ಗೋಣಿಕೊಪ್ಪಲು,ಆ.29: ಪತ್ರಕರ್ತರಲ್ಲಿ ರಾಷ್ಟ್ರೀಯ ಪ್ರಜ್ಞೆ ಇರಬೇಕು. ಸಂಶೋಧನಾ ಶೀಲ ಹಾಗೂ ಅಧ್ಯಯನ ಶೀಲ ಪ್ರವೃತ್ತಿ ಯನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು ಎಂದು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಇಟ್ಟೀರ ಕೆ.ಬಿದ್ದಪ್ಪ ಅಭಿಪ್ರಾಯಪಟ್ಟರು.

ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ‘ಕಾವೇರಿ ದರ್ಶಿನಿ’ ನಿಯತ ಕಾಲಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪತ್ರಿಕಾ ಮಾಧ್ಯಮವಿಂದು ಕ್ರಾಂತಿಕಾರಿ ಮಾಧ್ಯಮವಾಗಿ ಹೊರಹೊಮ್ಮುತ್ತಿದ್ದು ಶೋಷಿತರ, ದೀನದಲಿತರ ಧ್ವನಿಯಾಗಿ, ಭ್ರಷ್ಟಾಚಾರವನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಸಾಮಾಜಿಕ ಬದ್ಧತೆಯೊಂದಿಗೆ ಹೆಚ್ಚಿನ ಪತ್ರಿಕೆಗಳು ಕಾರ್ಯನಿರ್ವ ಹಿಸುತ್ತಿರುವದು ಶ್ಲಾಘನೀಯ; ವಿದ್ಯಾರ್ಥಿಗಳು ಭಾವೀ ಪತ್ರಿಕೋದ್ಯಮಿ ಗಳಾಗಲು ‘ಕಾವೇರಿ ದರ್ಶಿನಿ’ ಪತ್ರಿಕೆ ಸೃಜನಶೀಲತೆಯೊಂದಿಗೆ ಮೂಡಿ ಬರಲಿ ಎಂದು ಶುಭಹಾರೈಸಿದರು.

ಗೋಣಿಕೊಪ್ಪಲು ಶಕ್ತಿ ವರದಿಗಾರ ಟಿ.ಎಲ್.ಶ್ರೀನಿವಾಸ್ ಅವರು ಇದೇ ಸಂದರ್ಭ ಕಾಲೇಜು ಗ್ರಂಥಾಲಯಕ್ಕೆ ಡಾ. ಪದ್ಮರಾಜ ದಂಡಾವತಿ ಅವರ ‘ಪತ್ರಿಕಾ ಭಾಷೆ’, ಡಾ.ಎ.ಎಸ್. ಬಾಲ ಸುಬ್ರಮಣ್ಯಂ ಅವರ ‘ಎಂ.ಎ. ಜರ್ನಲಿಸಂ ನಂತರ ಮುಂದೇನು?’ ಹಾಗೂ ಕೆ.ಎನ್.ಹರಿಕುಮಾರ್ ಅವರ ‘ನ್ಯಾಯಾಂಗ ನಿಂದನೆ, ಹಕ್ಕು ಬಾಧ್ಯತೆ ಮತ್ತು ಮಾಧ್ಯಮ ಸ್ವಾತಂತ್ರ್ಯ’ ಕುರಿತಾದ ಮೂರು ಪುಸ್ತಕಗಳನ್ನು ಕಾಲೇಜು ಪ್ರಾಂಶುಪಾಲ ಎಸ್.ಎಸ್.ಮಾದಯ್ಯ ಅವರಿಗೆ ಹಸ್ತಾಂತರಿಸಿ ಇದರ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಹೊಂದಲು ಮನವಿ ಮಾಡಿದರು. ಪತ್ರಿಕಾ ಕ್ಷೇತ್ರದಲ್ಲಿನ ಸವಾಲುಗಳು, ಸಾಮಾಜಿಕ ಕಳಕಳಿ, ವರದಿಗಾರಿಕೆಯಲ್ಲಿನ ಸ್ಪಷ್ಟತೆ ಇತ್ಯಾದಿ ವಿಷಯಗಳ ಕುರಿತು ಮಾತನಾಡಿದರು.

ಕೊಡಗು ಧ್ವನಿ ವಾರಪತ್ರಿಕೆಯ ಸಂಪಾದಕ ಹೆಚ್.ಕೆ.ಜಗದೀಶ್ ಅವರು, ಮುಂದಿನ ಕಾವೇರಿ ದರ್ಶಿನಿಯ ಒಂದು ಆವೃತ್ತಿಯ ಮುದ್ರಣದ ಸಂಪೂರ್ಣ ವೆಚ್ಚವನ್ನು ತಾವು ಭರಿಸುವದಾಗಿ ಭರವಸೆ ನೀಡಿದರು. ಪತ್ರಿಕೆಯ ವೆಚ್ಚವನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಲು ಜಾಹಿರಾತನ್ನೂ ಹೊಂದಿಕೊಳ್ಳಲು ಸಲಹೆ ನೀಡಿದರು.

ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ, ಗೋಣಿಕೊಪ್ಪಲು ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಹಾಗೂ ಕಾವೇರಿ ಟೈಮ್ಸ್ ವರದಿಗಾರ ಲೋಹಿತ್ ಭೀಮಯ್ಯ ಅವರು ವಿದ್ಯಾರ್ಥಿಗಳು ಪತ್ರಿಕೋದ್ಯಮದ ಬಗ್ಗೆ ಕೇಳಲಾದ ಪತ್ರಕರ್ತರ ಭದ್ರತೆ, ಅರ್ಹತೆ, ಹಳದಿ ಪತ್ರಿಕೋದ್ಯಮ ಇತ್ಯಾದಿ ವಿಷಯಗಳಿಗೆ ಉತ್ತರ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಎಸ್.ಎಸ್.ಮಾದಯ್ಯ ಅವರು, ವಿದ್ಯಾರ್ಥಿಗಳು ಬರವಣಿಗೆ, ಜ್ಞಾನವನ್ನು ಹೆಚ್ಚಿಸಲು ಕಾವೇರಿ ದರ್ಶಿನಿಯನ್ನು ಹೊರತರಲಾಗಿದೆ. ಇದರ ಸದುಪಯೋಗವಾಗಲಿ. ಪತ್ರಕರ್ತರಾಗಲು ಮೊದಲು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಕಾವೇರಿ ದರ್ಶಿನಿ ಸಂಪಾದಕ ಮಂಡಳಿಯ ಎಸ್.ಆರ್.ತಿರುಮಲಯ್ಯ, ಉಪನ್ಯಾಸಕಿ ಜಸಿಂತಾ ಇದ್ದರು. ಪ್ರಾರ್ಥನೆ ಹೇಮ ಕೆ.ಆರ್., ಆಂಗ್ಲ ವಿಭಾಗದ ಮುಖ್ಯಸ್ಥೆ ಪೂವಮ್ಮ ಎಂ.ಬಿ. ಸ್ವಾಗತ ಹಾಗೂ ತಿರುಮಲಯ್ಯ ವಂದನಾರ್ಪಣೆ ಮಾಡಿದರು.