ಗೋಣಿಕೊಪ್ಪಲು, ಆ. 29 : ಭವಿಷ್ಯದಲ್ಲಿ ನ್ಯಾಯಾಲಯದಲ್ಲಿ ಮತ್ತೆ ಬಿ ರಿಪೋರ್ಟ್ ತೆರೆದುಕೊಳ್ಳುವ ಮೂಲಕ ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದಲ್ಲಿ ನ್ಯಾಯ ದೊರಕುವ ಆಶಾಭಾವನೆ ಇದೆ ಎಂದು ಗಣಪತಿ ಸಾವಿನ ಪ್ರಕರಣದ ಮುಖ್ಯ ವಕೀಲ ಅಮೃತ್ ಸೋಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಸಿಐಡಿ ಮೂಲಕ ಬಿ ರಿಪೋರ್ಟ್ ಹಾಕಿದ್ದರೂ ಪ್ರಕರಣವು ಭವಿಷ್ಯದಲ್ಲಿ ನ್ಯಾಯಾಲಯ ದಲ್ಲಿ ಮತ್ತೆ ತೆರೆದುಕೊಳ್ಳುವ ಆಶಾಭಾವನೆ ಇದೆ ಎಂದು ಗೋಣಿಕೊಪ್ಪ ಪ್ರೆಸ್ ಕ್ಲಬ್ ವತಿಯಿಂದ ಗಣಪತಿ ಸಾವಿನ ಪ್ರಕರಣದ ಬಗ್ಗೆ ನಡೆದ ಮುಕ್ತ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಬಿ ರಿಪೋರ್ಟ್ ಸಲ್ಲಿಕೆಯಾದ ನಂತರ ಪ್ರಕರಣ ಮುಚ್ಚಿಕೊಳ್ಳಲಿದೆ ಎಂಬ ಭಾವನೆ ಬೇಡ, ಹಲವಾರು ಪ್ರಕರಣಗಳನ್ನು ಗಮನಿಸಿದರೆ 10 ವರ್ಷಗಳ ನಂತರವೂ ಬಿ ರಿಪೋರ್ಟ್ ಮತ್ತೆ ತೆರೆದುಕೊಳ್ಳುವ ಮೂಲಕ ತನಿಖೆಗೆ ಆಗ್ರಹಿಸಿದ ಹಲವಾರು ಪ್ರಕರಣದಲ್ಲಿ ಪುನರಾವರ್ತನೆ ಆಗಿದೆ ಎಂದರು.

ಈ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಕೆ ಯಾಗಿದ್ದು, ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಅವಧಿಯಲ್ಲಿ ನೋಟಿಸ್ ಪಡೆದವರು ನ್ಯಾಯಾಲಯ ಕ್ಕೆ ಉತ್ತರಿಸದಿದ್ದಲ್ಲಿ ಸಿಬಿಐ ಅಥವಾ ಸೆಷನ್ಸ್ ಕೋರ್ಟ್ ನಡೆಯುವ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ನಡೆಯುವ ಸಾಧ್ಯತೆಯಿದೆ ಎಂದರು.

ಅಸಹಜ ಸಾವು ಎಂದು ದಾಖಲಿಸಿರುವದು ಸರ್ಕಾರದ ತಪ್ಪು. ಗಣಪತಿ ಅವರು ಸಾವಿಗೆ ಮುನ್ನ ನೀಡಿರುವ ಹೇಳಿಕೆಯಂತೆ ಸಚಿವ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಪ್ರಸಾದ್, ಮೊಹಾಂತಿ ಅವರುಗಳ ವಿರುದ್ದ ಎಫ್‍ಐಆರ್ ದಾಖಲಿಸಬೇಕಿತ್ತು. ಆದರೆ ಸರ್ಕಾರ ಅದನ್ನು ಪರಿಗಣಿಸದೆ ಪ್ರಕರಣವನ್ನು ಮುಚ್ಚಿಹಾಕುವ ದೃಷ್ಟಿಯಿಂದ ಅಸಹಜ ಸಾವು ಎಂದು ದಾಖಲಿಸಿದೆ ಎಂದು ಆರೋಪಿಸಿದರು.

ನ್ಯಾಯ ಸಿಗಬಹುದೆಂಬ ನಿರ್ಧಾರದೊಂದಿಗೆ ನ್ಯಾಯಾಲಯ ದಲ್ಲಿ ಐಪಿಸಿ 200 ಅಡಿಯಲ್ಲಿ ಮಡಿಕೇರಿ ಸೆಷನ್ಸ್ ಕೋರ್ಟ್‍ನಲ್ಲಿ ಖಾಸಗಿ ದೂರನ್ನು ದಾಖಲಿಸಿದ ನಂತರ 3 ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವಂತೆ ಆದೇಶಿಸಿತ್ತು. ನಂತರದ ದಿನಗಳಲ್ಲಿ ಗಣಪತಿ ಪುತ್ರ ನೇಹಲ್ ವಿದ್ಯಾಭ್ಯಾಸದ ಕಾರಣ ನೀಡಿ ಪ್ರಕರಣದಿಂದ ಹಿಂದೆ ಸರಿದಿರುವದಾಗಿ ಹೇಳಿದ್ದರಿಂದ ಪ್ರಕರಣದಿಂದ ದೂರ ಉಳಿಯು ವಂತಾಯಿತು ಎಂದು ಹೇಳಿದರು.

ಸಮರ್ಥನೆ, ವಿರೋಧ : ಕಾರ್ಯಕ್ರಮದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರುಗಳು ಪ್ರಕರಣದ ನಂತರದ ಬೆಳವಣಿಗೆ ಬಗ್ಗೆ ಸಮರ್ಥನೆ ಹಾಗೂ ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ ಗಣಪತಿ ಸಾವು ದುಃಖ ತರುವಂತದ್ದು, ಸರ್ಕಾರವು ನೌಕರರನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುತ್ತವೆ. ಗಣಪತಿ ಅವರಿಗೆ ಮಾನಸಿಕ ಹಿಂಸೆ ಇದ್ದಲ್ಲಿ ಅನುಪಮಾ ಶೆಣೈ ರೀತಿಯಲ್ಲಿ ಪ್ರತಿಭಟಿಸಿ ಹೊರಬರಬಹುದಿತ್ತು. ಒತ್ತಡಕ್ಕೆ ಮಣಿದ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ ಪಾರದರ್ಶಕವಾಗಿ ನಡೆದುಕೊಂಡಿದೆ. ಗಣಪತಿ ಸಾವು ಆತ್ಮಹತ್ಯೆ ಎಂದು ವರದಿ ನೀಡಿದೆ. ಆದ್ದರಿಂದ ಸರ್ಕಾರದ ನಿಲುವಿನಲ್ಲಿ ಈ ಬಗ್ಗೆ ಜನರಿಗೆ ಯಾವದೇ ಸಂಶಯ ಬೇಡ ಎಂದರು.

ಬಿಜೆಪಿ ಕ್ಷೇತ್ರ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಈ ಪ್ರಕರಣದಲ್ಲಿ ಸರ್ಕಾರದಿಂದ ಎಲ್ಲರನ್ನು ದಾರಿ ತಪ್ಪಿಸುವ ವ್ಯವಸ್ಥೆ ನಡೆದಿದೆ. ಆತ್ಮಹತ್ಯೆ ಎಂದು ಬಿಂಬಿಸಿರುವದು ಮೊದಲ ತಪ್ಪು. ಗಣಪತಿ ಅವರ ಮರಣಪೂರ್ವ ಹೇಳಿಕೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಗಣಪತಿ ಸಾವನ್ನಪ್ಪಿದ ಕೊಠಡಿ ಬಾಗಿಲನ್ನು ತೆರೆಯುವುದಕ್ಕೆ ಮುನ್ನ ಅವರ ಕುಟುಂಬದವರನ್ನು ಪರಿಗಣಿಸಿರಲಿಲ್ಲ. ಅವರ ದೇಹವನ್ನು ಫ್ಯಾನ್‍ನಿಂದ ಕೆಳಗಿಳಿಸಿದ ನಂತರ ಫಿಂಗರ್ ಪ್ರಿಂಟ್ ಪಡೆದಿಲ್ಲ. ಅವರ ದೇಹದಲ್ಲಿ ಗುಂಡು ಹೊಕ್ಕಿರುವದು ವಿವಿಧ ಮೂಲಗಳಿಂದ ತಿಳಿದುಬಂದಿದ್ದು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವದು ಸೂಕ್ತ. ಬಿಜೆಪಿ ಪಕ್ಷ ಕೂಡ ನ್ಯಾಯಕ್ಕಾಗಿ ಒತ್ತಾಯ ಮಾಡುತ್ತದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ನಮ್ಮನ್ನು ರಕ್ಷಿಸುವ ಪೊಲೀಸರನ್ನು ಕಾಯುವ ಜವಾಬ್ದಾರಿ ಸರ್ಕಾರ ಹಾಗೂ ಸಮಾಜದ ಮೇಲಿದೆ. ಗಣಪತಿ ಸಾವು ಸರ್ಕಾರದಿಂದಲೇ ನಡೆದ ಕೊಲೆ ಎಂದು ಆರೋಪಿಸಿದರು.

ಗಣಪತಿ ಅವರ ಮರಣಪೂರ್ವ ಹೇಳಿಕೆ ಪರಿಗಣಿಸಿ ಸಿಆರ್‍ಪಿಸಿ 154 ಅಡಿಯಲ್ಲಿ ಪ್ರಕರಣ ದಾಖಲಿಸ ಬೇಕಿತ್ತು. ಆದರೆ ಮುಖ್ಯಮಂತ್ರಿ ಕಚೇರಿಯಿಂದಲೇ ಪೊಲೀಸರ ಮೇಲೆ ತೀವ್ರ ಒತ್ತಡ ಹೇರಿ ಅಸಹಜ ಸಾವು ಎಂದು ದಾಖಲಿಸಿರುವದು ತಪ್ಪು. ವಿಧಿವಿಜ್ಞಾನ ವರದಿಗಿಂತ ಮುಂಚಿತವಾಗಿ 2016 ರ ಸೆ. 16 ರಂದು ಮುಖ್ಯಮಂತ್ರಿ ಆರೋಪಿ ಗಳನ್ನು ದೋಷಮುಕ್ತರು ಎಂದು ಘೋಷಿಸಿರುವದು ವ್ಯವಸ್ಥೆಯ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಇದನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಐಪಿಸಿ 306 ಆರ್/ಡಬ್ಲ್ಯು 34 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ನ್ಯಾಯಾಂಗದ ಮೇಲೆ ಭರವಸೆ ಇದೆ ಎಂದರು.