ಗೋಣಿಕೊಪ್ಪಲು, 30: ಜಿಲ್ಲಾ ಬಿ.ಜೆ.ಪಿ. ವೈದ್ಯಕೀಯ ಪ್ರಕೋಷ್ಠ ಹಾಗೂ ಹಿರಿಯ ನಾಗರಿಕ ವೇದಿಕೆ ವತಿಯಿಂದ ಪಿಂಚಣಿ ಅದಾಲತ್ ಶಿಬಿರ ಆಯೋಜಿಸಲಾಗಿತ್ತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಅರುಣ್ ಭೀಮಯ್ಯ ಅಧ್ಯಕ್ಷತೆಯಲ್ಲಿ ವೀರಾಜಪೇಟೆ ತಾಲೂಕು ವ್ಯಾಪ್ತಿಯ ಹಿರಿಯ ನಾಗರಿಕರಿಗೆ ಪಿಂಚಣಿ ಅದಾಲತ್‍ನಲ್ಲಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ನಿರ್ಗತಿಕ ವಿಧವಾ ವೇತನ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಹಿರಿಯರನ್ನು ಗೌರವದಿಂದ ಕಾಣುವ ದೇಶದಲ್ಲಿ ಅವರ ವೃದ್ಧಾಪ್ಯ ಜೀವನದಲ್ಲಿ ಸರಕಾರದಿಂದ ಸಿಗುವ ಪಿಂಚಣಿಯನ್ನು ನೇರವಾಗಿ ತಲುಪಿ ಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರೇರಣೆಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಅರುಣ್ ಭೀಮಯ್ಯ ಹೇಳಿದರು.

ಡಾ. ನವೀನ್ ಮಾತನಾಡಿ, ದೇಶ ಕಟ್ಟಲು ಶ್ರಮಿಸಿದ ಹಿರಿಯರನ್ನು ನಾವು ಗೌರವದಿಂದ ಕಾಣಬೇಕಾಗಿದೆ. ಸರಕಾರದಿಂದ ಸಿಗುವ ಅವಲತ್ತುಗ ಳನ್ನು ಸಹಕಾರ ಮನೋಭಾವದಿಂದ ಅರ್ಹರಿಗೆ ಒದಗಿಸಿಕೊಡುವ ಕಾರ್ಯ ಆಗಬೇಕಾಗಿದೆ. ಹಿರಿಯರನ್ನು ಪೂಜ್ಯ ಭಾವನೆಯಿಂದ ಕಾಣುವ ಮೂಲಕ ಗೌರವಿಸಬೇಕು ಎಂದು ಹೇಳಿದರು.

ಜಿ.ಪಂ. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಮಾತನಾಡಿದರು.

ಶಿಬಿರದಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಎ.ಪಿ.ಎಂ.ಸಿ. ಅಧ್ಯಕ್ಷ ಸುವಿನ್ ಗಣಪತಿ, ಉಪ ತಹಶೀಲ್ದಾರ್ ಶಶಿಧರ್, ಜಿಲ್ಲಾ ಬಿ.ಜೆ.ಪಿ. ವ್ಯಾಪಾರ ಪ್ರಕೋಷ್ಠ ಸಂಚಾಲಕ ಗಿರೀಶ್ ಗಣಪತಿ ಉಪಸ್ಥಿತರಿದ್ದರು.