ಸೋಮವಾರಪೇಟೆ,ಆ.28: ಶಾಸಕರ ನಿಧಿಯಿಂದ ರೂ. 15ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಗ್ರಾಮೀಣ ಭಾಗದ ವಿವಿಧ ರಸ್ತೆ ಕಾಮಗಾರಿಗಳನ್ನು ಶಾಸಕ ಅಪ್ಪಚ್ಚು ರಂಜನ್ ಅವರು ಉದ್ಘಾಟಿಸಿದರು.

ಸಮೀಪದ ಸುಳಿಮಳ್ತೆ ಗ್ರಾಮದ ಕಾಂಕ್ರೀಟ್ ರಸ್ತೆ, ತಮಿಳರ ಕಾಲೋನಿ ರಸ್ತೆ ಹಾಗೂ ಜೇನಿಗರಕೊಪ್ಪದ ಕಾಲೋನಿ ರಸ್ತೆಗಳನ್ನು ತಲಾ 5ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ರಸ್ತೆಗಳನ್ನು ಶಾಸಕರು ಉದ್ಘಾಟಿಸಿದರು.

ಇದೇ ಸಂದರ್ಭ 2016-17ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‍ನಡಿ ಕೈಗೊಳ್ಳಲು ಉದ್ದೇಶಿಸಲಾಗಿರುವ 61ಲಕ್ಷ ರೂ. ವೆಚ್ಚದ ನೂತನ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಗೌಡಳ್ಳಿ ಗ್ರಾಮ ಪಂಚಾಯಿತಿಯ ಬೀಟಿಕಟ್ಟೆ-ಬಸವನಕೊಪ್ಪ-ಶುಂಠಿಮಂಗಳೂರು ಗ್ರಾಮಗಳ ರಸ್ತೆ ಅಭಿವೃದ್ದಿಗೆ 15ಲಕ್ಷ ರೂ. ಹಿರಿಕರ ಗ್ರಾಮದ ಊರೊಳಗೆ ಹೋಗುವ ರಸ್ತೆ 10ಲಕ್ಷ, ನಂದಿಗುಂದ ಮುಖ್ಯ ರಸ್ತೆಯಿಂದ ನಂಜುಂಡೇಶ್ವರ ದೇವಸ್ಥಾನ ರಸ್ತೆ ಅಭಿವೃದ್ದಿ, ದೀಣೆಮನೆ ಕಾಲೋನಿ ರಸ್ತೆ, ರಾಮನಳ್ಳಿರಸ್ತೆ, ಗ್ರಾಮದ ಹೊಳೆಗೆ ಹೋಗುವ ರಸ್ತೆ ಅಭಿವೃದಿಗೆ 16ಲಕ್ಷ ರೂ. ಹಿರಿಕರ ದೇವಾಲಯದಿಂದ ಕಟ್ಟೆವರೆಗೆ ರಸ್ತೆ ಹಾಗೂ ಶುಂಠಿ ಪರಿಶಿಷ್ಟ ಜಾತಿ ಕಾಲೋನಿ ರಸ್ತೆಗಳ ಅಭಿವೃದ್ದಿಗೆ 8ಲಕ್ಷ ರೂ. ಮೀಸಲಿಟ್ಟಿದ್ದು, ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

ಇದರೊಂದಿಗೆ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯ ಕಾಗಡಿಕಟ್ಟೆ ಗ್ರಾಮದ ಶಾದಿಮಹಲ್‍ಗೆ ತಡೆಗೋಡೆ ಮತ್ತು ರಸ್ತೆ ಅಭಿವೃದ್ದಿ, ಗೆಜ್ಜೆಹಣ ಕೋಡು ಮುಖ್ಯ ರಸ್ತೆಯಿಂದ ಜೇನಿಗರಕೊಪ್ಪ ದೇವಾಲಯದವರೆಗೆ ರಸ್ತೆ ಕಾಮಗಾರಿ, ದೊಡ್ಡಮಳ್ತೆ, ಬಿಳಿಗೇರಿ ದೇವಸ್ಥಾನದ ರಸ್ತೆ ಡಾಂಬರೀಕರಣ ಹಾಗೂ ಹಾರಳ್ಳಿ ರಸ್ತೆ ಅಭಿವೃದ್ದಿಗೆ 12ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಶಾಸಕರು ತಿಳಿಸಿದರು.