ಮಡಿಕೇರಿ, ಆ. 29: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯ ಒತ್ತಿನಲ್ಲಿ ಬರುವ ಮದ್ಯದಂಗಡಿ - ಬಾರ್‍ಗಳನ್ನು ಸ್ಥಳಾಂತರ ಗೊಳಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನ ರಾಜ್ಯದಲ್ಲಿ ಜಾರಿಗೆ ಬಂದು ಇದೀಗ ಎರಡು ತಿಂಗಳು ಪೂರ್ಣಗೊಳ್ಳುತ್ತಿವೆ. ಈ ಆದೇಶ ಕಟ್ಟುನಿಟ್ಟಾಗಿ ಜುಲೈ 1 ರಿಂದ ಅನ್ವಯವಾಗಿದ್ದು, ಕೊಡಗಿನಲ್ಲಿ ವಹಿವಾಟು ನಡೆಸುತ್ತಿದ್ದ ಹಲವಾರು ಸನ್ನದುದಾರರು ಇದರಿಂದ ಸಮಸ್ಯೆಗೆ ಒಳಗಾಗಿದ್ದರು. ಈ ನಡುವೆ ನಡೆದ ಹಲವು ಬೆಳವಣಿಗೆಗಳಿಂದ ಕೆಲವರು ನಿರಾಳರಾದರೆ ಇನ್ನು ಹಲವರು ಸ್ಥಳಾಂತರದ ಅನಿವಾರ್ಯತೆಗೆ ಒಳಗಾಗಿದ್ದು, ಇದಕ್ಕೆ ಇನ್ನು ಕೇವಲ ಸೆಪ್ಟೆಂಬರ್ 30ರವರೆಗೆ ಮಾತ್ರ ಅವಕಾಶವಿದೆ.
ಸುಪ್ರೀಂ ನಿರ್ದೇಶನ ಜಾರಿಗೆ ಮುನ್ನ ರಾಜ್ಯ ಸರಕಾರ ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಯನ್ನು ಡಿನೋಟಿಫಿಕೇಷನ್ ಮಾಡಿದ ಪರಿಣಾಮ ಹಾಗೂ ಕ್ಲಬ್‍ಗಳಿಗೆ ವಿನಾಯಿತಿ ನೀಡಿದ್ದರಿಂದ ಈ ಪರವಾನಗಿದಾರರು ಉಳಿದು ಕೊಂಡಿದ್ದರು. ಕೊಡಗು ಜಿಲ್ಲೆ ಮೂರು ಪಟ್ಟಣ ಪಂಚಾಯಿತಿ ಹಾಗೂ ಒಂದು ನಗರಸಭೆಯನ್ನು ಹೊಂದಿದೆ. ಇದರಲ್ಲಿ ವೀರಾಜಪೇಟೆ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸನ್ನದುದಾರರಿಗೆ ಪರವಾನಗಿ ಭಾಗ್ಯ ದೊರೆತಿತ್ತು. ಆದರೆ ಕುಶಾಲನಗರ ಪಟ್ಟಣ ಪಂಚಾಯಿತಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬರುವದರಿಂದ ಈ ವ್ಯಾಪ್ತಿಯ ವಿವಿಧ ಪರವಾನಗಿಯ 13 ಮಳಿಗೆಗಳು ಹಾಗೂ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಸುದರ್ಶನ ವೃತ್ತದಿಂದ ಜಿ.ಟಿ. ವೃತ್ತದವರೆಗಿನ 9 ಮದ್ಯದಂಗಡಿಗಳು ಅನಿವಾರ್ಯವಾಗಿ ಮುಚ್ಚಲ್ಪಟ್ಟಿದ್ದವು. ಇದೀಗ ಮೊನ್ನೆ ಮೊನ್ನೆ ತಾನೆ ಸುಪ್ರೀಂ ಕೋರ್ಟ್‍ನಿಂದ ಮತ್ತೊಂದು ಆದೇಶ ಹೊರ ಬಿದ್ದಿದ್ದು, ಈ ಆದೇಶ
(ಮೊದಲ ಪುಟದಿಂದ) ನಗರಸಭೆ ಹಾಗೂ ಪ.ಪಂ. ವ್ಯಾಪ್ತಿಯಲ್ಲಿ ಮುಚ್ಚಲ್ಪಟ್ಟಿದ್ದ ಮಳಿಗೆಗಳ ಮರು ಪ್ರಾರಂಭಕ್ಕೆ ವರದಾನವಾಗಿದೆ. ಸುಪ್ರೀಂ ಕೋರ್ಟ್ ಈ ವ್ಯಾಪ್ತಿಗೆ ವಿನಾಯಿತಿ ನೀಡಿದ್ದರಿಂದ ಇದೀಗ ಕುಶಾಲನಗರ ಹಾಗೂ ಮಡಿಕೇರಿಯಲ್ಲಿ ಮುಚ್ಚಿದ್ದ ಮಳಿಗೆಗಳು ತೆರೆದುಕೊಳ್ಳಲಿವೆ. ನಿನ್ನೆಯಿಂದ ಪರವಾನಗಿ ನವೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೆರಡು ದಿನದಲ್ಲಿ ಈ ಮಳಿಗೆಗಳಲ್ಲೂ ಎಂದಿನಂತೆ ವಹಿವಾಟು ಶುರುವಾಗಲಿದೆ.
ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ವಿವಿಧ ರೀತಿಯ ಪರವಾನಗಿಯ ಮೂಲಕ ವಹಿವಾಟು ನಡೆಸುತ್ತಿದ್ದ 218 ಮಳಿಗೆಗಳ ಪೈಕಿ 133 ಸನ್ನದುಗಳು ವಹಿವಾಟು ನಡೆಸುವಂತಾಗಿದೆ. ಅಬಕಾರಿ ವರ್ಷಾಂತ್ಯ ಜೂನ್ 30 ಆಗಿದ್ದು, ಜುಲೈ 1ಕ್ಕೆ ಪರವಾನಗಿ ನವೀಕರಣಗೊಳ್ಳಬೇಕಿತ್ತು. ಆದರೆ ಆ ಸಂದರ್ಭ ನ್ಯಾಯಾಲಯದ ಆದೇಶದ ಪರಿಣಾಮ ಕೇವಲ 98 ಮಳಿಗೆಗಳು ಮಾತ್ರ ನವೀಕರಣಗೊಂಡಿದ್ದವು. ಇದೀಗ ಹಲವು ಮಳಿಗೆಗಳು ನಿಗದಿತ ಅಂತರ (220 ಮೀ ಹಾಗೂ 500 ಮೀಟರ್) ದಿಂದ ಸ್ಥಳಾಂತರ ಗೊಂಡಿವೆ.
ಗ್ರಾ.ಪಂ. ವ್ಯಾಪ್ತಿಗೆ ‘ಬಿಸಿತುಪ್ಪ’
ಕೊಡಗು ಜಿಲ್ಲೆ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನೇ ಒಳಗೊಂಡಿದೆ. ಸುಪ್ರೀಂ ನಿರ್ದೇಶನ ಹಾಗೂ ಈ ವ್ಯಾಪ್ತಿಯ ಹೆದ್ದಾರಿಗೆ ಡಿನೋಟಿಫಿಕೇಷನ್ ಭಾಗ್ಯ ಸಿಗದ ಪರಿಣಾಮ ಈ ವಿಭಾಗದಲ್ಲಿ ವಹಿವಾಟು ನಡೆಸುತ್ತಿದ್ದ ಮಳಿಗೆಗಳ ಸ್ಥಳಾಂತರ ಅನಿವಾರ್ಯವೇ ಆಗಿದ್ದು, ಪರವಾನಗಿದಾರರಿಗೆ ಬಿಸಿ ತುಪ್ಪದಂತಾಗಿದೆ.
ಜಿಲ್ಲೆಗೆ ವಿಶೇಷ ಪರಿಗಣನೆಗೆ ಮನವಿ
ಕೊಡಗು ಜಿಲ್ಲೆಯ ವಾತಾವರಣ, ಭೌಗೋಳಿಕ ಪರಿಸ್ಥಿತಿ, ಸಂಸ್ಕøತಿ ಇತ್ಯಾದಿ ವಿಚಾರಗಳನ್ನು ಉಲ್ಲೇಖಿಸಿ ಸಿಕ್ಕಿಂ, ಮೇಘಾಲಯ ಹಾಗೂ ಉತ್ತ್ತರಾಖಂಡ್‍ನ ಕೆಲವು ಜಿಲ್ಲೆಗಳಿಗೆ ವಿಶೇಷ ವಿನಾಯಿತಿ ನೀಡಬೇಕೆಂದು ಹಲವು ಸನ್ನದುದಾರರು ಮನವಿ ಮಾಡಿದ್ದಾರೆ. ಅಲ್ಲಿ ನೀಡಿರುವ ವಿನಾಯಿತಿಯಂತೆ ಕೊಡಗನ್ನು ಪರಿಗಣಿಸುವಂತೆ ಮಾಡಲು ರಾಜ್ಯ ಸರಕಾರದ ಮೂಲಕ ವಿಶೇಷ ಪ್ರಯತ್ನ ನಡೆಸಿ ಸುಪ್ರೀಂ ಕೋರ್ಟ್‍ಗೆ ಮನವರಿಕೆ ಮಾಡಿಕೊಡುವಂತೆ ಕೋರಿ ಗೋಣಿಕೊಪ್ಪಲುವಿನ ಮದ್ಯ ವರ್ತಕ ರಾದ ಕಿಲನ್ ಗಣಪತಿ, ವೀರಜ್, ಸುವಿನ್ ಗಣಪತಿ ಮತ್ತಿತರ ಕೆಲವರು ಶಾಸಕ ಕೆ.ಜಿ. ಬೋಪಯ್ಯ ಅವರ ಸಹಕಾರದೊಂದಿಗೆ ಇತ್ತೀಚೆಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಗಳಿಗೆ ಮನವಿ ಸಲ್ಲಿಸಿದ್ದಾರೆ. ಅಖಿಲ ಕೊಡವ ಸಮಾಜ, ಗೌಡ ಸಮಾಜ, ಜನಪ್ರತಿನಿಧಿಗಳಾದ ಉಸ್ತುವಾರಿ ಸಚಿವ ಸೀತಾರಾಂ, ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಅವರಿಗೂ ಮನವಿ ಸಲ್ಲಿಸಲಾಗಿದ್ದು, ಈ ಪ್ರಯತ್ನಕ್ಕೆ ಸಹಕರಿಸಲು ಕೋರಲಾಗಿದೆ. ಮಾತ್ರವಲ್ಲದೆ ಪ್ರತ್ಯೇಕ ಮನವಿಯನ್ನೂ ಸಲ್ಲಿಸಲಾಗಿದೆ. ರಾಜ್ಯ ಸರಕಾರ ಹಾಗೂ ಮುಖ್ಯ ಕಾರ್ಯ ದರ್ಶಿಗಳ ನಿಲುವು ದೊರೆತ ಬಳಿಕ ಖ್ಯಾತ ವಕೀಲ ಸಜನ್ ಪೂವಯ್ಯ ಅವರ ಮೂಲಕ ಸುಪ್ರೀಂ ಕೋರ್ಟ್ ಮೊರೆಹೋಗುವ ಚಿಂತನೆಯೂ ನಡೆಯುತ್ತಿದೆ ಎಂದು ಕಿಲನ್ ಗಣಪತಿ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ವಾಸ್ತವಾಂಶ ಹಾಗೂ ಸಮಸ್ಯೆಯ ಕುರಿತು ಜಿಲ್ಲಾ ಅಬಕಾರಿ ಆಯುಕ್ತರು ಅಬಕಾರಿ ಇಲಾಖೆಯ ಮುಖ್ಯ ಆಯುಕ್ತರಿಗೆ ಈ ಆದೇಶ ಜಾರಿಗೆ ಮುನ್ನ ಬರೆದಿದ್ದ ಸುದೀರ್ಘ ಪತ್ರದ ವಿಚಾರವನ್ನು ಮನವಿಯ ಮೂಲಕ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ.