ಮಡಿಕೇರಿ, ಆ. 30: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೊಡಗಿನಲ್ಲಿ ಉಂಟಾದ ಸಮಸ್ಯೆಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ದೋಷಪೂರಿತ ವರದಿಯೇ ಕಾರಣ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದು, ಕಸ್ತೂರಿ ರಂಗನ್ ವರದಿ ಸಂಬಂಧ ಕೆಲವು ಪುಡಾರಿಗಳು ಜನರಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ಕಸ್ತೂರಿ ರಂಗನ್ ವರದಿಯಲ್ಲಿನ ಸತ್ಯಾಂಶ, ರಾಜ್ಯ ಸರ್ಕಾರ ಸಲ್ಲಿಸಿರುವ ಆಕ್ಷೇಪ ಇತ್ಯಾದಿಗಳ ಬಗ್ಗೆ ಗ್ರಾಮಸ್ಥರಿಗೆ ಮನದಟ್ಟು ಮಾಡಿಸುವ ನಿಟ್ಟಿನಲ್ಲಿ ಕಸ್ತೂರಿ ರಂಗನ್ ವರದಿಗೆ ಒಳಪಟ್ಟಿರುವ 53 ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು, ಅರಣ್ಯಾಧಿಕಾರಿಗಳನ್ನು ಒಳಗೊಂಡು ಸದ್ಯದಲ್ಲಿಯೆ ಸಭೆಯೊಂದನ್ನು ಆಯೋಜಿಸಲು ಅರಣ್ಯಾಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದ್ದಾರೆ.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ - ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಸ್ತೂರಿ ರಂಗನ್ ವರದಿ ಸಂಬಂಧ ಜನತೆ ತಲೆ ಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ. ತಾನು ಆರಂಭದಲ್ಲೇ ನೀಡಿರುವ ಭರವಸೆಯಂತೆ ಕಸ್ತೂರಿ ರಂಗನ್ ವರದಿ ಕುರಿತಾದ ಜವಾಬ್ದಾರಿಯನ್ನು ಜನತೆ ನನ್ನ ಹೆಗಲಿಗೆ ಬಿಡಲಿ. ಅದಕ್ಕೆ ತಾನು ಬದ್ಧನಿದ್ದೇನೆ. ಕೊಡಗಿನ ಜನರ ಹಿತಕ್ಕೆ ಧಕ್ಕೆಯಾಗದಂತೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ನನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತೇನೆ ಎಂದು ಪ್ರತಾಪ್ ಸಿಂಹ ಆಶ್ವಾಸನೆಯಿತ್ತರು.

ಜಿಲ್ಲಾ ಆಹಾರ ಇಲಾಖಾಧಿಕಾರಿ ಪುಟ್ಟಸ್ವಾಮಿ, ಜಿಲ್ಲೆಯಲ್ಲಿ ನೂತನ ಪಡಿತರಕ್ಕಾಗಿ 7750 ಅರ್ಜಿಗಳು ಬಂದಿದ್ದು, ಸೆಪ್ಟೆಂಬರ್ 30 ರೊಳಗೆ ವಿತರಿಸಲು ಕ್ರಮ ಕೈಗೊಳ್ಳ ಲಾಗುವದೆಂದರು.

ಜಿಲ್ಲೆಗೆ ಕೂಲಿ ಅರಸಿ ತೋಟಗಳಿಗೆ ವಲಸಿಗರು ಬರುತ್ತಾರೆ. ಇವರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಿದೆ.

ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ಪಡಿತರ ಚೀಟಿ ನೀಡುವಾಗ

(ಮೊದಲ ಪುಟದಿಂದ) ಬಹಳ ಜಾಗೃತಿ ವಹಿಸಬೇಕಿದೆ. ವಿದೇಶಿಗರು ಕಂಡುಬಂದಲ್ಲಿ ಆ ಸಂಬಂಧ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಿದೆ ಎಂದು ಸಂಸದರು ಸಲಹೆ ಮಾಡಿದರು.

ಐಟಿಡಿಪಿ ಇಲಾಖೆ ವತಿಯಿಂದ ಮೂಲ ನಿವಾಸಿ ಗಿರಿಜನರಿಗೆ ಪೌಷ್ಟಿಕ ಆಹಾರ ಸಮರ್ಪಕವಾಗಿ ತಲುಪಿಸಬೇಕು. ಸರ್ಕಾರ ನೀಡುವ ಪೌಷ್ಟಿಕ ಆಹಾರಗಳನ್ನು ಯಾವದೇ ಕಾರಣಕ್ಕೂ ಮಾರಿಕೊಳ್ಳಬಾರದು, ಈ ಬಗ್ಗೆ ಹೆಚ್ಚಿನ ಗಮನಹರಿಸನಿರ್ದೇಶನ ನೀಡಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಷ್ಟಾಗಿ ಪ್ರಗತಿ ಸಾಧಿಸದಿರುವದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಈ ಯೋಜನೆಯಡಿ ಹೆಚ್ಚಿನ ಹಣ ಬಳಕೆ ಮಾಡಿಕೊಂಡು ಅಭಿವೃದ್ಧಿಯತ್ತ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಯಾವ ಯಾವ ಗ್ರಾ.ಪಂ.ಗಳಲ್ಲಿ ಸ್ವಂತ ಕಟ್ಟಡವಿಲ್ಲ ಅಲ್ಲಿ ಜಾಗ ಗುರುತಿಸಿ ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಳ್ಳುವದು. ಇನ್ನೂ ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ ಸ್ವಂತ ಜಾಗ ಮಾಡಿಕೊಳ್ಳುವತ್ತ ಗಮನ ಹರಿಸಬೇಕಿದೆ ಎಂದು ಲೋಕಸಭಾ ಸದಸ್ಯರು ಹೇಳಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಜಿಲ್ಲೆಯಲ್ಲಿ ವಸತಿ ಯೋಜನೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ನಿವೇಶನದ ಕೊರತೆ ಇಲ್ಲ. ಆದರೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪಿಡಿಒಗಳು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸೇರಿ ಜಾಗ ಗುರುತಿಸುವತ್ತ ಗಮನಹರಿಸಬೇಕಿದೆ ಎಂದು ಹೇಳಿದರು.

ವಿಕಲಚೇತನರ ಕಲ್ಯಾಣ ಇಲಾಖೆ ವತಿಯಿಂದ ವಿಕಲಚೇತನರಿಗಾಗಿ ಸಾಕಷ್ಟು ಕಾರ್ಯಕ್ರಮವಿದ್ದು, ಕೂಡಲೇ ವಿಕಲಚೇತನರಿಗೆ ಟ್ರೈಸಿಕಲ್, ತ್ರಿಚಕ್ರ ವಾಹನ, ಸ್ಕೂಟಿ ಮತ್ತಿತರ ಸೌಲಭ್ಯವನ್ನು ವಿತರಿಸಲು ವಿಶೇಷ ಶಿಬಿರ ಆಯೋಜಿಸುವಂತೆ ವಿಕಲಚೇತನರ ಇಲಾಖೆ ಅಧಿಕಾರಿಗೆ ಪ್ರತಾಪ್ ಸಿಂಹ ಸೂಚನೆ ನೀಡಿದರು.

ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್ ಅವರು ಜಿಲ್ಲೆಯಲ್ಲಿ ಆದಿವಾಸಿ ನಿವೇಶನ ರಹಿತರಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ನಿವೇಶನ ರಹಿತ ಆದಿವಾಸಿಗಳಿಗೆ ನಿವೇಶನ ಒದಗಿಸಲಾಗುವದು ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ರಾಮಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಆರ್.ಗಿರೀಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಾಯಾದೇವಿ ಗಲಗಲಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕ್ರಿಸ್ತರಾಜ, ಜಯ, ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಇಬ್ರಾಹಿಂ, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಮಾಹಿತಿ ನೀಡಿದರು. ಸಮಿತಿ ಸದಸ್ಯರು ಇದ್ದರು. ಬೇಕಿದೆ ಎಂದು ಐಟಿಡಿಪಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಐಟಿಡಿಪಿ, ಲೋಕೋಪಯೋಗಿ, ಜಿ.ಪಂ.ಎಂಜಿನಿಯರಿಂಗ್ ವಿಭಾಗ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೀಗೆ ವಿವಿಧ ಕಾರ್ಯಕ್ರಮಗಳ ಸಂಬಂಧ ಪ್ರತ್ಯೇಕ ಮಾಹಿತಿಯ ಪಟ್ಟಿ ಒದಗಿಸುವಂತೆ ಸಂಸದರು ಸೂಚನೆ ನೀಡಿದರು.

ದಿಡ್ಡಳ್ಳಿಯ ಆದಿವಾಸಿಗಳಿಗೆ ಒದಗಿಸಲಾಗಿರುವ ಸೌಲಭ್ಯ ಪರಿಶೀಲನೆಗಾಗಿ ಸಮಿತಿ ಸದಸ್ಯರ ಜೊತೆ ಭೇಟಿ ನೀಡಲಾಗುವದು ಎಂದು ತಿಳಿಸಿದರು.