ಸೋಮವಾರಪೇಟೆ, ಆ. 29: ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊಡಗು ಮೂಲಕ ಡಿವೈಎಸ್‍ಪಿ ಗಣಪತಿ ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳಲ್ಲಿ ಯಾವದೇ ಹುರುಳಿಲ್ಲ ಎಂದು ರಾಜ್ಯ ರೇಷ್ಮೆ ಹಾಗೂ ಪಶು ಸಂಗೋಪನಾ ಇಲಾಖಾ ಸಚಿವ ಎ. ಮಂಜು ಹೇಳಿದ್ದಾರೆ.

ಕಾರ್ಯಕ್ರಮ ನಿಮಿತ್ತ ಕೊಡ್ಲಿಪೇಟೆ ಸಮೀಪದ ಕಿರಿಕೊಡ್ಲಿಗೆ ಆಗಮಿಸಿದ್ದ ಸಚಿವರು ಪತ್ರಕರ್ತರೊಂದಿಗೆ ಮಾತನಾಡಿದರು. ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ನಾಶಪಡಿಸಿರುವ ಆರೋಪ ಕೇಳಿಬಂದಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ ಸಂದರ್ಭ ಉತ್ತರಿಸಿದ ಎ. ಮಂಜು, ಸಾಕ್ಷ್ಯಗಳನ್ನು ನಾಶಪಡಿಸಿದ್ರೆ ತನಿಖೆಯಿಂದ ತಿಳಿದು ಬರುತ್ತದೆ. ತಪ್ಪು ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗುತ್ತದೆ. ಈ ಪ್ರಕರಣದ ಪ್ರಾಥಮಿಕ ತನಿಖೆಯ ಲ್ಲಿಯೇ ರಾಜ್ಯ ಸರ್ಕಾರದ ಸಚಿವರ ಪಾತ್ರ ಇಲ್ಲ ಎಂಬದು ಸ್ಪಷ್ಟವಾಗಿದೆ ಎಂದರು.

ಇದೇ ಪ್ರಕರಣಕ್ಕೆ ಸಂಬಂಧಿಸಿ ದಂತೆ ವಿರೋಧ ಪಕ್ಷಗಳ ಮುಖಂಡರು ಸಚಿವ ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಗ್ಗೆ ಮಾತನಾಡಿದ ಎ. ಮಂಜು, ವಿರೋಧ ಪಕ್ಷಗಳು ಹೇಳೋಕೆ ಅಂತಾನೇ ಇರೋದು, ಹೇಳಲಿ. ಸಾಕ್ಷ್ಯಗಳು ನಾಶವಾಗಿವೆಯೋ ಇಲ್ಲವೋ ಎಂಬದು ಮೊಬೈಲ್ ಕರೆ ಮಾಹಿತಿ ಮೂಲಕ ತಿಳಿದುಬರುತ್ತದೆ. ಈ ಹಿಂದೆಯೇ ಸಚಿವರ ಪಾತ್ರ ಇಲ್ಲ ಎಂಬದು ಸಾಬೀತಾಗಿದ್ದರೂ ಇದೀಗ ಸಾಕ್ಷ್ಯನಾಶದ ಆರೋಪ ಮಾಡುತ್ತಿರು ವದರಲ್ಲಿ ಯಾವದೇ ಹುರುಳಿಲ್ಲ ಎಂದರು.

ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಬಗ್ಗೆ ಕೇಳಿಬಂದಿರುವ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಮಂಜು, ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೋ ಬೇಡವೋ ಎಂಬದು ಸರ್ಕಾರಕ್ಕೆ ಬಿಟ್ಟದ್ದು, ಇದರಲ್ಲಿ ತನ್ನ ವೈಯಕ್ತಿಯ ಅಭಿಪ್ರಾಯಗಳೇನೂ ಇಲ್ಲ ಎಂದರು.