ಮಡಿಕೇರಿ, ಆ. 29: ಯಾವದೇ ಬೆಳೆಗಳಿಗೆ ಬೇಕಾಗಿರುವ ಅಗತ್ಯ ಪೋಷಕಾಂಶಗಳನ್ನು ಹೆಚ್ಚಾಗಿ ರಾಸಾಯನಿಕ ಗೊಬ್ಬರಗಳ ಮೂಲಕ ಪೂರೈಸುವದರಿಂದ ಮಣ್ಣಿನ ಆರೋಗ್ಯ ಕೆಡುವದರ ಜೊತೆಗೆ ಅದರ ಫಲವತ್ತತೆ ಮತ್ತು ಉತ್ಪಾದಕತೆ ಕಡಿಮೆಯಾಗುತ್ತಾ ಬರುತ್ತದೆ. ಇದು ಬಹಳ ಕಾಲದವರೆಗೆ ಮುಂದುವರಿದರೆ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಮಟ್ಟ ಇಳಿಮುಖವಾಗಿ ಮುಂದೆ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಕಾಫಿ ಮಂಡಳಿ ಸಲಹೆ ನೀಡಿದೆ. ರಸ ಗೊಬ್ಬರಗಳ ಬೆಲೆ ಅಧಿಕವಾಗಿರುವ ಕಾರಣ ಗ್ರಾಮೀಣ ಭಾಗದಲ್ಲಿ ಸಿಗುವ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಮತ್ತು ಜೈವಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸಿಕೊಂಡು ಸಮತೋಲನ ರಾಸಾಯನಿಕ ಗೊಬ್ಬರಗಳನ್ನು ಭೂಮಿಯ ಫಲವತ್ತತೆಗೆ ತಕ್ಕಂತೆ ನೀಡಬೇಕು. ಸಮಗ್ರ ಪೋಷಕಾಂಶಗಳ ನಿರ್ವಹಣೆ ಕಡೆ ಗಮನ ಹರಿಸಬೇಕು.
ಸಾವಯವ, ರಾಸಾಯನಿಕ ಮತ್ತು ಜೈವಿಕ ಗೊಬ್ಬರ ಬಳಸುವದರ ಮೂಲಕ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ ಸುಸ್ಥಿರ ಅಧಿಕ ಬೆಳೆ ಪಡೆಯಬೇಕಾಗಿದೆ. ಭಾರತ ದೇಶದಲ್ಲಿ ಕಾಫಿ ಬೆಳೆಯನ್ನು ಹೆಚ್ಚಾಗಿ ನೆರಳಿನಡಿಯಲ್ಲಿ ಬೆಳೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲ ಬೆಳೆಗಾರರು ಹೆಚ್ಚಿನ ಇಳುವರಿ ಪಡೆಯಲು ನೆರಳನ್ನು ಕಡಿತಗೊಳಿಸುತ್ತಿದ್ದಾರೆ. ಅಂತಹ ಭೂಮಿ ಬಹಳ ಬೇಗ ತನ್ನ ಫಲವತ್ತತೆ ಕಳೆದುಕೊಂಡು ಉತ್ಪಾದಕತೆ ಕುಂಠಿತಗೊಳ್ಳುತ್ತದೆ.
ಬೆಳೆಗಾರರು ಇದರ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳುವದು ಒಳ್ಳೆಯದು ಎಂದು ಕಾಫಿ ಮಂಡಳಿ ಉಪ ನಿರ್ದೇಶಕರು ತಿಳಿಸಿದ್ದಾರೆ. ಒಂದು ಕೆ.ಜಿ. ರೋಬಸ್ಟ ಕಾಫಿ ಬೆಳೆಯಲು 2.6 ಗ್ರಾಂ ಸಾರಜನಕ, 0.046 ಗ್ರಾಂ ರಂಜಕ ಹಾಗೂ 3.0 ಗ್ರಾಂ ಪೊಟ್ಯಾಷಿಯಂನ ಅವಶ್ಯಕತೆ ಇದೆ. ರಸ ಗೊಬ್ಬರಗಳ ಅತ್ಯುತ್ತಮ ಸದ್ಬಳಕೆಗಾಗಿ ಪ್ರತಿಯೊಬ್ಬ ಬೆಳೆಗಾರರೂ ತಮ್ಮ ತೋಟಗಳ ಮಣ್ಣಿನ ಪರೀಕ್ಷೆ ಮಾಡಿಸಿ, ಶಿಫಾರಸಿನಂತೆ ಗೊಬ್ಬರಗಳ ಬಳಕೆ ಮಾಡಬೇಕು. ರೋಬಸ್ಟಾ ಕಾಫಿಯಲ್ಲಿ ಎಕರೆಗೆ 800 ಕೆ.ಜಿ. ಶುದ್ಧ ಕಾಫಿ, ಪಡೆಯಲು 100 ಕೆ.ಜಿ. ಸಾರಜನಕ, 75 ಕೆ.ಜಿ. ರಂಜಕ ಹಾಗೂ 100 ಕೆ.ಜಿ. ಪೊಟ್ಯಾಷಿಯಂ ಅವಶ್ಯಕತೆ ಇರುತ್ತದೆ. ಈ ಪ್ರಮಾಣಕ್ಕೆ ಸರಿದೂಗುವ ರಸ ಗೊಬ್ಬರಗಳನ್ನು ಮೂರು ಭಾಗಗಳಲ್ಲಿ ಮಳೆಗಾಲಕ್ಕೆ ಮುಂಚೆ, ಮಳೆಗಾಲದ ಬಿಡುವಿನಲ್ಲಿ ಹಾಗೂ ಮಳೆಗಾಲದ ನಂತರ ನೀಡಬೇಕು. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದೆರಡು ದಿನ ಮಳೆ ಬಿಡುವಿದ್ದಾಗ, 1 ಎಕರೆಗೆ ಒಂದು ಮೂಟೆ ಯೂರಿಯಾವನ್ನು ಕೊಡುವದರಿಂದ ಗಿಡಗಳಲ್ಲಿ ಕ್ರಿಯಾಶೀಲತೆ ತರುವದರ ಮೂಲಕ ಕಾಯಿ ಉದುರುವದನ್ನು ತಡೆಗಟ್ಟಿ ಹೊಸದಾಗಿ ಚಿಗುರು ಬರಲು ಸಹಕಾರಿಯಾಗುತ್ತದೆ.
ಈ ರೀತಿ ಹಂತ ಹಂತವಾಗಿ ಗೊಬ್ಬರ ನೀಡುವದರಿಂದ, ಗೊಬ್ಬರ ನೀರಿನಲ್ಲಿ ಬಸಿದು ಹೋಗುವದನ್ನು, ಆವಿಯಾಗಿ ಪೋಲಾಗುವದನ್ನು ತಡೆಗಟ್ಟುವದರ ಜೊತೆಗೆ ಗಿಡಗಳಲ್ಲಿನ ಗೊಬ್ಬರ ಬಳಕೆ ಪ್ರಮಾಣ ಹೆಚ್ಚಿಸುತ್ತದೆ.
ಅಲ್ಲದೆ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳನ್ನು ಕಾಪಾಡುತ್ತದೆ. ಗೊಬ್ಬರದ ಪ್ರಮಾಣ ನಿರ್ಧರಿಸಲು ಹಾಗೂ ಗೊಬ್ಬರ ಹಾಕುವ ವಿಧಾನದ ಬಗ್ಗೆ ತಿಳಿದುಕೊಳ್ಳಲು ಸಮೀಪದ ಕಾಫಿ ಮಂಡಳಿಯ ಕಚೇರಿ ಸಂಪರ್ಕಿಸುವಂತೆ ವೀರಾಜಪೇಟೆ ಕಾಫಿ ಮಂಡಳಿ ಉಪ ನಿರ್ದೇಶಕರು ತಿಳಿಸಿದ್ದಾರೆ.