ನಾಡಿನ ವಿವಿಧೆಡೆಗಳಲ್ಲಿ ಶ್ರೀ ವಿನಾಯಕನ ವಿಸರ್ಜನೆ ಮಡಿಕೇರಿ: ಭಾದ್ರಪದ ಚೌತಿಯಂದು ನಾಡಿನ ವಿವಿಧೆಡೆಗಳಲ್ಲಿ ಪೂಜೆಗೊಂಡಿದ್ದ ಶ್ರೀ ಗೌರಿ-ಗಣೇಶೋತ್ಸವ ಮೂರ್ತಿಗಳ ವಿಸರ್ಜನೆಯು ಅಲ್ಲಲ್ಲಿ ಜರುಗಿತು. ತಾ. 30 ರಂದು ಜಿಲ್ಲೆಯ 12 ಕಡೆಗಳಲ್ಲಿ ಸಾರ್ವಜನಿಕ ಉತ್ಸವ ಮೂರ್ತಿಗಳ ವಿಸರ್ಜನೆ ಮಳೆ ನಡುವೆಯೂ ನೆರವೇರಿತು.*ಸಿದ್ದಾಪುರ: ಚೆಟ್ಟಳ್ಳಿಯ ವೀರಾಂಜನೆಯ ಯುವಕ ಸಂಘದ ವತಿಯಿಂದ 3ನೇ ವರ್ಷದ ಗೌರಿ-ಗಣೇಶ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾದ ಶ್ರೀ ಗೌರಿ-ಗಣೇಶ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ದು ಪೆರಿಯನ ಪೂಣ್ಣಚ್ಚ ಅವರ ಕೆರೆಯಲ್ಲಿ ವಿಸರ್ಜಿಸಲಾಯಿತು.

ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿಕುಮಾರ್ ಅಲಂಕೃತ ಗೌರಿ-ಗಣೇಶ ಮಂಟಪದ ತೇರಿಗೆ ಈಡುಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ವೀರಾಂಜನೆಯ ಯುವಕ ಸಂಘದ ಅಧ್ಯಕ್ಷ ಬಲ್ಲಾರಂಡ ಕಂಠಿ ಕಾರ್ಯಪ್ಪ, ಕಾರ್ಯದರ್ಶಿ ವಿನೇಶ್ ಉತ್ತಪ್ಪ, ಮಂಜು ಹಾಗೂ ರವಿ ಸೇರಿದಂತೆ ಯುವಕರ ತಂಡ ಹಾಗೂ ಗ್ರಾಮಸ್ಥರು ವಿಜೃಭಣೆಯಿಂದ ಜರುಗಿದ ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಪಾಲ್ಗೊಂಡಿದ್ದರು.

ಸುಂಟಿಕೊಪ್ಪ: ಶಾಂತಗೇರಿ ತೋಟದ ಓಂ ಶಕ್ತಿ ಗಣೇಶ ಸೇವಾ ಸಮಿತಿ ವತಿಯಿಂದ ಗೌರಿ-ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಿ ತೋಟದವರು, ಸುತ್ತಮುತ್ತಲಿನ ಭಾಗದ ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸಿ ವಿರ್ಜಿಸಲಾಯಿತು.

ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ, ವಾದ್ಯಗೋಷ್ಠಿಯೊಂದಿಗೆ ಶೋಭ ಯಾತ್ರೆಯನ್ನು ತೋಟದ ಕಾರ್ಮಿಕರು ಹಾಗೂ ಸುತ್ತ ಮುತ್ತಲಿನ ನಿವಾಸಿಗಳೊಂದಿಗೆ ಮೆರವಣಿಗೆ ನಡೆಸುವ ಮೂಲಕ ತೋಟದ ಕೆರೆಯಲ್ಲಿ ಗೌರಿ-ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.

ಈ ಸಂದರ್ಭ ತೋಟದ ವ್ಯವಸ್ಥಾಪಕ ಜಿ.ಎಂ. ನಂಜಪ್ಪ, ರೈಟರ್ ಕುಮಾರ್, ಓಂ ಶಕ್ತಿ ಗಣೇಶ ಸೇವಾ ಸಮಿತಿಯ ಪದಾಧಿಕಾರಿಗಳಾದ ಅಣ್ಣಾಮಲೈ, ಧನಪಾಲ್, ವಿಜಯ, ಕೃಷ್ಣ, ಕುಮಾರ್, ಗುರುಪ್ರಸಾದ್, ಕಿರಣ್ ಸ್ಥಳೀಯ ಕಾರ್ಮಿಕರು ಇದ್ದರು.

ಆಲೂರು-ಸಿದ್ದಾಪುರ: ಸಮೀಪದ ಕಣಿವೆ ಬಸವನಹಳ್ಳಿಯಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಯನ್ನು ಅದ್ದೂರಿಯಾಗಿ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.

ಸೊಮವಾರ ಬೆಳಗ್ಗಿನಿಂದ ಸಂಜೆಯವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತಗೊಂಡ ವಾಹನದಲ್ಲಿ ಗೌರಿ-ಗಣೇಶ ಮೂರ್ತಿಯನ್ನು ಕುಳ್ಳಿರಿಸಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲ ಗ್ರಾಮದವರು ಸಹ ಮೆರವಣಿಗೆಯಲ್ಲಿ ಶ್ರದ್ಧಾಭಕ್ತಿಯಿಂದ ಸರದಿ ಸಾಲಿನಲ್ಲಿ ಸಾಗಿ ಗ್ರಾಮದ ಕೆರೆಯಲ್ಲಿ ವಿಸರ್ಜಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಪೂಜಾ ವಿಧಿವಿಧಾನಗಳನ್ನು ಅರ್ಚಕರುಗಳಾದ ಹರೀಶ್ ಹಾಗೂ ಪುನಿತ್ ನಿರ್ವಹಿಸಿದರು. ನಂತರ ಸಂಜೆ ಪ್ರಸಾದ ವಿನಿಯೋಗ ನಡೆಯಿತು.

ವೀರಾಜಪೇಟೆ: ಇಲ್ಲಿನ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಾಲಯದ ಗೌರಿ-ಗಣೇಶೋತ್ಸವ ಪ್ರಯುಕ್ತ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜನತಾದಳ ಅಧ್ಯಕ್ಷ ಸಂಕೇತ್ ಪೂವಯ್ಯ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ, ದಂತ ವೈದ್ಯ ಜಿತೇಶ್ ಜೈನ್, ಉಪನ್ಯಾಸಕಿ ವಾಣಿ ಪುಷ್ಪರಾಜ್, ರೋಟರಿ ಕ್ಲಬ್ ಅಧ್ಯಕ್ಷ ಶಾಂತರಾಂ ಕಾಮತ್, ಸಮಿತಿಯ ಉಪಾಧ್ಯಕ್ಷ ಜೆ.ಎನ್. ಪುಷ್ಪರಾಜ್ ಉಪಸ್ಥಿತರಿದ್ದರು.

ಸಮಿತಿಯ ಅಧ್ಯಕ್ಷ ಎನ್.ಜಿ. ಕಾಮತ್ ಸ್ವಾಗತಿಸಿದರು. ನಂತರ ಝೀ ಟಿ.ವಿ. ದೂರದರ್ಶನ ಡ್ಯಾನ್ಸ್ ಡ್ಯಾನ್ಸ್ ಖ್ಯಾತಿಯ ಮೈಸೂರಿನ ಸತೀಶ್ ಸುವರ್ಣ ಅವರಿಂದ “ತಾಂಡವಂ” ವಿನೂತನ ನೃತ್ಯ ಕಾರ್ಯಕ್ರಮ ಜರುಗಿತು. ಎನ್. ನರೇಂದ್ರ ಕಾಮತ್ ವಂದಿಸಿದರು.ಗುಡ್ಡೆಹೊಸೂರು: ಇಲ್ಲಿನ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಿದ 23ನೇ ವರ್ಷದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಲ್ಲಿನ ಯುವಕರು ಪ್ರತಿವರ್ಷವು ಶ್ರದ್ಧಾಭಕ್ತಿಯಿಂದ ಈ ಕಾರ್ಯವನ್ನು ನಡೆಸುತ್ತ ಬಂದಿದ್ದಾರೆ. ಭಾರೀ ಮಳೆಯ ನಡುವೆಯೂ ಮೆರವಣಿಗೆ ಸಾಗಿ ವಾದ್ಯಗೋಷ್ಠಿಯೊಂದಿಗೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಾಗಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.

ಗಾಂಧಿನಗರ: ವೀರಾಜಪೇಟೆಯ ಕರ್ನಾಟಕದ ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಡಾ. ಲಕ್ಷ್ಮಣಸಿಂಗ್ ಪಾಲ್ಗೊಂಡು ಮಾತನಾಡಿದರು.

ವೀರಾಜಪೇಟೆಯ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ 25ನೇ ವರ್ಷದ ಬೆಳ್ಳಿ ಮಹೋತ್ಸವದ ಗಣೇಶೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಮಾತನಾಡಿ, ಸಾರ್ವಜನಿಕವಾಗಿ ಗೌರಿ-ಗಣೇಶೋತ್ಸವ ಆಚರಣೆ ಪರಸ್ಪರ ಅನ್ಯೋನ್ಯತೆ, ಪ್ರೀತಿ ವಾತ್ಸಲ್ಯದ ಸುವ್ಯವಸ್ಥೆಯ ಸಮಾಜಕ್ಕೆ ಕಾರಣವಾಗಲಿದೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಪಟ್ಟಣ ಪಂಚಾಯಿತಿಯ ನಾಮನಿರ್ದೇಶನ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ಇಂತಹ ಉತ್ಸವಗಳು ಪ್ರತಿಯೊಬ್ಬರಲ್ಲಿಯೂ ಪರಸ್ಪರ ಸಹಕಾರ ಶಾಂತಿ ಸೌಹಾರ್ದತೆಗೆ ಸಾಧ್ಯವಾಗಲಿದೆ ಎಂದು ಹೇಳಿದರು.

ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭ ಎ.ವಿ. ಮಂಜುನಾಥ್ ದಂಪತಿಯ ಪುತ್ರಿ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನಿವೇದಿತಾಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಬಿಜೆಪಿ ನಗರ ಸಮಿತಿ ಅಧ್ಯಕ್ಷ ಅಂಜಪರವಂಡ ಅನಿಲ್, ಕಾಫಿ ಬೆಳೆಗಾರರಾದ ಬೊಪ್ಪಂಡ ಜೂನಾ, ಕಾಳೇಂಗಡ ಜೈನ್ ತಿಮ್ಮಯ್ಯ, ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಎಸ್.ಹೆಚ್. ಮೊೈನುದ್ದೀನ್, ಉದ್ಯಮಿಗಳಾದ ಸಿ.ಕೆ. ರಂಜನ್, ಬಿ.ಎಸ್. ಸತೀಶ್. ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ, ಸಮಿತಿಯ ಗೌರವ ಅಧ್ಯಕ್ಷ ರಾಕೇಶ್ ಬಿದ್ದಪ್ಪ, ಮಾಳೇಟಿರ ಕಾಶಿ ಕುಂಞಪ್ಪ ಉಪಸ್ಥಿತರಿದ್ದರು. ಸಮಿತಿಯ ಕೆ.ಕೆ. ಶಶಿಧರ್ ನಿರೂಪಿಸಿದರು. ಕಾರ್ಯಕ್ರಮದ ನಂತರ ಮಂಗಳೂರಿನ ಕಲ್ಕಡದ ಮಾಯಲೋಕ ಶ್ಯಾಮ್ ಜಾದೂಗರ್ ಬಳಗದವರಿಂದ ಜಾದೂ, ಹಾಡು, ಮಿಮಿಕ್ರಿ ನೆರವೇರಿತು.

ಹಾನಗಲ್ಲು ಬಾಣೆ: ಹಾನಗಲ್ಲು ಬಾಣೆಯ ಶ್ರೀ ಗೌರಿ-ಗಣಪತಿ ಸೇವಾ ಸಮಿತಿ ವತಿಯಿಂದ ಅಲ್ಲಿನ ಸಮುದಾಯಭವನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಉತ್ಸವ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಕೆರೆಯಲ್ಲಿ ವಿಸರ್ಜಿಸಲಾಯಿತು.

ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಭಜನೆಯಲ್ಲಿ ನೂರಾರು ಮಂದಿ ಗ್ರಾಮಸ್ಥರು ಭಾಗವಹಿಸಿದ್ದರು. ಸೇವಾ ಸಮಿತಿ ಅಧ್ಯಕ್ಷ ವಿನಯ್, ಕಾರ್ಯದರ್ಶಿ ಗಿರೀಶ್, ಗ್ರಾಮ ಸಮಿತಿ ಅಧ್ಯಕ್ಷ ಶಿವಕುಮಾರ್, ಗೌರವಾಧ್ಯಕ್ಷ ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಾಕತ್ತೂರು: ಹಾಕತ್ತೂರು-ತೊಂಭತ್ತುಮನೆಯ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾದ ಗೌರಿ-ಗಣೇಶ ಮೂರ್ತಿಯ ವಿಸರ್ಜನೆ ನಡೆಯಿತು.

ತೊಂಭತ್ತುಮನೆ ಭಜನಾ ಮಂದಿರದಲ್ಲಿ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯನ್ನು ಐದು ದಿನಗಳ ಕಾಲ ಪೂಜೆ ಸಲ್ಲಿಸಿ ಮಂಗಳವಾರ ವಿಸರ್ಜಿಸಲಾಯಿತು. ಶ್ರೀ ವಿನಾಯಕ ಸೇವಾ ಸಮಿತಿಯಿಂದ ಭಜನಾ ಕಾರ್ಯಕ್ರಮ, ಶ್ರೀ ವಿನಾಯಕ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ನರಸಿಂಹ ಮೂರ್ತಿ ಅವರಿಂದ ಹಿತವಚನ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು. ಸಂಜೆ ಮಹಾಮಂಗಳಾರತಿ ನಂತರ ಗಣೇಶ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಹಾಕತ್ತೂರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಬಳಿಕ ಮುತ್ತಾರುಮುಡಿ ಹೊಳೆಯಲ್ಲಿ ವಿಸರ್ಜಿಸಲಾಯಿತು.