ಮಡಿಕೇರಿ, ಆ. 29: ಕರ್ನಾಟಕ ಮಾಧ್ಯಮ ಅಕಾಡೆಮಿ ಹಲವು ವರ್ಷಗಳಿಂದ ಮಾಧ್ಯಮ ಕ್ಷೇತ್ರದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಹತ್ತು ಹಲವು ಕಾರ್ಯಕ್ರಮದ ಮೂಲಕ ಕೌಶಲ್ಯಾಭಿವೃದ್ಧಿಗೆ ಶ್ರಮಿಸುತ್ತಿದೆ.
ಸರ್ಕಾರದಿಂದ ಪುನಾರಚಿತಗೊಂಡಿರುವ ಸಮಿತಿ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಅಕಾಡೆಮಿಗೆ ಹೊಸ ಸ್ವರೂಪ ನೀಡುವ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ. ಆ ದಿಸೆಯಲ್ಲಿ ಮಾಧ್ಯಮ ಕಚೇರಿಗಳ ಸಹಕಾರವನ್ನು ಪಡೆದು ಪತ್ರಕರ್ತರ ಕೌಶಲ್ಯಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳುವದು ಅಕಾಡೆಮಿ ರೂಪಿಸಿರುವ ಹೊಸ ಯೋಜನೆಯಾಗಿದೆ. ಪತ್ರಿಕೋದ್ಯಮ ಪದವಿ ಮುಗಿಸಿ ಹೊರ ಬರುವ ಅಭ್ಯರ್ಥಿಗಳಿಗೆ ಮಾಧ್ಯಮ ಕಚೇರಿಯ ಎಲ್ಲಾ ವಿಭಾಗಗಳ ತರಬೇತಿಯನ್ನು ಕೊಡಿಸುವ ಮೂಲಕ ತರಬೇತಿ ಹೊಂದಿದ ಪತ್ರಕರ್ತರಾಗುವಂತೆ ಸಿದ್ಧಪಡಿಸುವದು ಅಕಾಡೆಮಿಯ ಉದ್ದೇಶವಾಗಿದೆ.
ಪ್ರಸಕ್ತ ವರ್ಷದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿಯಲ್ಲಿ 5 ಮಂದಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರರಿಗೆ ಹಾಗೂ ಇತರ ವರ್ಗಗಳ 5 ಮಂದಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರರಿಗೆ (ಒಟ್ಟು 10 ಅಭ್ಯರ್ಥಿಗಳಿಗೆ) ಪ್ರಮುಖ ದಿನಪತ್ರಿಕೆ, ಎಲೆಕ್ಟ್ರಾನಿಕ್ ಮಾಧ್ಯಮಗಳ ಕಚೇರಿಯಲ್ಲಿ ತರಬೇತಿ ಕೊಡಿಸಲು ಉದ್ದೇಶಿಸಲಾಗಿದೆ. ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 10 ತಿಂಗಳ ಕಾಲ ಮಾಸಿಕ ತಲಾ ರೂ. 10 ಸಾವಿರಗಳ ಗೌರವ ಧನವನ್ನು ನೀಡಲಾಗು ವದು. ಕರ್ನಾಟಕದ ಯಾವದೇ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಂವಹನ ಪದವಿಯಲ್ಲಿ ಅತೀ ಹೆಚ್ಚು ಅಂಕಗಳಿಸಿರುವ 28 ವರ್ಷ ಒಳಗಿನ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಸ್ವವಿವರ, ವಿದ್ಯಾರ್ಹತೆ ಪತ್ರಗಳು, ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಛಾಯಾಚಿತ್ರಗಳನ್ನು ಸ್ಕ್ಯಾನ್ ಮಾಡಿ ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆ ಣಡಿಚಿiಟಿeeಞmಚಿ@gmಚಿiಟ.ಛಿom ಮೂಲಕ ಅಥವಾ ಅಂಚೆ ಮೂಲಕ ತಾ. 31 ರೊಳಗೆ ಕಳುಹಿಸಲು ಕೋರಿದೆ. ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವದು. ಈ ಹಿಂದೆ ಅರ್ಜಿ ಸಲ್ಲಿಸಲ್ಪಟ್ಟವರು ಪುನಃ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ. ಸಿದ್ದರಾಜು ತಿಳಿಸಿದ್ದಾರೆ.