ಸೋಮವಾರಪೇಟೆ,ಆ.30: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿಮಂಗಳೂರು-ಕೊರ್ಲಳ್ಳಿ ರಸ್ತೆಯನ್ನು ನಬಾರ್ಡ್‍ಗೆ ಸೇರಿಸಿ ಅಭಿವೃದ್ಧಿ ಪಡಿಸಲಾಗುವದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಗ್ರಾಮಸ್ಥರ ಆಹ್ವಾನದ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಶಾಸಕರು, ಕೊರ್ಲಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಅತೀ ಕಿರಿದಾಗಿದ್ದು, ರಸ್ತೆಯ ಅಕ್ಕಪಕ್ಕ ಇರುವವರು ಜಾಗ ನೀಡಿದರೆ ಈ ರಸ್ತೆಯನ್ನು ನಬಾರ್ಡ್‍ಗೆ ಸೇರಿಸಿ ಅಭಿವೃದ್ಧಿ ಪಡಿಸಲಾಗುವದು ಎಂದು ಭರವಸೆ ನೀಡಿದರು.

ಸದ್ಯ ರಸ್ತೆ ತೀರಾ ಹಾಳಾಗಿದ್ದು, ವಾಹನಗಳ ಓಡಾಟ, ಜನ ಸಂಚರಿಸಲೂ ಸಹ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಂಪ್ರತಿ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೂ ತೊಂದರೆ ಯಾಗುತ್ತಿದೆ ಎಂದು ಗ್ರಾಮಸ್ಥರಾದ ಜಿತೇಂದ್ರ, ವಿಜಯ್, ನಾಗೇಂದ್ರ, ಪುನೀತ್ ಇತರರು ಶಾಸಕರ ಗಮನಕ್ಕೆ ತಂದರು.

ಈ ಸಂದರ್ಭ ಮಾತನಾಡಿದ ರಂಜನ್, ಸದ್ಯದ ಮಟ್ಟಿಗೆ ರಸ್ತೆಯ ಗುಂಡಿಗಳನ್ನು ಮುಚ್ಚಿ ದುರಸ್ತಿ ಮಾಡುವದರೊಂದಿಗೆ ಸುಗಮ ಸಂಚಾರಕ್ಕೆ ಅನುವು ಮಾಡಲಾಗುವದು ಎಂದರು. ಇದೇ ಸಂದರ್ಭ ಬಸವನಕೊಪ್ಪ-ಕೊರ್ಲಳ್ಳಿ ರಸ್ತೆ ಹಾಗೂ ಪರಿಶಿಷ್ಟ ಜಾತಿ ಕಾಲೋನಿ ರಸ್ತೆಗಳನ್ನೂ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಈ ಸಂದರ್ಭ ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಬಿಜೆಪಿ ಕ್ಷೇತ್ರ ಸಮಿತಿ ಕಾರ್ಯಾಧ್ಯಕ್ಷ ಶುಂಠಿ ಸುರೇಶ್, ಪ್ರಮುಖರಾದ ರಾಶಿತ್, ರುದ್ರಪ್ಪ ಲೋಹಿತ್, ಹನಕೋಡು ವೇದಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.