ಮಡಿಕೇರಿ, ಆ. 28 : ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಓಂಕಾರೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಸಹಯೋಗದೊಂದಿಗೆ ವಿಶೇಷ ಘಟಕ ಯೋಜನೆಯಡಿಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಮತ್ತು “ಕೃಷ್ಣಲೀಲೆ, ಕಂಸವಧೆ” ಪೌರಾಣಿಕ ಯಕ್ಷಗಾನ ಕಾರ್ಯಕ್ರಮ ಮದೆ ಗ್ರಾಮದ ಬೆಳಕುಮಾನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಳುವೆರ ಜನಪದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ, ಶ್ರೀಮಂತ ಕಲೆಗಳಲ್ಲಿ ಒಂದಾಗಿರುವ ಯಕ್ಷಗಾನ ದೇಶದ ಸಂಸ್ಕøತಿಯ ಪ್ರತೀಕವಾಗಿದೆ ಎಂದು ಅಭಿಪ್ರಾಯಪಟ್ಟರು. ಕರಾವಳಿಯ ಗಂಡು ಮೆಟ್ಟಿದ ಕಲೆ ಯಕ್ಷಗಾನ ದೇಶ, ವಿದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಇದರ ಶ್ರೀಮಂತಿಕೆ ಮತ್ತಷ್ಟು ಹೆಚ್ಚಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಗೋಳಿಕಟ್ಟೆ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಧ್ಯಾಯ ಕೇಶವ ಪೆರಾಜೆ, ವಿದ್ಯಾರ್ಥಿಗಳು ಯಕ್ಷಗಾನ ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಅನೇಕ ಉತ್ತಮ ಸಂದೇಶಗಳನ್ನು ಸಾರುವ ಶಕ್ತಿ ಯಕ್ಷಗಾನ ಕಲೆಗಿದ್ದು, ಯಕ್ಷಗಾನ ಕಲಿಕೆಗೆ ಇರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಗಾಳಿಬೀಡು ಗ್ರಾ.ಪಂ. ಸದಸ್ಯ ಅಗೋಳಿಕಜೆ ಧನಂಜಯ ಮಾತನಾಡಿ, ಭಾರತದ ನೈಜ ಸಂಸ್ಕøತಿ ಹಾಗೂ ಆಚಾರ, ವಿಚಾರಗಳ ಬೆಳವಣಿಗೆಗೆ ಯಕ್ಷಗಾನ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಶ್ರೀಮಂತ ಕಲೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.

ಶಾಲಾ ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ, ಹಿರಿಯ ಯಕ್ಷಗಾನ ಕಲಾವಿದ ಮಹಾಬಲೇಶ್ವರ ಭಟ್, ಕೃಷಿಕ ಸಾಯಿ ಮುತ್ತಣ್ಣ, ಮದೆ ಗ್ರಾಮ ಮೊಗೇರ ಸಮಾಜದ ಅಧ್ಯಕ್ಷ ಪಿ.ಬಿ. ಶಂಕರ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಯಕ್ಷಗಾನ ಕಲಾವಿದ ಪಿ.ಯು.ಸುಂದರ ಸ್ವಾಗತಿಸಿ, ವಂದಿಸಿದರು. ಮತ್ತೊಬ್ಬ ಕಲಾವಿದ ಮಾಧವ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ನಡೆದ “ಕೃಷ್ಣಲೀಲೆ, ಕಂಸವಧೆ” ಯಕ್ಷಗಾನ ಕಥಾ ಪ್ರಸಂಗ ಗಮನ ಸೆಳೆಯಿತು.