ಶ್ರೀಮಂಗಲ, ಆ. 29: ಮಕ್ಕಳನ್ನು ಮೊಬೈಲ್ ಸಂಸ್ಕøತಿಯಿಂದ ದೂರವಿರಿಸಿ ಉತ್ತಮ ಪುಸ್ತಕಗಳನ್ನು ಓದುವಂತೆ ಮಾಡಿದರೆ ಉತ್ತಮ ಸಂಸ್ಕಾರವಂತರಾಗಿ ಬಾಳುವದರಲ್ಲಿ ಯಾವದೆ ಸಂಶಯವಿಲ್ಲ ಎಂದು ಪುಸ್ತಕ ಪ್ರಕಟಣೆಯ ಪ್ರಾಯೋಜಕರು ಹಾಗೂ ವಕೀಲರಾದ ದೇಯಂಡ ಜಯರಾಮ್ ಅಭಿಪ್ರಾಯ ವ್ಯಕ್ತಪಡಿಸಿದರು.
‘ಕೊಡವ ತಕ್ಕ್ ಎಳ್ತ್ಕಾರಡ ಕೂಟ’ ಹಾಗೂ ‘ಪೇರ್ಮಾಡ್ ಕೃಷಿಕ ಒಕ್ಕೂಟ’ ಕುಮಟೂರ್, ಬಾಡಗ ಜಂಟಿ ಆಶ್ರಯದಲ್ಲಿ ಪೇರ್ಮಾಡ್ ಕೃಷಿಕ ಒಕ್ಕೂಟ ಸಭಾಂಗಣದಲ್ಲಿ ನಡೆದ ‘ಕೂಟ’ದ ‘ಜನಪ್ರಿಯ ಕೊಡವ ಸಾಹಿತ್ಯ ಮಾಲೆ’ ಯೋಜನೆಯ 147ನೇ ಹೆಜ್ಜೆಯ ಲೇಖಕಿ ಕೋಟ್ರಂಗಡ ಸಜನಿ ಸೋಮಯ್ಯ ಬರೆದ ‘ಅದೃಷ್ಟ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಉತ್ತಮ ವಿದ್ಯಾಭ್ಯಾಸ ನೀಡುವದರ ಜೊತೆಗೆ ಮಕ್ಕಳಿಗೆ ಮಾತೃಭಾಷೆಯಾದ ಕೊಡವ ಬಾಷೆ, ಕೊಡವ ಸಾಹಿತ್ಯ, ಕಲೆ, ಸಂಸ್ಕøತಿಯಲ್ಲಿ ಹೆಚ್ಚಿನ ಅಭಿಮಾನ ಹಾಗೂ ಅಭಿರುಚಿ ಮೂಡುವಂತೆ ಪೋಷಕರು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ‘ಕೂಟ’ದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ, ಒಂದು ಜನಾಂಗದ ಮೂಲ ಬೇರು ಭಾಷೆ ಅಳಿದರೆ ಆ ಜನಾಂಗದ ಸಾಹಿತ್ಯ, ಕಲೆ, ಸಂಸ್ಕøತಿ, ಜನಪದಗಳೊಂದಿಗೆ ಇಡೀ ಜನಾಂಗವೇ ನಾಶವಾಗಿ ಹೋಗುತ್ತದೆ. ಆದ್ದರಿಂದ ಕೊಡವ ಭಾಷೆಯನ್ನು ಎಲ್ಲರೂ ಮಾತ ನಾಡುವದು, ಸಾಹಿತ್ಯ ಸೃಷ್ಟಿಸುವದು, ಎಲ್ಲಾ ಪತ್ರ ವ್ಯವಹಾರ, ಮೊಬೈಲ್ ಸಂದೇಶಗಳು ಸೇರಿದಂತೆ ಎಲ್ಲಾ ವ್ಯವಹಾರಗಳನ್ನು ಕೊಡವ ಭಾಷೆಯಲ್ಲೆ ಮಾಡುವದರಿಂದ ಕೊಡವ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದರು. ಇದರೊಂದಿಗೆ, ಕೊಡವ ಸಾಹಿತ್ಯ ಕಲೆ ಸಂಸ್ಕøತಿ ಬೆಳೆಯುತ್ತದೆ. ಭಾರತ ಸಂವಿಧಾನದ 8ನೇ ಪರಿಚ್ಛೇಧಕ್ಕೆ ಕೊಡವ ಭಾಷೆಯನ್ನು ಸೇರಿಸುವದು, ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ವನ್ನು ರಾಷ್ಟ್ರೀಯ ಮಟ್ಟದಲ್ಲಿ ಪಡೆದುಕೊಳ್ಳುವದರೊಂದಿಗೆ ಕೊಡವ ಭಾಷೆಗೆ ಶಾಸ್ತ್ರೀಯ ಮಾನ್ಯತೆ ಸಿಗುವಂತೆ ಮಾಡುವ ಸಲುವಾಗಿ ‘ಕೊಡವ ತಕ್ಕ್ ಎಳ್ತ್ಕಾರಡ ಕೂಟ’ ತನ್ನ ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯಲ್ಲಿ ಪ್ರತಿ ತಿಂಗಳು ಒಂದೊಂದು ನೂತನ ಪುಸ್ತಕ ಬಿಡುಗಡೆ ಮಾಡುತ್ತಿದ್ದು, ಇದೀಗ 147ನೇ ಹೆಜ್ಜೆಯ ಪುಸ್ತಕವನ್ನು ಬಿಡುಗಡೆಗೊಳಿಸಿದೆ. ಸಾಹಿತ್ಯಾಭಿಮಾನಿ ಗಳು ಇನ್ನು ಹೆಚ್ಚಿನ ಸಾಹಿತ್ಯ ಹೊರತರಲು ಸಹಕರಿಸಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ‘ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕøತಿಯಲ್ಲಿ ಮಕ್ಕಳಿಗೆ ಅಭಿಮಾನ ಮೂಡಿಸುವಲ್ಲಿ ಪೋಷಕರ ಜವಾಬ್ದಾರಿ’ ಈ ವಿಷಯ ದಲ್ಲಿ ಶ್ರೀಮಂಗಲ ಜೂನಿಯರ್ ಕಾಲೇಜು ಉಪನ್ಯಾಸಕರಾದ ಮುಲ್ಲೇಂಗಡ ಸುಧಿ ಸೋಮಯ್ಯ ಪ್ರಬಂಧ ಮಂಡಿಸಿದರು.
ಪುಸ್ತಕ ಪ್ರಕಟಣೆ ಪ್ರಾಯೋಜಕ ದೇಯಂಡ ವಿಶು ತಿಮ್ಮಯ್ಯ, ಕೂಟದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ‘ಪೇರ್ಮಾಡ್ ಕೃಷಿಕ ಒಕ್ಕೂಟ’ದ ಅಧ್ಯಕ್ಷ ಪೆಮ್ಮಣಮಾಡ ರಮೇಶ್ ಮಾತನಾಡಿ, ಕೊಡವ ಸಂಸ್ಕøತಿಗೆ ಒತ್ತು ನೀಡುತ್ತಾ ಕೊಡವ ಭಾಷೆ, ಸಂಸ್ಕøತಿಯ ಬೆಳವಣಿಗೆಗೆ ಎಲ್ಲರೂ ಪಣತೊಡೋಣ. ನಮ್ಮ ಸಂಸ್ಥೆಯು ಎಲ್ಲಾ ರೀತಿಯ ಕೊಡವ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು.
ಪೇರ್ಮಾಡ್ ಕೃಷಿಕ ಒಕ್ಕೂಟದ ಪದಾಧಿಕಾರಿ ಕೋಟ್ರಂಗಡ ನರೇಶ್, ಕೇಚಮಾಡ ವಾಸು ಉತ್ತಪ್ಪ ಮಾತನಾಡಿದರು.
ಪೆಮ್ಮಣಮಾಡ ಪವಿತ ರಮೇಶ್ ಪ್ರಾರ್ಥಿಸಿ, ಕೋಟ್ರಂಗಡ ಸುಬ್ರಮಣಿ ಸ್ವಾಗತಿಸಿ, ‘ಕೂಟ’ದ ಉಪಾಧ್ಯಕ್ಷೆ ಕೊಟ್ಟಂಗಡ ಅಮ್ಮಕ್ಕಿ ಪೂವಯ್ಯ ಪುಸ್ತಕ ಪ್ರಾಯೋಜಕರು ಹಾಗೂ ಲೇಖಕಿಯ ಪರಿಚಯ ಮಾಡಿದರು. ನಿರ್ದೇಶಕ ಬೊಜ್ಜಂಗಡ ನಿತಿನ್ ನಂಜಪ್ಪ ಸಾಂಸ್ಕøತಿಕ ಪೈಪೋಟಿ ನಡೆಸಿದರು. ಕಾಳಿಮಾಡ ಮೋಟಯ್ಯ ನಿರೂಪಿಸಿ, ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ವಂದಿಸಿದರು.