ಕುಶಾಲನಗರ, ಆ. 30: ವಚನಗಳ ಸಾರ ಅರಿತಲ್ಲಿ ಸುಂದರ ಸಮಾಜ ಸೃಷ್ಟಿಸಲು ಸಾಧ್ಯ. ಜಾತಿ ಸಮಾಜದ ಬದಲು ಪ್ರೀತಿಯ ಸಮಾಜ ನಿರ್ಮಾಣವಾಗಬೇಕಿದೆ. ಶರಣರ ಚಿಂತನೆಗಳ ಅರಿವನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವದು ಸಂಘ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠ ಶ್ರೀ ಸದಾಶಿವ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಸ್ಥಳೀಯ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆದ ಪರಿಷತ್‍ನ ಸಂಸ್ಥಾಪಕ ಡಾ.ಶ್ರೀ ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಚನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಚನ ಸಾಹಿತ್ಯದಿಂದ ಮಾನವ ಸಮಾಜ ಕಾಣಲು ಸಾಧ್ಯ. ಹೊಸ ಚಿಂತನೆಗಳತ್ತ ಗಮನಹರಿಸಬೇಕಾಗಿದೆ. ಪ್ರತಿಯೊಬ್ಬರಿಗೂ ಶಿಕ್ಷಣ ಕಲ್ಪಿಸುವದು ಶರಣ ಸಾಹಿತ್ಯದ ಉದ್ದೇಶವಾಗಿದೆ. ಇತರರನ್ನು ತನ್ನಂತೆ ಕಾಣುವದು ಎಲ್ಲರ ಕರ್ತವ್ಯವಾಗಿದೆ ಎಂದ ಸ್ವಾಮೀಜಿಗಳು, ಕ್ರಾಂತಿಯ ಮೂಲಗಳಾದ ವಚನಗಳ ಬಗ್ಗೆ ಸಾಮಾನ್ಯ ಜನತೆಗೆ ಅರಿವು ಮೂಡುವಂತಾಗಬೇಕೆಂದರು.

ವಚನ ಸಾಹಿತ್ಯದ ವರ್ತಮಾನದ ಪ್ರಸ್ತುತತೆ ಬಗ್ಗೆ ಉಪನ್ಯಾಸಕ ಬಿ.ಪ್ರಕಾಶ್, ವಚನ ಸಾಹಿತ್ಯದಲ್ಲಿರುವ ಸಮಾನತೆಯ ಆಶಯಗಳ ಬಗ್ಗೆ ನಿವೃತ್ತ ಪ್ರಾಂಶುಪಾಲೆ ಡಾ.ಶಾಂತಲಕ್ಷ್ಮಿ ಮತ್ತು ಸಬಲಂ ಭೋಜಣ್ಣ ರೆಡ್ಡಿ ಉಪನ್ಯಾಸ ನೀಡಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಟಿ.ಆರ್.ಶರವಣಕುಮಾರ್, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಚನ ಸಾಹಿತ್ಯದ ತಿರುಳನ್ನು ನಾಡಿನೆಲ್ಲೆಡೆ ಪಸರಿಸುವ ಕಾರ್ಯವಾಗಬೇಕೆಂದರು.

ಶರಣ ಸಾಹಿತ್ಯ ಪರಿಷತ್ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪಿ.ಮಹದೇವಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ, ವಚನ ಸಾಹಿತ್ಯದ ಉದ್ದೇಶ, ಹಿನ್ನೆಲೆ ಬಗ್ಗೆ ಮಾಹಿತಿ ನೀಡಿದರು. ಪರಿಷತ್ ಜಿಲ್ಲಾಧ್ಯಕ್ಷ ಎಸ್.ಮಹೇಶ್ ಮಾತನಾಡಿ, ವಚನ ದಿನವನ್ನು ಮುಂದಿನ ದಿನಗಳಲ್ಲಿ ಸರಕಾರದ ಮೂಲಕ ಅರ್ಥಗರ್ಭಿತವಾಗಿ ಆಚರಿಸಲು ಮುಂದಾಗಬೇಕೆಂದು ಮನವಿ ಮಾಡಿದರು. ಮಹಿಳಾ ಸಂಘಗಳ ಸದಸ್ಯರಿಂದ ವಚನ ಗೀತೆ, ಶಿವ ಸ್ತುತಿ, ನೃತ್ಯ, ಕೋಲಾಟ, ವಚನ ರೂಪಕಗಳು ನಡೆದವು. ಕಾರ್ಯಕ್ರಮದಲ್ಲಿ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಕುಮುದಾ ಧರ್ಮಪ್ಪ, ಮಂಜುಳಾ, ಮಾಜಿ ಸದಸ್ಯರಾದ ಡಿ.ಬಿ.ಧರ್ಮಪ್ಪ, ಪಟ್ಟಣ ಪಂಚಾಯಿತಿ ಸದಸ್ಯ ಹೆಚ್.ಎಂ.ಮಧುಸೂದನ್, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್.ಚಂದ್ರಮೋಹನ್, ವೀರಶೈವ ಸಮಾಜದ ಅಧ್ಯಕ್ಷ ಎಂ.ಎಸ್.ಶಿವಾನಂದ, ಶೋಭಾ ಅಕ್ಕನ ಬಳಗದ ಅಧ್ಯಕ್ಷೆ ವಿಜಯ ಪಾಲಾಕ್ಷ, ಪ್ರಗತಿಪರ ಕೃಷಿಕ ನಾಗರಾಜು ಇದ್ದರು.

ಕಾರ್ಯಕ್ರಮದಲ್ಲಿ ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಹೆಚ್.ವಿ.ಶಿವಪ್ಪ, ಶನಿವಾರಸಂತೆಯ ಹಾಲಪ್ಪ, ನಾಕೂರು ಶಿರಂಗಾಲದ ಧರ್ಮಪ್ಪ ಅವರುಗಳನ್ನು ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜಯಂತಿ ಯುವರಾಜ್ ಪ್ರಾರ್ಥಿಸಿದರು, ಟಿ.ವಿ.ಶೈಲಾ ಸ್ವಾಗತಿಸಿದರು, ಡಿ.ಎಂ.ಮಹಾದೇವಿ ಮತ್ತು ಸೌಭಾಗ್ಯ ಕಾರ್ಯಕ್ರಮ ನಿರೂಪಿಸಿದರು, ಸಾಹಿತ್ಯ ಪರಿಷತ್ ಕಾರ್ಯದರ್ಶಿ ಉದಯ್ ವಂದಿಸಿದರು.