ಸವ ಬೆನ್ನಲ್ಲೇ ತಾ. 25ರ ರಾತ್ರಿಯಿಂದಲೇ ವಾಡಿಕೆಯ ಗೌರಿ ಮಳೆಯು ಆಶಾದಾಯಕವಾಗಿ ಸುರಿದ ಪರಿಣಾಮ, ಕೆಲವೆಡೆ ನೀರಿನ ಕೊರತೆಯಿಂದ ಹಿನ್ನೆಡೆಯಾಗಿದ್ದ ಕೃಷಿ ಕಾರ್ಯ ವೇಗವನ್ನು ಪಡೆದು ಕೊಂಡಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಇಂದು ಕೈಲ್ ಮುಹೂರ್ತ ನಡುವೆಯೂ ಮಳೆ ತೀವ್ರವಿದ್ದ ಪರಿಣಾಮ ಗ್ರಾಮೀಣ ಕ್ರೀಡೆ ಮುಂದೂಡಲ್ಪಟ್ಟ ಬಗ್ಗೆ ವರದಿ ಯಾಗಿದೆ. ಸಂಗಮ ಕ್ಷೇತದ್ರಲ್ಲಿ ನೀರಿನ ಪ್ರಮಾಣ ಅಧಿಕಗೊಳ್ಳತೊಡಗಿದೆ. ಯಾವದೇ ಅಪಾಯ ಎದುರಾಗಿಲ್ಲ.

ಬರೆಕುಸಿತ : ಮಡಿಕೇರಿಯ ದಾಸವಾಳ ಬೀದಿಯ ಶ್ರೀ ಮುನೇಶ್ವರ ಗುಡಿಗೆ ಹೊಂದಿಕೊಂಡಂತೆ, ಮೂರ್ನಾಲ್ಕು ಮರಗಳು ಉರುಳಿವೆ. ದೇವಾಲಯಕ್ಕೆ ಈ ವೇಳೆ ಸ್ವಲ್ಪದರಲ್ಲಿ ಹಾನಿ ತಪ್ಪಿರುವ ದೃಶ್ಯ ಗೋಚರಿಸಿದೆ.

ಮನೆಗೆ ಮರ : ಇನ್ನು ವೀರಾಜಪೇಟೆ ಸಮೀಪದ ಕೊಟ್ಟೊಳಿ ಗ್ರಾಮದ ಗುಂಡಿಗೆರೆ ಎಂಬಲ್ಲಿ ಅಹಮ್ಮದ್ ಎಂಬವರಿಗೆ ಸೇರಿದ ಮನೆಯ ಮೇಲೆ ಭಾರೀ ಮರವೊಂದು ಬಿದ್ದು ಹಾನಿಯಾಗಿದ್ದು, ಈ ಬಗ್ಗೆ ಪರಿಹಾರ ಕೋರಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದ್ದಾರೆ. ಯಾವದೇ ಪ್ರಾಣಾಪಾಯ ಸಂಭವಿಸಿಲ್ಲವೆಂದು ಜಿಲ್ಲಾಡಳಿತ ಖಚಿತಪಡಿಸಿದೆ. ಒಟ್ಟಿನಲ್ಲಿ ಮಖೆ ಕೊನೆಯ ದಿನಗಳಲ್ಲಿ ಬಿರುಸಿನಿಂದ ಕಂಡ ಬಂದಿದ್ದು, ಮುಂದೆ ಹುಬ್ಬಾ ಮಳೆಯ ಸನ್ನಿವೇಶ ನೋಡಬೇಕಷ್ಟೆ. ಈ ನಡುವೆ ಇಂದು ಜಿಲ್ಲೆಯಾದ್ಯಂತ 34 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಮೂರ್ತಿಗಳ ವಿಸರ್ಜನೆಯೂ ಜರುಗಿದೆ.

ನಾಪೆÇೀಕ್ಲು: ಕಳೆದ 24 ಗಂಟೆಗಳಿಂದ ನಾಪೆÇೀಕ್ಲು ವ್ಯಾಪ್ತಿಯ ಗ್ರಾಮಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯ ಪರಿಣಾಮ ಕಾವೇರಿ ನದಿ ಸೇರಿದಂತೆ ಹೊಳೆ, ಹಳ್ಳ, ಕೊಳ್ಳಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಹರಿಯುತ್ತಿದೆ. ನದಿ ಪಾತ್ರದ ರೈತರು ಪ್ರವಾಹ ತಪ್ಪಿಸುವ ಸಲುವಾಗಿ ತಿಂಗಳ ಕೊನೆವಾರದಲ್ಲಿ ಭತ್ತದ ಗದ್ದೆ ನಾಟಿ ಕಾರ್ಯ ನೆರವೇರಿಸುವದು ವಾಡಿಕೆಯಾಗಿದೆ. ಆದರೆ ಈ ಭಾರೀ ತಿಂಗಳ ಕೊನೆವಾರದಲ್ಲಿ ಮಳೆರಾಯ ತನ್ನ ಬಿರುಸು ತೋರಿರುವ ಕಾರಣ ಈ ವಿಭಾಗದ ಭತ್ತದ ಕೃಷಿಕರಿಗೂ ಪ್ರವಾಹದ ಭೀತಿ ಮೂಡಿದ್ದು ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ.

ಬೆಳೆಗಾರರಿಗೂ ಆತಂಕ: ಪ್ರಸ್ತುತ ಸುರಿಯುತ್ತಿರುವ ಮಳೆಯು ಕಾಫಿ ಮತ್ತು ಕಾಳು ಮೆಣಸು ಬೆಳೆಗಾರರನ್ನು ಚಿಂತೆಗೀಡುಮಾಡಿದೆ. ಮಳೆಯ ಕಾರಣ ಕಾಫಿ ಕಾಯಿ ಉದುರುತ್ತಿದೆ. ಕಾಳು ಮೆಣಸು ಬಳ್ಳಿಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯ ಕಾರಣ ಕೊಳೆ ನಿರೋಧಕ ಔಷದಿ ಸಿಂಪಡಿಸಲೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಿದ್ದಾರೆ ಬೆಳೆಗಾರರು. ಹೀಗೆಯೇ ಮಂದುವರಿದರೆ ಈ ವ್ಯಾಪ್ತಿಯಲ್ಲಿ ಹೆಚ್ಚಿನ ಬೆಳೆ, ಫಸಲು ನಷ್ಟವಾಗಲಿದೆ ಎನ್ನುತ್ತಿದ್ದಾರೆ ರೈತರು.

ಕೊಳೆರೋಗ ಭೀತಿ

ಸೋಮವಾರಪೇಟೆ: ವಾರ್ಷಿಕ ವಾಗಿ ಅತೀ ಹೆಚ್ಚು ಮಳೆಬೀಳುವ ಪುಷ್ಪಗಿರಿ ಬೆಟ್ಟತಪ್ಪಲಿನ ಶಾಂತಳ್ಳಿ ಹೋಬಳಿಯಾದ್ಯಂತ ವರ್ಷಾಧಾರೆ ಮುಂದುವರೆದಿದ್ದು, ಕಾಫಿ ಹಾಗೂ ಏಲಕ್ಕಿ ಬೆಳೆಗೆ ಕೊಳೆರೋಗ ಕಾಣಿಸಿಕೊಂಡಿದ್ದರೆ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಯಾಗಿದೆ.

ಕಳೆದ 10 ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆ ವಾತಾವರಣ ಅತೀ ಶೀತದಿಂದ ಕೂಡಿದ್ದು ಸಣ್ಣಪುಟ್ಟ ನದಿತೊರೆಗಳು ತುಂಬಿ ಹರಿಯುತ್ತಿವೆ. ನಾಟಿ ಮಾಡಿರುವ ಗದ್ದೆಗಳಲ್ಲಿ ಹೆಚ್ಚಿನ ನೀರು ಶೇಖರಣೆಗೊಂಡಿದ್ದು, ಪೈರು ಕೊಳೆಯುವ ಭೀತಿ ಎದುರಾಗಿದೆ. ಕಾಫಿ ಗಿಡದಲ್ಲಿರುವ ಫಸಲು ಉದುರಲು ಪ್ರಾರಂಭವಾಗಿದೆ. ಕಾಫಿ ಗಿಡಗಳಲ್ಲಿ ಮರದ ಎಲೆಗಳು ಬಿದ್ದು ಅಲ್ಲೇ ಕೊಳೆಯುತ್ತಿರುವದರಿಂದ ಗಿಡಗಳಿಗೆ ಕೊಳೆರೋಗ ಬಾಧಿಸುತ್ತಿದೆ. ಪುಷ್ಪಗಿರಿ ಗ್ರಾಮಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ಇದರೊಂದಿಗೆ ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲೂ ಭಾರೀ ಮಳೆಯಾಗುತ್ತಿದೆ. ಜೂನ್ ನಂತರ ಬಹುತೇಕ ಸೊರಗಿದ್ದ ಹೊಳೆ, ತೊರೆಗಳಲ್ಲಿ ಇದೀಗ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಮಟ್ಟ ಮತ್ತೆ ಏರಿಕೆಯಾಗುತ್ತಿದೆ.

ಪ್ರಸಕ್ತ ವರ್ಷ ಮಳೆ ಜನವರಿ ಮತ್ತು ಫೆಬ್ರವರಿಯಲ್ಲಿ ಬಂದು, ನಂತರ ಮುಂಗಾರು ಮಳೆಯೂ ಸರಿಯಾದ ಸಮಯಕ್ಕೆ ಆಗಮಿಸಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ನಂತರದಲ್ಲಿ ಆಗಾಗ್ಗೆ ಬಿಡುವು ನೀಡಿ ಮಳೆ ಸುರಿದ ಹಿನ್ನೆಲೆ ಕಾಫಿ ಗಿಡಗಳಲ್ಲಿ ನಾಲ್ಕರಿಂದ ಐದು ಬಾರಿ ಹೂವುಗಳು ಅರಳಿ ಕಾಯಿಕಟ್ಟಲಾರಂಭಿಸಿತು. ಮೊದಲು ಕಾಯಿಕಟ್ಟಿದ ಫಸಲು ಕೆಲವೆಡೆಗಳಲ್ಲಿ ಈಗಾಗಲೇ ಹಣ್ಣಾಗಿದ್ದು, ಅದನ್ನು ಕೊಯ್ಲು ಮಾಡಲೂ ಸಹ ಆಗುತ್ತಿಲ್ಲ. ಇಂತಹ ಹಣ್ಣು ಕಾಫಿಯಿಂದ ಕೊಳೆರೋಗ ಬಲುಬೇಗ ಉಲ್ಬಣಗೊಳ್ಳಲಿದ್ದು, ಬೆಳೆಗಾರ ವರ್ಗದಲ್ಲೂ ಆತಂಕ ಮೂಡಿಸಿದೆ.

ಸದ್ಯ ಮಳೆ ಬಿಡುವು ನೀಡದೇ ಇದೀಗ ಸುರಿಯುತ್ತಿರುವ ಮಳೆ ಬೆಳೆಗಾರರ ಆಸೆಗೆ ತಣ್ಣೀರೆರೆಚಿದೆ. ಇದರೊಂದಿಗೆ ಕರಿಮೆಣಸು ಬಳ್ಳಿಯಲ್ಲಿಯೂ ಫಸಲು ಕಟ್ಟುತ್ತಿದ್ದು, ಮಳೆ ಅಧಿಕವಾದರೆ ಫಸಲು ನೆಲ ಕಚ್ಚುವದು ನಿಶ್ಚಿತ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಸರಕಾರ ಪರಿಹಾರ ನೀಡಲಿ

ಈ ಮಧ್ಯೆ ಸರ್ಕಾರ ಮೋಡ ಬಿತ್ತನೆಗೆ ಮುಂದಾದರೆ ಬೆಳೆಗಾರರ ಬದುಕು ಇನ್ನಷ್ಟು ದುಸ್ತರವಾಗಲಿದೆ. ಮೋಡ ಬಿತ್ತನೆ ಮಾಡುವದಾದರೆ ಸರ್ಕಾರ ಮೊದಲು ಎಲ್ಲಾ ಬೆಳೆಗಾರರಿಗೆ ಎಕರೆಯೊಂದಕ್ಕೆ ತಲಾ ರೂ. 2ಲಕ್ಷ ಪರಿಹಾರ ನೀಡಲಿ ಎಂದು ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ಅಭಿಪ್ರಾಯಿಸಿದ್ದಾರೆ.

ಪ್ರಸಕ್ತ ವರ್ಷ ಪುಷ್ಪಗಿರಿಯಲ್ಲಿರುವ ಮಲ್ಲಿಕಾರ್ಜುನ ದೇವಾಲಯ ವ್ಯಾಪ್ತಿಯಲ್ಲಿ 190 ಇಂಚಿಗೂ ಅಧಿಕ ಮಳೆಯಾಗಿದೆ. ಶಾಂತಳ್ಳಿಗೆ 110, ಹರಗ ಗ್ರಾಮ ವ್ಯಾಪ್ತಿಗೆ 130 ಇಂಚು, ಕೊತ್ನಳ್ಳಿಗೆ 175 ಇಂಚು, ಕುಮಾರಳ್ಳಿಗೆ 130, ಸೋಮವಾರಪೇಟೆ ಕಸಬಾ ವ್ಯಾಪ್ತಿಗೆ 60 ಇಂಚು, ತೋಳೂರು ಶೆಟ್ಟಳ್ಳಿಗೆ 70 ಇಂಚಿನಷ್ಟು ಈಗಾಗಲೇ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.

ಪುಷ್ಪಗಿರಿ ವ್ಯಾಪ್ತಿಯ ಗ್ರಾಮವಾಸಿಗಳು ತತ್ತರಿಸಿದ್ದಾರೆ. ಬೆಟ್ಟಶ್ರೇಣಿ, ಕುಮಾರಾಧಾರ ನದಿಯಂಚಿನ ಗ್ರಾಮಗಳಲ್ಲಿ ದಟ್ಟಮಂಜು ಆವರಿಸುತ್ತಿರುವದರಿಂದ ಕೊಳೆರೋಗ ಇನ್ನಷ್ಟು ಬಾಧಿಸುವ ಆತಂಕ ನಿರ್ಮಾಣವಾಗಿದೆ. 70 ಇಂಚಿನಷ್ಟು ಮಳೆಯಾಗಿರುವ ತೋಳೂರುಶೆಟ್ಟಳ್ಳಿಯಲ್ಲಿಯೂ ಕಾಫಿಗೆ ಕೊಳೆರೋಗ ತಲುಲಿದ್ದು, ಇದರ ಎರಡು ಪಟ್ಟು ಅಧಿಕ ಮಳೆಯಾಗಿರುವ ಪುಷ್ಪಗಿರಿ ವ್ಯಾಪ್ತಿಯ ಕಾಫಿಯ ಪರಿಸ್ಥಿತಿ ಹೇಳತ್ತೀರದ್ದಾಗಿದೆ.

ಸಂತೆ ದಿನವಾದ ಸೋಮವಾರ ದಂದೂ ಎಡೆಬಿಡದೆ ಮಳೆ ಸುರಿದ ಪರಿಣಾಮ ಸಂತೆ ವ್ಯಾಪಾರ ಅಸ್ತವ್ಯಸ್ತ ಗೊಂಡಿದೆ. ಮಾರುಕಟ್ಟೆಯ ಛಾವಣಿಯಲ್ಲಿ ನೀರು ಸೋರುತ್ತಿದ್ದು, ವ್ಯಾಪಾರಸ್ಥರು ತೊಂದರೆ ಅನುಭವಿಸು ವಂತಾಯಿತು. ಎಡೆಬಿಡದೇ ಬೀಳುತ್ತಿರುವ ಮಳೆಯಿಂದ ಗ್ರಾಮೀಣ ಭಾಗದ ರಸ್ತೆಗಳು ದುರಸ್ತಿ ಗೀಡಾಗುತ್ತಿದ್ದು, ವಾಹನ ಹಾಗೂ ಜನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಎಲ್ಲೆಡೆ ಗೌರಿ ಗಣೇಶ ಉತ್ಸವ ಮೂರ್ತಿಗಳ ವಿಸರ್ಜನಾ ಮಹೋತ್ಸವ ಜರುಗುತ್ತಿದ್ದು, ಮಳೆಯಿಂದಾಗಿ ಸಂಭ್ರಮಕ್ಕೆ ತೊಂದರೆಯಾಗುತ್ತಿದೆ.

ಸಿದ್ದಾಪುರ: ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದು, ಕಾವೇರಿ ನದಿಯ ನೀರಿನ ಮಟ್ಟ ಗಣನೀಯ ವಾಗಿ ಏರಿಕೆಯಾಗಿದೆ. ಸೋಮವಾರ ಮದ್ಯಾಹ್ನದಿಂದ ನಿರಂತರವಾಗಿ ಮಳೆಯಾಗಿದ್ದು, ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ. ಶಾಲೆ ಬಿಡುವ ಸಮಯದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಶಾಲಾ ಮಕ್ಕಳು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು.

ಕುಶಾಲನಗರ: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ಕಳೆದ 3 ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ 3 ದಿನಗಳಲ್ಲಿ ಒಟ್ಟು 3 ಇಂಚು ಮಳೆ ಸುರಿದ ಬಗ್ಗೆ ವರದಿಯಾಗಿದೆ. ದಿನವಿಡೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಜನಜೀವನ ಬಹುತೇಕ ಅಸ್ತವ್ಯಸ್ತಗೊಂಡಿದೆ. ಗಣೇಶ ವಿಗ್ರಹ ವಿಸರ್ಜನೆ ಸಂದರ್ಭ ಕೂಡ ಮಳೆ ಎಡೆಬಿಡದೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಭಕ್ತಾದಿಗಳು ಮಳೆಯಲ್ಲೇ ಮೆರವಣಿಗೆ ತೆರಳುತ್ತಿರುವ ದೃಶ್ಯ ಗೋಚರಿಸಿದೆ. ಕುಶಾಲನಗರ ಭಾಗದಲ್ಲಿ ನದಿ ನೀರಿನ ಹರಿವು ಕೂಡ ಏರಿಕೆ ಕಂಡುಬಂದಿದೆ. ಯಾವುದೇ ರೀತಿಯ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.

ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆ ಪರಿಣಾಮ ಬಸವನತ್ತೂರು ಗ್ರಾಮದಲ್ಲಿ ಗಫರ್ ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆ ಕುಸಿದಿದ್ದು, ನಷ್ಟ ಉಂಟಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆಯವರು ಸ್ಥಳ ಪರಿಶೀಲಿಸಿ, ಪರಿಹಾರ ಒದಗಿಸಲು ಕುಟುಂಬದವರು ಆಗ್ರಹಿಸಿದ್ದಾರೆ.

-ಚಿತ್ರ, ವರದಿ: ಕೆ.ಡಿ. ಸುನಿಲ್, ವಿಜಯ್, ನಾಗರಾಜಶೆಟ್ಟಿ, ಚಂದ್ರಮೋಹನ್, ಪ್ರಭಾಕರ್, ವಾಸು, ರೆಹಮಾನ್, ಡಿಎಂಆರ್