ಸೋಮವಾರಪೇಟೆ, ಆ. 30: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕರ ಅಗತ್ಯ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿ ಪಂಚಾಯಿತಿ ಸದಸ್ಯರೋರ್ವರು ಸ್ವತಃ ಕಚೇರಿ ಬಾಗಿಲಿನಲ್ಲಿ ಧರಣಿ ಕುಳಿತ ಘಟನೆ ನಡೆಯಿತು.

ಪಟ್ಟಣ ಪಂಚಾಯಿತಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ.24.1 ಅನುದಾನದಡಿಯಲ್ಲಿ ನಲ್ಲಿ ಸಂಪರ್ಕ ಕಲ್ಪಿಸಿಕೊಳ್ಳಲು ಈರ್ವರು ಫಲಾನುಭವಿಗಳಿಗೆ ತಲಾ 3 ಸಾವಿರ ಅನುದಾನ ನೀಡುವ ಬಗ್ಗೆ ಕಳೆದ ಒಂದು ವರ್ಷದ ಹಿಂದೆಯೇ ಪ.ಪಂ. ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಅದರಂತೆ 9ನೇ ವಾರ್ಡ್‍ನ ನಿವಾಸಿ ನಂಜ ಹಾಗೂ 3ನೇ ವಾರ್ಡ್‍ನ ಎಚ್.ಬಿ.ಗಣೇಶ್ ಅವರುಗಳು ತಮ್ಮ ಮನೆಗೆ ನಲ್ಲಿ ಸಂಪರ್ಕವನ್ನು ಪಡೆದುಕೊಂಡು ಬಿಲ್‍ಗಾಗಿ ಕಳೆದ ಒಂದು ವರ್ಷದಿಂದ ಪಟ್ಟಣ ಪಂಚಾಯಿತಿಗೆ ಅಲೆದಾಡಿದರೂ ಇಂದು, ನಾಳೆ, ಮುಂದಿನ ವಾರ ಎಂದು ಅಲೆದಾಡಿಸುತ್ತಿದ್ದರು ಎನ್ನಲಾಗಿದೆ.

ಇಂದು ಮಧ್ಯಾಹ್ನದ ಸಮಯದಲ್ಲಿ ಕಚೇರಿಗೆ ಆಗಮಿಸಿದ ಫಲಾನುಭವಿಗಳು ಸಿಬ್ಬಂದಿ ರೂಪಾ ಅವರ ಬಳಿ ಈ ಬಗ್ಗೆ ವಿಚಾರಿಸಿದ್ದು, ಬಿಲ್‍ನ ಕೆಲಸ ಮಾಡಲು ಇಂದು ಸಾಧ್ಯವಿಲ್ಲ ಎಂದಿದ್ದಾರೆ. ಇದರೊಂದಿಗೆ 9ನೇ ವಾರ್ಡ್‍ನ ತಿಮ್ಮಮ್ಮ ಅವರಿಗೆ ಉಚಿತ ಗ್ಯಾಸ್ ಸಂಪರ್ಕದ ಕೆಲಸಕ್ಕೂ ಸತಾಯಿಸಿದ್ದಾರೆ. ಇದರಿಂದ ಕುಪಿತರಾದ ಫಲಾನುಭವಿಗಳು ವಾರ್ಡ್ ಸದಸ್ಯ ಕೆ.ಎ. ಆದಂ ಅವರಲ್ಲಿ ದೂರಿದ್ದಾರೆ.

ನಂತರ ಸದಸ್ಯ ಆದಂ ಅವರು ಕಚೇರಿಗೆ ಆಗಮಿಸಿ ಫಲಾನುಭವಿ ಗಳನ್ನು ಸತಾಯಿಸುತ್ತಿರುವ ಬಗ್ಗೆ ಪ್ರಶ್ನಿಸಿದ ಸಂದರ್ಭವೂ ಸಿಬ್ಬಂದಿ ಉಡಾಫೆಯ ಉತ್ತರ ನೀಡಿದ್ದಾರೆ ಎನ್ನಲಾಗಿದ್ದು, ಇದರಿಂದ ಆಕ್ರೋಶಗೊಂಡ ಸದಸ್ಯ ಆದಂ ಮತ್ತು ಫಲಾನುಭವಿಗಳಾದ ನಂಜ, ಗಣೇಶ್, ತಿಮ್ಮಮ್ಮ ಅವರುಗಳು ಕಚೇರಿಯ ಮುಂಭಾಗದ ಬಾಗಿಲಿನಲ್ಲಿಯೇ ಕುಳಿತು ಧರಣಿ ಆರಂಭಿಸಿದ್ದಾರೆ.

ಸುಮಾರು ಎರಡು ಗಂಟೆಗಳ ಕಾಲ ಧರಣಿ ಕುಳಿತ ನಂತರ ಕರ್ತವ್ಯ ನಿಮಿತ್ತ ಮಡಿಕೇರಿಗೆ ತೆರಳಿದ್ದ ಮುಖ್ಯಾಧಿಕಾರಿ ನಾಚಪ್ಪ ಅವರು ಕಚೇರಿಗೆ ಆಗಮಿಸಿ ಸಮಸ್ಯೆ ಆಲಿಸಿದರು. ಫಲಾನುಭವಿಗಳು ಹಾಗೂ ಸದಸ್ಯ ಆದಂ, ಇಂಜಿನಿಯರ್ ವಿರೇಂದ್ರ ಅವರುಗಳ ಸಮಕ್ಷಮ ಈ ಬಗ್ಗೆ ಚರ್ಚಿಸಿ ತಕ್ಷಣ ಬಿಲ್ ನೀಡಲು ಹಾಗೂ ಗ್ಯಾಸ್ ಸಂಪರ್ಕಕ್ಕೆ ದೃಢೀಕರಣ ಪತ್ರ ನೀಡುವ ಭರವಸೆ ಬಂದ ನಂತರ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು.