ಸಿದ್ದಾಪುರ, ಆ. 29: ಕಾಡಾನೆಗಳೆರೆಡು ವಾಸದ ಮನೆಯ ಮೇಲೆ ಧಾಳಿ ನಡೆಸಿ ಹಾನಿ ಗೊಳಿಸಿರುವ ಘಟನೆ ಗುಹ್ಯ ಗ್ರಾಮದಲ್ಲಿ ನಡೆದಿದೆ.ಗುಹ್ಯ ಗ್ರಾಮದ ಎ.ಟಿ. ಕಾರ್ಯಪ್ಪ ಎಂಬವರಿಗೆ ಸೇರಿದ ಗುಹ್ಯ ಎಸ್ಟೇಟ್ ತೋಟದ ಲೈನ್ ಮನೆಯ ಮುಂಬಾಗಕ್ಕೆ ನಿನ್ನೆ ರಾತ್ರಿ ಎರಡು ಕಾಡಾನೆಗಳು ಬಂದಿವೆ. ಲೈನ್ ಮನೆಯಲ್ಲಿ ವಾಸವಾಗಿದ್ದ ಸುಜಾತ ಹಾಗೂ ಆಕೆಯ ಇಬ್ಬರು ಮಕ್ಕಳು ಕಾಡಾನೆಗಳು ಘೀಳಿಡುತ್ತಿದ್ದ ಶಬ್ದವನ್ನು ಕೇಳಿ ಭಯಭೀತರಾಗಿದ್ದಾರೆ. ಕಾಡಾನೆಗಳೆರೆಡು ಮನೆಯ ಅಂಗಳಕ್ಕೆ ಬಂದಿದ್ದು, ಮನೆÀಯಲ್ಲಿದ್ದ ನಾಯಿಯು ಕಾಡಾನೆಗಳನ್ನು ಕಂಡು ಬೊಗಳಿದೆ. ಇದರಿಂದ ಆಕ್ರೋಶಗೊಂಡ ಕಾಡಾನೆಯು ನಾಯಿಯ ಬಳಿ ತೆರಳಿ, ಘೀಳಿಟ್ಟಿದೆ. ಮನೆಯ ಮುಂಭಾಗದ ಮೆಟ್ಟಿಲುಗಳನ್ನು ಕಾಲಿನಿಂದ ತುಳಿದು ಧ್ವಂಸಗೊಳಿಸಿದ್ದು, ಬಳಿಕ ಹಿಂಭಾಗಕ್ಕೆ ತೆರಳಿ ಹಿಂಭಾಗದ ಬಾಗಿಲಿನ ಮೂಲಕ ಮನೆಯ ಒಳನುಗ್ಗಲು ಯತ್ನಿಸಿವೆ. ಹಿಂಭಾಗದ ಕೋಣೆಯಲ್ಲಿದ್ದ ಪಾತ್ರೆಗಳನ್ನು ಕಾಲಿನಿಂದ ತುಳಿವೆ. ಈ ಸಂದರ್ಭ ಮನೆಯ ಹೆಂಚು ಭಾಗಶಃ ಹಾನಿಗೊಳಗಾಗಿದ್ದು, ಮನೆಯಲ್ಲಿದ್ದ ಸುಜಾತ ಹಾಗೂ ಮಕ್ಕಳು ಕಿರುಚಾಡಿದ್ದಾರೆ. ಬಳಿಕ ಕಾಡಾನೆಗಳು ಪಕ್ಕದಲ್ಲೇ ಇದ್ದ

(ಮೊದಲ ಪುಟದಿಂದ) ಬಾಳೆಗಿಡಗಳನ್ನು ತಿಂದು ನಾಶ ಮಾಡಿವೆ. ಅದೃಷ್ಟªಶಾತ್ ಸುಜಾತ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಯದಿಂದ ರಾತ್ರಿ ಪೂರ್ತಿ ನಿದ್ದೆಗೆಡುವಂತಾಗಿತ್ತು.

ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ದೇವಯ್ಯ ಹಾಗೂ ಆರ್.ಆರ್.ಟಿ ತಂಡ ಭೇಟಿ ನೀಡಿ ಪರಿಶೀಲಿಸಿತು. ಸ್ಥಳಕ್ಕೆ ಸಿದ್ದಾಪುರ ಗ್ರಾ.ಪಂ. ಸದಸ್ಯ ರೆಜಿತ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಗುಹ್ಯ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ನಿರಂತರವಾಗಿ ದಾಂದಲೆ ನಡೆಸುತ್ತಿದ್ದು, ಕಾಫಿ ತೋಟಗಳಲ್ಲಿ ಬೀಡುಬಿಟ್ಟಿವೆ. ಕಾಡಾನೆಗಳನ್ನು ಕೂಡಲೇ ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ಚಿತ್ರ ವರದಿ: ಎ.ಎನ್ ವಾಸು