ಸಿದ್ದಾಪುರ, ಆ. 29: ಮಾನವ ಸಂಪತ್ತು ಶ್ರೇಷ್ಠ ಸಂಪತ್ತು ಎಂದು ಮಾಜಿ ತಾ.ಪಂ. ಅಧ್ಯಕ್ಷ ವಿ.ಕೆ. ಲೋಕೇಶ್ ಅಭಿಪ್ರಾಯಪಟ್ಟರು.

ಕರಡಿಗೋಡುವಿನ ಇವಾಲ್ವ್ ಬ್ಯಾಕ್ ರೆಸಾರ್ಟ್ ದತ್ತು ಪಡೆದು ಕೊಂಡಿರುವ ಕರಡಿಗೋಡು ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರೆಸಾರ್ಟ್ ವತಿಯಿಂದ ಪುಸ್ತಕ ಹಾಗೂ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವದಲ್ಲಿ ಮಾನವ ಸಂಪತ್ತು ಶ್ರೇಷ್ಠವಾಗಿದ್ದು, ಶಿಕ್ಷಣದಿಂದಾಗಿ ಇತರ ಪ್ರಾಣಿಗಳಿಂದ ಮಾನವ ಶ್ರೇಷ್ಠನಾಗಿ ದ್ದಾನೆ. ಸರಕಾರವು ಶಿಕ್ಷಣದ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಯೋಜನೆಯನ್ನು ತಂದಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡ ಬೇಕೆಂದು ಕಿವಿಮಾತು ಹೇಳಿದರು. ಸಂಸ್ಥೆಯು ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಎಲ್ಲಾ ಸೌಕರ್ಯವನ್ನು ಬಡ ಮಕ್ಕಳಿಗೆ ಉಚಿತವಾಗಿ ನೀಡುತ್ತಿರುವದು ಶ್ಲಾಘನೀಯ ಎಂದರು.

ಇವಾಲ್ವ್ ಬ್ಯಾಕ್ ರೆಸಾರ್ಟ್‍ನ ಪ್ರಧಾನ ವ್ಯವಸ್ಥಾಪಕಿ ಕಾಂತಿ ಅನೀಶ್ ಮಾತನಾಡಿ, ಸಂಸ್ಥೆಯು ಕರಡಿ ಗೋಡು ಪ್ರಾಥಮಿಕ ಶಾಲೆಯನ್ನು ಕಳೆದ 5 ವರ್ಷದಿಂದ ದತ್ತು ತೆಗೆದು ಕೊಂಡಿದ್ದು, ಮೂಲಭೂತ ಸೌಕರ್ಯ ಸೇರಿದಂತೆ ಹಲವಾರು ಸೌಕರ್ಯವನ್ನು ಶಾಲೆಗೆ ಒದಗಿಸಿ ಕೊಡಲಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಆಂಗ್ಲ ಕಲಿಸುವ ಉದ್ದೇಶದಿಂದ ರೆಸಾರ್ಟ್‍ನ ವತಿಯಿಂದ ಆಂಗ್ಲ ಶಿಕ್ಷಕಿಯನ್ನು ನೇಮಿಸಲಾಗಿದೆ. ಮುಂದಿನ ವರ್ಷ ಕರಡಿಗೋಡು ಗ್ರಾಮದಲ್ಲಿ ಆ ಭಾಗದ ಮಕ್ಕಳಿಗೆ ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ತರಗತಿ ಯನ್ನು ಸಂಸ್ಥೆಯ ವತಿಯಿಂದ ಉಚಿತ ವಾಗಿ ಆರಂಭಿಸಲಾಗುವದು ಎಂದರು. ಸಂಪನ್ಮೂಲ ವ್ಯಕ್ತಿ ಕರುಂಬಯ್ಯ ಮಾತನಾಡಿದರು. ಶಾಲಾಭಿವೃದ್ಧಿ ಅಧ್ಯಕ್ಷ ಚಂದ್ರ, ಗ್ರಾ.ಪಂ. ಸದಸ್ಯರಾದ ಪೂವಮ್ಮ, ಶೀಲಾ, ಸಮಾಜ ಸೇವಕ ಜೋಸೆಫ್ ಶ್ಯಾಂ, ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು. ಮುಖ್ಯ ಶಿಕ್ಷಕಿ ಮೋಳಿ ಸ್ವಾಗತಿಸಿ, ಶಿಕ್ಷಕಿ ರುಕ್ಮಿಣಿ ನಿರೂಪಿಸಿ, ವಾರ್ಷಿಕ ವರದಿಯನ್ನು ಶಿವಕುಮಾರ್ ವಾಚಿಸಿದರು.