ಮಡಿಕೇರಿ, ಆ. 30: ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ರೈತ ಸಂಪರ್ಕ ಕೇಂದ್ರಗಳಿಗೆ ಬಾಕಿ ಇರುವ ಜಾಗದ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಿ ಕೊಳ್ಳುವಂತೆ ಕಂದಾಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಡಳಿತದಲ್ಲಿ ಎಲ್ಲಾ ಇಲಾಖೆಗಳಿಗೆ ಜಾಗ ಗುರುತಿಸುವದು ಕಂದಾಯಾಧಿಕಾರಿಗಳ ಕೆಲಸ ಎಂದು ಕಿವಿಮಾತು ಹೇಳಿದರು. ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಜಮೀನಿನ ಅವಶ್ಯಕತೆ ಇದೆ. ಇಲ್ಲದಿದ್ದರೆ ಪ್ರಗತಿ ಕುಂಠಿತವಾಗುತ್ತದೆ. ಅಂಬೇಡ್ಕರ್ ಭವನ, ಅಂಗನವಾಡಿಗಳ ನಿರ್ಮಾಣ ಕಾರ್ಯವು ಆದ್ಯತೆ ಮೇಲೆ ನಿರ್ವಹಿಸಬೇಕು ಎಂದರು.

ಎಸ್.ಸಿ.ಎಸ್.ಟಿ. ಜನಾಂಗದ ಅಭಿವೃದ್ಧಿಗೆ ಹೆಚ್ಚು ಅನುದಾನ ಸರ್ಕಾರ ನೀಡುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವ ಕೆಲಸ ಕಂದಾಯಾಧಿಕಾರಿಗಳು ಮಾಡಬೇಕು. ಆಗ ಮಾತ್ರ ಪ್ರಗತಿ ಸಾಧ್ಯ ಎಂದು ಅವರು ನುಡಿದರು.

ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಜಾಗವನ್ನು ವಿವಿಧ ಉದ್ದೇಶಗಳಿಗೆ ನಿವೇಶನ, ಕಸ ವಿಲೇವಾರಿ, ಸ್ಮಶಾನ ಇವುಗಳಿಗೆ ಬಳಸುವಂತೆ ಸೂಚನೆ ನೀಡಿದರು. ಚೆಟ್ಟಳ್ಳಿಯ ಕಸ ವಿಲೇವಾರಿ ಜಾಗದ ಸರ್ವೆ ಕಾರ್ಯವು ಪೂರ್ಣಗೊಂಡಿದೆ ಎಂದು ಇದೇ ವೇಳೆ ಸೋಮವಾರಪೇಟೆ ತಹಶೀಲ್ದಾರರು ಮಾಹಿತಿ ನೀಡಿದರು. ಸಂದ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ಮಾಶಾಸನ, ಪಿಂಚಣಿ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಅರ್ಹರಿಗೆ ತಲುಪಿಸುವಂತೆ ಸೂಚನೆ ನೀಡಿದರು. ಮೂರು ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಂಗನವಾಡಿಗಳಿಗೆ ನಿವೇಶನ ಅವಶ್ಯಕತೆ ಬಗ್ಗೆ ಮಾಹಿತಿ ನೀಡಿದರು. ಸೋಮವಾರಪೇಟೆಯಲ್ಲಿ 8 ಕಡೆ ನಿವೇಶನದ ಅವಶ್ಯಕತೆ ಇದೆ. ಶನಿವಾರಸಂತೆ ಹೋಬಳಿಯಲ್ಲಿ 1, ಕೊಡ್ಲಿಪೇಟೆಯಲ್ಲಿ 2, ಕುಶಾಲ ನಗರದಲ್ಲಿ 1 ಕಡೆ, ವೀರಾಜಪೇಟೆ ತಾಲೂಕಿನಲ್ಲಿ 15 ಕಡೆ ನಿವೇಶನದ ಅವಶ್ಯಕತೆ ಇದೆ ಮತ್ತು ಮಡಿಕೇರಿ ತಾಲೂಕಿನಲ್ಲಿ 12 ಕಡೆ ನಿವೇಶನದ ಅವಶ್ಯಕತೆ ಇದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಅಪರ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಪ್ರತಿಕ್ರಿಯಿಸಿ ಎಲ್ಲಾ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿಗಳು ಒಟ್ಟಾಗಿ ಸೂಕ್ತ ಜಾಗ ಗುರುತಿಸುವಂತೆ ತಾಕೀತು ಮಾಡಿದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಪಾಲಿಬೆಟ್ಟದಲ್ಲಿ 41 ಸೆಂಟ್ ಜಾಗ ಗುರುತಿಸಿದ್ದು ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಿತಿಮತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 41 ಸೆಂಟ್ ಜಾಗ ಗುರುತಿಸಿದ್ದು, ಶೀಘ್ರವಾಗಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತ ಸಂಪರ್ಕ ಕೇಂದ್ರಗಳಿಗೆ ಹೋಬಳಿ ಮಟ್ಟದಲ್ಲಿ ಅವಶ್ಯವಿರುವ ಜಾಗವನ್ನು ಗುರುತಿಸಿ ಸರ್ವೆ ಕಾರ್ಯ ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಅಪರ ಜಿಲ್ಲಾಧಿಕಾರಿ ತಹಶೀಲ್ದಾರರಿಗೆ ಸೂಚನೆ ನೀಡಿದರು. ಜಿಲ್ಲೆಯ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಕ್ರಮ ಹಾಗೂ ಲಭ್ಯವಿರುವ ಜಾಗವನ್ನು ನೀಡುವಂತೆ ಜಿಲ್ಲಾ ವಕ್ಫ್ ಅಧಿಕಾರಿಗೆ ಅವರು ತಿಳಿಸಿದರು. ಸಭೆಯಲ್ಲಿ ಮಡಿಕೇರಿ ಉಪ ವಿಭಾಗಾಧಿಕಾರಿ, ಎಲ್ಲಾ ತಾಲೂಕು ತಹಶೀಲ್ದಾರರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಕಂದಾಯಾಧಿಕಾರಿಗಳು ಇತರರು ಇದ್ದರು.