ಸೋಮವಾರಪೇಟೆ,ಆ.30: ಸರ್ಕಾರ ನೀಡುವ ಆಹಾರ ವಿದ್ಯಾರ್ಥಿಗಳಿಗೆ ತಲುಪಬೇಕು. ಅದರಲ್ಲಿ ಮೋಸ ಮಾಡುವ ಪ್ರಯತ್ನಕ್ಕೆ ಕೈಹಾಕಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವದು ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಎಚ್ಚರಿಸಿದರು.

ನಗರದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯದಲ್ಲಿ ಆಯೋಜಿಸಲಾಗಿದ್ದ ಪೋಷಕರ ಸಭೆಯಲ್ಲಿ ಅವರು ಈ ಬಗ್ಗೆ ಎಚ್ಚರಿಕೆ ನೀಡಿದರು.

ವಿದ್ಯಾರ್ಥಿ ನಿಲಯದಲ್ಲಿ ಶುಚಿ ರುಚಿಯಾದ, ಗುಣಮಟ್ಟದ ಆಹಾರ ನೀಡಬೇಕು. ಬಿಸಿ ನೀರಿನ ಸೌಲಭ್ಯ ಒದಗಿಸಬೇಕು ಎಂದು ವಿದ್ಯಾರ್ಥಿಗಳು ಬೇಡಿಕೆ ಮುಂದಿಟ್ಟರು. ವಿದ್ಯಾರ್ಥಿನಿ ಯರಿಗೆ ದಿನಂಪ್ರತಿ ನೀಡುವ ಆಹಾರ ಪಟ್ಟಿಯನ್ನು ಸೂಚನಾಫಲಕದಲ್ಲಿ ಹಾಕಬೇಕು. ಬಿಸಿನೀರು ಸೌಲಭ್ಯ ಕಲ್ಪಿಸಬೇಕು. ರೂ. 8.20ಲಕ್ಷಗಳಲ್ಲಿ ವಸತಿ ನಿಲಯಕ್ಕೆ ಸಾಮಗ್ರಿಗಳನ್ನು ಖರೀದಿಸಲು ಇಲಾಖೆಯಲ್ಲಿ ಹಣವಿದ್ದು, ಅವಶ್ಯವಿರುವ ಸಾಮಗ್ರಿ ಗಳನ್ನು ಕೂಡಲೆ ಖರೀದಿಸಬೇಕು ಎಂದು ಎಂ.ಬಿ. ಅಭಿಮನ್ಯು ಕುಮಾರ್ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

ಈಗಾಗಲೇ ಚೌಡ್ಲು ಗ್ರಾ.ಪಂ. ಹಾಗೂ ಪ.ಪಂ.ಯಿಂದ ವಸತಿ ನಿಲಯಕ್ಕೆ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ಒಂದು ವಾರದ ಒಳಗೆ ಗ್ಲೀಸರ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವದು. ಇದರೊಂದಿಗೆ ವಿದ್ಯಾರ್ಥಿನಿಯರ ಬೇಡಿಕೆಗಳನ್ನು ಈಡೇರಿಸಲಾಗುವದು ಎಂದು ಬಿಸಿಎಂ ವಿಸ್ತರಣಾಧಿಕಾರಿ ಸ್ವಾಮಿ ಭರವಸೆ ನೀಡಿದರು.

ವಿದ್ಯಾರ್ಥಿನಿಯರ ಹಿತದೃಷ್ಟಿ ಯಿಂದ ಪ್ರತಿದಿನ ವಸತಿ ಗೃಹದಲ್ಲೇ ವಾರ್ಡನ್ ವಾಸ್ತವ್ಯ ಹೂಡಬೇಕು. ಅನುಮತಿಯಿಲ್ಲದೆ ವಿದ್ಯಾರ್ಥಿನಿ ಯರನ್ನು ಹೊರಗೆ ಕಳುಹಿಸಬಾರದು. ಸಂಜೆ ಸಮಯದಲ್ಲಿ ವಸತಿ ನಿಲಯದ ಸಮೀಪ ಪುಂಡರು ಕೀಟಲೆ ಮಾಡು ತ್ತಾರೆ ಎಂಬ ದೂರಿದ್ದು, ಅಧಿಕಾರಿಗಳು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಜಿಪಂ ಸದಸ್ಯೆ ಪೂರ್ಣಿಮಾ ಗೋಪಾಲ್ ಹೇಳಿದರು.

ತಾ.ಪಂ. ಸದಸ್ಯೆ ಎಚ್.ಎನ್. ತಂಗಮ್ಮ ಮಾತನಾಡಿ, ವಿದ್ಯಾರ್ಥಿನಿ ಯರು ಸ್ವಚ್ಛತೆ ಕಡೆ ಗಮನಹರಿಸಬೇಕು. ನೀರಿನ ಮಿತಬಳಕೆ ಮಾಡಬೇಕು. ಸಮಸ್ಯೆಯಿದ್ದರೆ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂದರು. ಕಾರ್ಯ ಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ. 92 ಅಂಕ ಪಡೆದ ಹಾಸ್ಟೇಲ್ ವಿದ್ಯಾರ್ಥಿನಿ ರೋಶ್ನಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಾರ್ಡನ್ ರಮಾವತಿ, ಜೂನಿಯರ್ ಕಾಲೇಜು ಪ್ರಾಂಶುಪಾಲೆ ತಿಲೋತ್ತಮೆ ಉಪಸ್ಥಿತರಿದ್ದರು. ಸಭೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.