ಗೋಣಿಕೊಪ್ಪಲು, ಆ. 29: ಹೊಸೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಹೊಸೂರು ಗ್ರಾಮ ಪಂಚಾಯಿತಿ ಹಾಗೂ ವೀರಾಜಪೇಟೆ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅಲ್ಲಿನ ಶ್ರೀ ಮಹಾದೇವರ ದೇವಸ್ಥಾನ ಆವರಣ ದಲ್ಲಿ ಇತ್ತೀಚೆಗೆ ವನ ಮಹೋತ್ಸವವನ್ನು ಆಚರಿಸಲಾಯಿತು.

ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೋಂಡ ವಿಜು ಸುಬ್ರಮಣಿ ಮಾತನಾಡಿದರು.

ಮಳೆಯ ಮಾರುತಕ್ಕೆ ಮೋಡಗಳು ಅಗತ್ಯ. ಪರಿಸರ ಸಮತೋಲನದಿಂದ ಮಾತ್ರ ಮಳೆಯಾಗಲು ಸಾಧ್ಯ. ಇದೀಗ ಮಳೆಗಾಲದಲ್ಲಿಯೇ ಕುಡಿಯುವ ನೀರಿಗೆ ಬರ ಬಂದಿದೆ. ಭವಿಷ್ಯದಲ್ಲಿ ಆಮ್ಲಜನಕದ ಕೊರತೆಯನ್ನೂ ನಾವು ಎದುರಿಸಬೇಕಾಗಬಹುದು. ಮಾನವನ ಸುಖ ಶಾಂತಿ ಸಮೃದ್ಧಿಗೆ ಮರ-ಗಿಡ ಗಳೂ ಅಗತ್ಯ ಈ ನಿಟ್ಟಿನಲ್ಲಿ ದೇವಸ್ಥಾನದ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದು ವಿಜು ಸುಬ್ರಮಣಿ ಹೇಳಿದರು.

ವೀರಾಜಪೇಟೆ ವಲಯಾರಣ್ಯಾಧಿ ಕಾರಿ ಗೋಪಾಲ್ ಮಾತನಾಡಿ, ಸುಮಾರು 75 ವಿವಿಧ ಪ್ರಬೇಧದ ಸಸಿಗಳನ್ನು ಅರಣ್ಯ ಇಲಾಖೆ ನೀಡುತ್ತಿದೆ. ಇದರ ನಿರ್ವಹಣೆ ಅಗತ್ಯ. ಆನೆ-ಮಾನವ ಸಂಘರ್ಷ ಹತ್ತಿಕ್ಕಲು, ಪರಿಹಾರ ಕಲ್ಪಿಸಲು ಇಲಾಖೆ ಶ್ರಮಿಸುತ್ತಿದೆ. ರ್ಯಾಪಿಡ್ ರೆಸ್ಪಾನ್ಸ್ ತಂಡಕ್ಕೆ ಗ್ರಾಮಸ್ಥರ ಸಹಕಾರವೂ ಅಗತ್ಯ ಎಂದು ಹೇಳಿದರು. ಗ್ರಾ.ಪಂ.ಅಧ್ಯಕ್ಷ ಗೋಪಿ ಚಿಣ್ಣಪ್ಪ ವನಮಹೋತ್ಸವ ಒಣ ಮಹೋತ್ಸವ ಆಗಬಾರದು. ದಿನಂಪ್ರತಿ ಗಿಡಕ್ಕೆ ನೀರು ಹಾಕುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ, ಪಾಲಿಬೆಟ್ಟ ಗ್ರಾ.ಪಂ. ಮಾಜಿ ಅಧ್ಯಕ್ಷ ಕುಟ್ಟಂಡ ವಸಂತ್, ರ್ಯಾಪಿಡ್ ರೆಸ್ಪಾನ್ಸ್ ತಂಡದ ಕೆ.ಎಂ. ದೇವಯ್ಯ ಮತ್ತು 8 ಮಂದಿ ಸಿಬ್ಬಂದಿ, ದೇವಸ್ಥಾನ ಸಮಿತಿ ಪ್ರಮುಖರಾದ ಮೊಳ್ಳೇರ ಸುಭಾಶ್, ಧರ್ಮಸ್ಥಳ ಸಂಘದ ಜಯಪ್ರಕಾಶ್, ಮೋಣಪ್ಪ, ಸಿ.ಪಿ. ಡಾಲಿ, ದುಗ್ಗಪ್ಪ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಗಣ್ಯರು ದೇವಸ್ಥಾನ ಆವರಣದಲ್ಲಿ ಸಸಿನೆಟ್ಟರು.