ಕುಶಾಲನಗರ, ಆ. 30: ಬಹುಭಾಷೆ, ಜಾತಿ, ಮತಗಳ ಸಂಗಮದ ನಡುವೆ ಪರಂಪರೆಯ ಕಲೆ, ಸಾಹಿತ್ಯ ಸಂಸ್ಕøತಿ, ಆರಾಧನೆಗಳನ್ನು ಉಳಿಸಿ ಬೆಳೆಸಿ ಮುಂದಿನ ತಲೆಮಾರಿಗೆ ತಿಳಿಸುವದು ಸಂಘ-ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಕರೆ ನೀಡಿದ್ದಾರೆ. ಕಾಸರಗೋಡು ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಆಶ್ರಯದಲ್ಲಿ ರಾಜ್ಯದ ಗಡಿಭಾಗದ ಕಾರಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಪಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪ್ರಕೃತಿಯನ್ನು ಆರಾಧಿಸುವ ಮೂಲಕ ಉತ್ತಮ ಪರಿಸರ ನಿರ್ಮಾಣದಲ್ಲಿ ಕೈಜೋಡಿ ಸಬೇಕು ಎಂದ ಅವರು, ಪ್ರಕೃತಿಯ ಅವನತಿಯಿಂದ ಆತಂಕದ ದಿನಗಳು ಎದುರಾಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಕೇಳುಮಾಸ್ಟರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಉಪಸ್ಥಿತರಿದ್ದು ಮಾತನಾಡಿದರು. ಈ ಸಂದರ್ಭ ಗಡಿನಾಡ ಕಲಾ ಪ್ರತಿಭೆಗಳಾದ ಜೆ. ಕೃಷ್ಣ, ವಿದೂಷಿ ಯೋಗೀಶ್ವರ್ ಜಯಪ್ರಕಾಶ್, ಜಾನಪದ ಕಲಾವಿದ ಮನು ಪಣಿಕ್ಕರ್, ಮಜಾ ಭಾರತ್ ಕಲಾವಿದ ರಾಜೇಶ್ ಮುಗುಳಿ, ಚಿತ್ರಕಲಾ ಶಿಕ್ಷಕ ಜ್ಯೋತಿ ಚಂದ್ರನ್, ಸಂಗೀತ ಶಿರೋಮಣಿ ರವೀಂದ್ರ ಭಟ್ ಗೋಸಾಡ, ಬಾಲಪ್ರತಿಭೆಗಳಾದ ವಿಷ್ಣುಪ್ರಿಯ, ಚಿತ್ತರಂಜನ್ ಮತ್ತು ಕರ್ನಾಟಕ ಜಾನಪದ ಪರಿಷತ್ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಅಕಾಡೆಮಿಯ ಉಪಾಧ್ಯಕ್ಷ ಶ್ಯಾಮ್‍ಪ್ರಸಾದ್, ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಜನಪದ ಪರಿಷತ್ ಕಾಸರಗೋಡು ಜಿಲ್ಲಾಧ್ಯಕ್ಷ ಸುಬ್ಬಯ್ಯ ಕಟ್ಟೆ, ಶಾಲಾ ಮುಖ್ಯೋಪಾಧ್ಯಾಯ ಕರುಣಾಕರನ್ ಮತ್ತಿತರರು ಇದ್ದರು.