ವೀರಾಜಪೇಟೆ, ಆ. 28: ಕೊಡಗಿನ ಮೂಲ ನಿವಾಸಿಗಳು ಸೇರಿದಂತೆ ಇತರ ಸಮುದಾಯಗಳ ಪ್ರತಿಭೆಗಳನ್ನು ಗುರುತಿಸಲು ಸರಕಾರ ವಿಫಲಗೊಂಡಿದೆ. ಇದರಿಂದಾಗಿ ಸೇವಾ ಸಂಘಟನೆಗಳು ಗ್ರಾಮಾಂತರ ಪ್ರದೇಶದಲ್ಲಿರುವ ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಹಿಂದೂಗಳಲ್ಲಿರುವ ಪ್ರತಿಭೆಗಳನ್ನು ಹುಡುಕುವ ಕಾರ್ಯವನ್ನು ಹಮ್ಮಿಕೊಂಡಿವೆ ಎಂದು ಜನತಾದಳದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ವೀರಾಜಪೇಟೆಯ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿಯ ಎನ್. ವೆಂಕಟೇಶ್ ಕಾಮತ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ವಾಯ್ಸ್ ಆಫ್ ವೀರಾಜಪೇಟೆ 2017’ರ ಸಂಗೀತ ಸ್ಫರ್ಧೆಯನ್ನು ಉದ್ಘಾಟಿಸಿದ ಅವರು, ಕೊಡಗಿನ ಮೂಲ ನಿವಾಸಿಗಳಾದ ಕೊಡವರು, ಗೌಡರು, ಅಮ್ಮಕೊಡವರು, ಗೊಲ್ಲರು, ಕುಡಿಯರು, ಐರಿಗಳು, ಕಾಪಾಳರು, ಗಾಣಿಗರು, ಸವಿತಾ ಸಮಾಜದವರು, ಐಬೊಕ್ಲುಗಳು, ಮರ್ತರು, ಅಡಿಯರು, ಮಲೆಯರು, ಕಣಿಯರು, ಕುರುಬರು, ಬೀನೆ ತಟ್ಟಮರು, ಬಣ್ಣರು, ಪಣಿ ಎರವರು, ಪಂಜರಿ ಎರವರು ಸೇರಿದಂತೆ ವಿವಿಧ ಎಲ್ಲ ಮೂಲ ನಿವಾಸಿಗಳು ಗಾಯನದಲ್ಲಿ ತನ್ನದೇ ಆದ ಪ್ರತಿಭೆಯನ್ನು ಹೊಂದಿದ್ದರೂ ಇದನ್ನು ಬೆಳಕಿಗೆ ತರಲು ಸೂಕ್ತ ವೇದಿಕೆ ಇಲ್ಲ. ಸರಕಾರದ 28 ಇಲಾಖೆಗಳ ಪೈಕಿ ಒಂದು ಇಲಾಖೆ ಇದಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಇದರಿಂದ ಮೂಲ ನಿವಾಸಿಗಳಿಗೆ ಯಾವದೇ ಪ್ರಯೋಜನವಾಗುತ್ತಿಲ್ಲ. ಇಂತಹ ಕಾರ್ಯಗಳಿಗೆ ಸೇವಾ ಸಂಘಟನೆಗಳ ಯೋಚನಾ ಲಹರಿಗೆ ಸರಕಾರವೇ ತಲೆ ಬಾಗಬೇಕಾಗಿದೆ ಎಂದರು.

ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಪ್ರತಿಭಾನ್ವಿತರಿಗೆ ಮೇಲು ಕೀಳೆಂಬ ಬೇಧವಿಲ್ಲ. ಎಲ್ಲರೂ ಸಮಾನರು, ಪ್ರತಿಯೊಂದು ಸಮುದಾಯಕ್ಕು ಪ್ರತಿಭಾನ್ವಷಣೆಯಲ್ಲಿ ಸಮಾನ ಅವಕಾಶವಿದೆ. ಗ್ರಾಮಾಂತರ ಪ್ರದೇಶದಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸಮಾಜ ಸೇವಾ ಸಂಸ್ಥೆಗಳಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಸೇವಾ ಸಂಸ್ಥೆಗಳ ಪಾತ್ರ ಬಹುಮುಖ್ಯ ಎಂದು ಹೇಳಿದ ಸಂಕೇತ್ ಪೂವಯ್ಯ ಅವರು ದಿವಂಗತ ಎನ್.ವೆಂಕಟೇಶ್ ಅವರ ಸೇವೆಯನ್ನು ಸಂಗೀತ ಗಾಯನ ಸ್ಪರ್ಧೆಯನ್ನು ಆಯೋಜಿಸುವದರ ಮೂಲಕ ಸ್ಮರಿಸುವದು ಉತ್ತಮ ಕಾರ್ಯ ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಹಿರಿಯ ವೈದ್ಯ ಮಂಗಳೂರಿನ ಡಾ. ಬಿ.ಪಿ. ಕೇಶವರಾವ್ ಮಾತನಾಡಿದರು. ವೇದಿಕೆಯಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಎನ್.ಜಿ. ಕಾಮತ್, ಉಪಾಧ್ಯಕ್ಷ ಜೆ.ಎನ್. ಪುಷ್ಪರಾಜ್ ಉಪಸ್ಥಿತರಿದ್ದರು.ವೆಂಕಟೇಶ್ ಕಾವiತ್ ಟ್ರಸ್ಟ್‍ನ ಮ್ಯಾನೆಜಿಂಗ್ ಟ್ರಸ್ಟಿ ಎನ್. ರವೀಂದ್ರ ಕಾಮತ್, ಟ್ರಸ್ಟಿ ಜೆ.ಎನ್. ಸಂಪತ್ ಕುಮಾರ್ ಪದಾಧಿಕಾರಿಗಳು ಹಾಜರಿದ್ದರು.