ಸೋಮವಾರಪೇಟೆ,ಆ. 29: ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಸೆಪ್ಟಂಬರ್ 4ರಂದು ಎಐಟಿಯುಸಿ ವತಿಯಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ 1500 ಮಂದಿ ಭಾಗವಹಿಸುವದಾಗಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ರೈಲ್ವೆ ನಿಲ್ದಾಣ ದಿಂದ ಮೆರವಣಿಗೆಯಲ್ಲಿ ತೆರಳಿ ಫ್ರೀಡಂ ಪಾರ್ಕ್‍ನಲ್ಲಿ ಸಮಾವೇಶ ನಡೆಸಲಾಗುವದು ಎಂದರು.

ಜಿಲ್ಲೆಯಲ್ಲಿ ಬಹುತೇಕ ಕಾರ್ಮಿಕರು ಇಂದಿಗೂ ತೋಟದ ಲೈನ್‍ಮನೆಗಳಲ್ಲಿ ವಾಸಮಾಡುತ್ತಿದ್ದಾರೆ. 2002ರಿಂದ ಸಂಘಟನೆಯು ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದರೂ, ಕೇಂದ್ರ ಹಾಗೂ ರಾಜ್ಯ ಸರಕಾರ ಮನವಿಯನ್ನು ಈಡೇರಿಸಿಲ್ಲ ಎಂದು ದೂರಿದರು.

ಕೇಂದ್ರ ಸರಕಾರವು ರೈತರ ಸಾಲವನ್ನು ತಕ್ಷಣವೇ ಮನ್ನಾ ಮಾಡಬೇಕು. ಕಟ್ಟಡ ಕಾರ್ಮಿಕರಿಗೆ 10ಲಕ್ಷ ರೂ. ಅಪಘಾತ ಪರಿಹಾರ, 3ಸಾವಿರ ಪಿಂಚಣಿ, ಇಎಸ್‍ಐ, ಭವಿಷ್ಯನಿಧಿ ಯೋಜನೆ ಜಾರಿಗೊಳಿಸ ಬೇಕು. ಕೃಷಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ನಿವೃತ್ತಿ ವೇತನ, ಆರೋಗ್ಯ ವಿಮೆಗಾಗಿ ಸಮಗ್ರ ಕಾಯಿದೆಯನ್ನು ಜಾರಿಗೆ ತರಬೇಕು.

ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

36 ವಿವಿಧ ಬೇಡಿಕೆಗಳೂ ಸೇರಿದಂತೆ ಕೊಡಗಿನಲ್ಲಿಯೂ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕಿಸಬೇಕೆಂದು ಸಮಾವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವದು ಎಂದು ಸೋಮಪ್ಪ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸಂಘಟನೆಯ ತಾಲೂಕು ಕಾರ್ಯದರ್ಶಿ ಕೆ.ಎ. ಮಹೇಶ್, ಖಜಾಂಚಿ ಪಿ.ಟಿ. ಸುಂದರ, ಪದಾಧಿಕಾರಿಗಳಾದ ಶೇಷಪ್ಪ, ಚಂದ್ರ, ಸುರೇಶ್ ಉಪಸ್ಥಿತರಿದ್ದರು.