ಗೋಣಿಕೊಪ್ಪಲು, ಆ. 30: ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷವಾದರೂ ಇಲ್ಲಿನ ದೀನ ದಲಿತರ, ಬಡ ಮಧ್ಯಮ ವರ್ಗದ ಆರ್ಥಿಕ ಸ್ಥಿತಿಗತಿ ಸುಧಾರಿಸಿಲ್ಲ. ಭಾರತದ ರೈತರೂ ತಮ್ಮ ಆದಾಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿಲ್ಲ. ಈ ಎಲ್ಲ ಅಂಶಗಳನ್ನು ಒಳಗೊಂಡು ಮುಂದಿನ ಐದು ವರ್ಷದಲ್ಲಿ ಭಾರತ ಸ್ವಾಭಿಮಾನ ರಾಷ್ಟ್ರವಾಗಬೇಕು. ಇಲ್ಲಿನ ರೈತರ ಆದಾಯ ದ್ವಿಗುಣಗೊಳ್ಳಬೇಕು. ದೇಶದ ಎಲ್ಲ ಗ್ರಾಮಗಳೂ ಬಯಲು ಶೌಚಾಲಯ ಮುಕ್ತ ಗ್ರಾಮವಾಗಬೇಕು. 2022ನೇ ಇಸವಿಗೆ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಗಳಾಗಲಿದ್ದು, ಎಲ್ಲ ಬಡ-ಮಧ್ಯಮ ವರ್ಗಕ್ಕೂ ಸೂರು ಸಿಗಬೇಕು ಇದು ಭಾರತದ ಪ್ರಧಾನಿ ನರೇಂದ್ರ ಮೋದಿ ನವಭಾರತ ಮಂಥನ, ಸಂಕಲ್ಪ ಸಿದ್ಧಿ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ವ್ಯಾಖ್ಯಾನಿಸಿದರು.

ಭಾರತೀಯ ಕೃಷಿ ಅನುಸಂದಾನ ಪರಿಷತ್, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿಗೆ ಸಮೀಪ ಅತ್ತೂರು ಪಾಮ್ ವ್ಯಾಲಿ ರೆಸಾರ್ಟ್ ಸಭಾಂಗಣದಲ್ಲಿ ಜರುಗಿದ ‘ನವಭಾರತ ಮಂಥನ, ಸಂಕಲ್ಪದಿಂದ ಸಿದ್ಧಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತ ದೇಶವು ಬ್ರಿಟೀಷರ ದಾಸ್ಯಕ್ಕೆ ತುತ್ತಾಗಿದ್ದ ಸಂದರ್ಭ ಮಹಾತ್ಮಾಗಾಂಧಿ ಅವರು 1942-47 ರವರೆಗೆ ಕ್ವಿಟ್ ಇಂಡಿಯಾ ಚಳುವಳಿ ಆರಂಭಿಸುವ ಮೂಲಕ ಬ್ರಿಟೀಷರೇ ಭಾರತವನ್ನು ಬಿಟ್ಟು ತೊಲಗಿ, ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು, ಇತ್ಯಾದಿ ಅಸಹಕಾರ ಚಳುವಳಿ ಮೂಲಕ ಸ್ವಾತಂತ್ರ್ಯ ತಂದು ಕೊಡಲು ಹೋರಾಟ ನಡೆಸಿದ್ದರು. ಇದೀಗ ಮೋದಿ ಅವರು ಮುಂದಿನ 5 ವರ್ಷಗಳ ಅವಧಿಯಲ್ಲಿ ಭಾರತದ ದಾರಿದ್ರ್ಯವನ್ನು ತೊಲಗಿಸುವ ನಿಟ್ಟಿನಲ್ಲಿ, ಹಲವು ಕಾರ್ಯಕ್ರಮ ಹಾಕಿಕೊಂಡಿದ್ದು ಇದರ ಸದುಪಯೋಗವನ್ನು ಎಲ್ಲರೂ ಹೊಂದಿಕೊಳ್ಳಲು ಪ್ರತಾಪ್‍ಸಿಂಹ ಕರೆನೀಡಿದರು.

ಗ್ರಾಮೀಣ ವಿದ್ಯುದೀಕರಣಕ್ಕೆ ಒತ್ತು ನೀಡಿದ ಮೋದಿ ಅವರು ಒಟ್ಟು 18,000 ಹಳ್ಳಿಗಳ ಪೈಕಿ ಕಳೆದ ಮೂರು ವರ್ಷ ಅವಧಿಯಲ್ಲಿ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಲ್ಲಿ 14,000 ಹಳ್ಳಿಗಳಿಗೆ ವಿದ್ಯುತ್ ಕಲ್ಪಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ವೀರಾಜಪೇಟೆ ತಾಲೂಕಿಗೂ ಸುಮಾರು ರೂ.5.50 ಕೋಟಿ ಹಣ ಬಿಡುಗಡೆಯಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಸಂಗ ಸಂದರ್ಭ ನಿರಂತರ ವಿದ್ಯುತ್ ಸಂಪರ್ಕಕ್ಕೆ ಒತ್ತು ನೀಡಿದ್ದಾರೆ. ಭೂಮಿಯ ಫಲವತ್ತತೆಯನ್ನು ಕಾಪಾಡುವ ನಿಟ್ಟಿನಲ್ಲಿ 9 ಕೋಟಿ ‘ಮಣ್ಣು ಆರೋಗ್ಯ ಕಾರ್ಡ್’ ವಿತರಿಸಲಾಗಿದೆ. ಭವಿಷ್ಯದಲ್ಲಿ ಸಾವಯವ ಕೃಷಿ ಪದ್ಧತಿಗೆ ಉತ್ತಮ ಮಾರುಕಟ್ಟೆ ಸಿಗಲಿದೆ. 2018ಕ್ಕೂ ಮುನ್ನ ಎಲ್ಲ ಶಾಲೆಗಳಲ್ಲಿಯೂ ಹೆಣ್ಣು-ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ಗುರಿಯನ್ನು ಕೇಂದ್ರ ಹೊಂದಿದೆ. ಸುಮಾರು ಇಪ್ಪತ್ತೊಂಬತ್ತುವರೆ ಸಾವಿರ ಕೋಟಿ ಜನ್‍ಧನ್ ಯೋಜನೆಯಲ್ಲಿ ಶ್ರೀಸಾಮಾನ್ಯನಿಗೆ ಬ್ಯಾಂಕ್ ಖಾತೆ ತೆರೆಯಲಾಗಿದೆ. ಉಜ್ವಲ ಅನಿಲ ಯೋಜನೆ, ಸಬ್ಸಿಡಿ ನೇರ ಬ್ಯಾಂಕ್ ಖಾತೆಗೆ, ಕೃಷಿಕರಿಗೆ ಸಿಗುವ ರೂ.6,800 ಬರಪರಿಹಾರ ಮೊತ್ತ ನೇರ ಅವರದೇ ಖಾತೆಗೆ ಜಮಾ ಆಗುತ್ತಿದೆ ಎಂದರು.

ಯಾರೂ ನಿರುದ್ಯೋಗಿಯಾಗಿರ ಬಾರದು ಎಂದು ಮುದ್ರಾ ಯೋಜನೆ ಜಾರಿಗೆ ತರಲಾಗಿದೆ. ಶಿಶು, ತರುಣ್, ಕಿಶೋರ್ ಯೋಜನೆ ಮೂಲಕ ರೂ.50 ಸಾವಿರದಿಂದ ರೂ.10 ಲಕ್ಷದ ವರೆಗೂ ಜಾಮೀನು ರಹಿತ ಸಾಲದ ಯೋಜನೆ ತರಲಾಗಿದೆ. ಭೃಷ್ಟಾಚಾರ ಮುಕ್ತ ಮೋದಿ ಸರ್ಕಾರವು ಮುಂದಿ ನ ಕೆಲವೇ ವರ್ಷಗಳಲ್ಲಿ ಜಪಾನ್, ಕೊರಿಯಾ, ತೈವಾನ್, ಚೀನಾ ಮಾದರಿ ಅಭಿವೃದ್ಧಿ ಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಸೇರ್ಪಡೆ ಗೊಳ್ಳಲಿದೆ. ಈ ನಿಟ್ಟಿನಲ್ಲಿ ದೇಶದ 125 ಕೋಟಿ ಜನತೆಯ ಸಹಕಾರ ಕೇಂದ್ರ ಸರ್ಕಾರಕ್ಕೆ ಬೇಕಾಗಿದೆ ಎಂದು ನುಡಿದರು.

ಸುಮಾರು ಏಳು ಅಂಶಗಳ ಕಾರ್ಯಕ್ರಮವಾದ ಉತ್ಪಾದನೆ, ಕೃಷಿ ಪರಿಕರ ಬಳಕೆ, ಗುಣಮಟ್ಟದ ಉತ್ಪಾದನೆ, ನೂತನ ಕೃಷಿ ಮಾರಾಟ ತೆರಿಗೆ ನೀತಿ ಜಾರಿ ಇವೇ ಮೊದಲಾದ ಅನುಷ್ಟಾನದೊಂದಿಗೆ ಎಲ್ಲ ರೈತರಿಗೆ ಪ್ರತಾಪ್ ಸಿಂಹ ಅವರು ಪ್ರತಿಜ್ಞಾವಿಧಿ ಬೋಧನೆ ಮಾಡಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ವೆಂಕಟ್ ಕುಮಾರ್ ಅವರು, ಕೃಷಿಕರಿಗೆ ಕೇಂದ್ರ ಸರ್ಕಾರದ ಸೌಲಭ್ಯಗಳು ಹಾಗೂ ಆದಾಯ ದ್ವಿಗುಣಗೊಳಿಸಲು ಇರುವ ಅವಕಾಶ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭ ರೈತರ ಆದಾಯವನ್ನು 2022ಕ್ಕೂ ಮುನ್ನ ದ್ವಿಗುಣಗೊಳಿಸುವ ಏಳು ಅಂಶಗಳ ಕೈಪಿಡಿಯನ್ನು ಹಾಗೂ ಪುತ್ತರಿ ರೈತ ಉತ್ಪಾದಕಾ ಸಂಸ್ಥೆಯ ಹಸ್ತಪತ್ರಿಕೆ ಯನ್ನು ಸಂಸದರು ಹಾಗೂ ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಎಂ.ಸಿ. ನಾಣಯ್ಯ ಬಿಡುಗಡೆಗೊಳಿಸಿದರು.

ಸಭೆಯ ನಂತರ ರೈತ-ವಿಜ್ಞಾನಿಗಳ ಸಂವಾದ, ಕೃಷಿ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ ಜರುಗಿತು. ವೇದಿಕೆಯಲ್ಲಿ ಬೆಂಗಳೂರು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಂ.ಆರ್.ದಿನೇಶ್, ಕೊಡಗು ಜಿಲ್ಲೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ರಾಮಪ್ಪ, ಕೊಡಗು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಬಿ.ಆರ್. ಗಿರೀಶ್‍ಕುಮಾರ್, ಪಶುವೈದ್ಯ ಡಾ.ರಮೇಶ್, ಕೆ.ಅರುಣ್ ಅಪ್ಪಣ್ಣ ಮುಂತಾದವರು ಉಪಸ್ಥಿತರಿದ್ದರು.

ಕೆವಿಕೆ ಮುಖ್ಯಸ್ಥ ಡಾ.ಸಾಜು ಜಾರ್ಜ್ ಸ್ವಾಗತ, ಪ್ರಾಸ್ತಾವಿಕ ಕೆವಿಕೆ ವಿಷಯ ತಜ್ಞ ಕೆ.ವಿ. ವೀರೇಂದ್ರ ಕುಮಾರ್, ಪ್ರಾರ್ಥನೆ ಲೋಹಿತ್ ಭೀಮಯ್ಯ ಹಾಗೂ ವಂದನಾರ್ಪಣೆ ಯನ್ನು ವಿಜ್ಞಾನಿ ಕೆ.ಎ.ದೇವಯ್ಯ ನಿರ್ವಹಿಸಿದರು.

ವರದಿ: ಟಿ.ಎಲ್.ಶ್ರೀನಿವಾಸ್, ಎನ್.ಎನ್. ದಿನೇಶ್