ಸೋಮವಾರಪೇಟೆ / ಶನಿವಾರಸಂತೆ, ಆ. 29: 12ನೇ ಶತಮಾನದಲ್ಲಿ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದ ವಚನ ಸಾಹಿತ್ಯಗಳೇ ಸಂವಿಧಾನ ರಚನೆಗೆ ಮೂಲ. ವಚನ ಸಾಹಿತ್ಯಗಳು ದೇಶದ ಅಭಿವೃದ್ಧಿಗೂ ಪೂರಕವಾಗಿದ್ದು, ಎಲ್ಲರೂ ಇವುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ರೇಷ್ಮೆ ಮತ್ತು ಪಶುಸಂಗೋಪನಾ ಇಲಾಖಾ ಸಚಿವ ಎ. ಮಂಜು ಕರೆ ನೀಡಿದರು.ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ ಕೊಡ್ಲಿಪೇಟೆಯ ಕಿರಿಕೊಡ್ಲಿ ಶಾಲಾ ಆವರಣದಲ್ಲಿರುವ ಭದ್ರಮ್ಮ ಮಹಾಂತಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶರಣ ಸಾಹಿತ್ಯ ಪರಿಷತ್‍ನ ಸಂಸ್ಥಾಪನಾ ದಿನ ಮತ್ತು ಡಾ. ಶ್ರೀ ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಪ್ರಯುಕ್ತ ವಚನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶರಣ ಶ್ರೇಷ್ಠರಾದ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಸುಧಾರಣೆಯ ಕ್ರಾಂತಿ ಮಾಡಿದರು. ಜೀವನದ ಮೌಲ್ಯಗಳನ್ನು ತಿಳಿಸುವ ತತ್ವಗಳನ್ನು ಸಮಾಜಕ್ಕೆ ನೀಡಿದರು. ಇಂತಹ ಮಹನೀಯರ ಸಂದೇಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವ ಜನಾಂಗಕ್ಕೆ ವಚನಗಳ ಸಾರವನ್ನು ತಿಳಿಸಿ ಆ ಮಾರ್ಗದಲ್ಲಿ ನಡೆಯುವಂತೆ ಮನವರಿಕೆ ಮಾಡಬೇಕು ಎಂದು ಎ. ಮಂಜು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಬಸವಣ್ಣನವರ ಅನುಭವ ಮಂಟಪವೇ ಜಗತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಮೊದಲ ಹೆಜ್ಜೆ ಎಂದು ಬಣ್ಣಿಸಿದರಲ್ಲದೇ, ಕಾಯಕವೇ ಕೈಲಾಸ, ದಯೆಯೇ ಧರ್ಮದ ಮೂಲ ಎಂಬಂತಹ ವಚನಗಳ ಮೂಲಕ ಜೀವನದ ಸಾರವನ್ನು ವಿಶ್ವಕ್ಕೇ ಸಾರಿದ ಮಹಾನ್ ದಾರ್ಶನಿಕರ ಮಾತುಗಳು ಸಾರ್ವಕಾಲಿಕವಾಗಿದ್ದು, ಎಲ್ಲರೂ ಸಮಬಾಳು-ಸಮಪಾಲು ಸಿದ್ಧಾಂತಕ್ಕೆ ಪೂರಕವಾಗಿ ಜೀವನ ಸಾಗಿಸಬೇಕು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠದ ಮಠಾಧೀಶರಾದ ಸದಾಶಿವ ಸ್ವಾಮೀಜಿ ಮಾತನಾಡಿ, ಶರಣರ ಚಿಂತನೆಗಳನ್ನು ಜನಸಾಮಾನ್ಯರಲ್ಲಿ ಬಿತ್ತುವ ಕಾರ್ಯ ಆಗಬೇಕು. ಶರಣರು ಜಾತಿಯ ವಿಷಬೀಜವನ್ನು ಬಿತ್ತದೆ ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು.

ಆದರೀಗ ಜಾತಿಗಳಿಗೆ ಹೊಡೆದಾಟ, ಹೋರಾಟ ನಡೆಯುತ್ತಿದೆ ಎಂದು ವಿಷಾದಿಸಿದರು.

(ಮೊದಲ ಪುಟದಿಂದ) ಶರಣರು ಜಾತಿಯ ಬದಲಿಗೆ ಪ್ರೀತಿಯ ಸಮಾಜವನ್ನು ಕಟ್ಟಿದರು. ಮಾನವ ಧರ್ಮದ ಚಿಂತನೆಯನ್ನು ಸಮಾಜಕ್ಕೆ ತಿಳಿಸಿಕೊಟ್ಟರು ಎಂದ ಸ್ವಾಮೀಜಿ, ಮಠಮಾನ್ಯಗಳು ಅಸಂಖ್ಯಾತ ವಿದ್ಯಾಸಂಸ್ಥೆಗಳನ್ನು ನಿರ್ಮಿಸಿ, ಸಮಾಜಕ್ಕೆ ಅಕ್ಷರಸ್ಥರನ್ನು ಧಾರೆ ಎರೆಯುತ್ತಿವೆ. ಮಠಗಳು ಇಂತಹ ಕಾರ್ಯಕ್ಕೆ ಇಳಿಯದಿದ್ದರೆ ಇಂದು ಸಾಕ್ಷರತೆಯ ಪ್ರಮಾಣ ಏರಿಕೆಯಾಗುತ್ತಿರಲಿಲ್ಲ ಎಂದರು.

ಅತಿಥಿಯಾಗಿದ್ದ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಇಂದು ಧರ್ಮಗಳೂ ಸಹ ಕವಲು ದಾರಿಯಲ್ಲಿದ್ದು, ಧರ್ಮದೊಂದಿಗೆ ಆಧ್ಯಾತ್ಮ ಬೆರೆಯದೇ ಇರುವದು ಇದಕ್ಕೆ ಕಾರಣ. ಭಗವಂತನನ್ನು ಪಡೆಯುವ ಹಕ್ಕು ಎಲ್ಲರಿಗೂ ಇದ್ದು, ಪ್ರತಿಯೊಬ್ಬರಿಗೂ ಆಧ್ಯಾತ್ಮ ಕಲೆಯ ಚಿಂತನೆ ಮೂಡಿಸಬೇಕು. ನಶಿಸುತ್ತಿರುವ ಆಧ್ಯಾತ್ಮಿಕತೆಯನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟÀರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ವಿಜ್ಞಾನ ಬೆಳೆಯುವ ಮೊದಲೇ ವೈಜ್ಞಾನಿಕತೆ ದೇಶದಲ್ಲಿತ್ತು. ಎಲ್ಲರೂ ವೈಜ್ಞಾನಿಕ ಮನೋಭಾ ವವನ್ನು ಬೆಳೆಸಿಕೊಳ್ಳಬೇಕು. ಸ್ವಾಮೀಜಿ ಗಳು ಸಮಾಜಕ್ಕೆ ದಾರಿದೀಪ ವಾಗಬೇಕು. ಮೌಢ್ಯತೆಯನ್ನು ಹೋಗಲಾಡಿಸಿ ಮನುಷ್ಯತ್ವಕ್ಕೆ ಬೆಲೆ ನೀಡುವ ಸಮಾಜ ನಿರ್ಮಾಣ ವಾಗಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಕಲ್ಲುಮಠದ ಮಹಾಂತ ಸ್ವಾಮೀಜಿ, ವಿರಕ್ತ ಮಠದ ವಿಶ್ವೇಶ್ವರ ಸ್ವಾಮೀಜಿ,ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಸಿ.ಎಲ್ ಧರ್ಮ, ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ಕಾಫಿ ಬೆಳೆಗಾರ ಎ.ಪಿ. ಶಂಕರಪ್ಪ, ವೀರಶೈವ ಮಹಾಸಭಾದ ಸಿ.ವಿ. ವಿಶ್ವನಾಥ್, ಸುರೇಶ್, ಯತೀಶ್, ಶಿಲ್ಪಿ ವರಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯೋಜಿತ ವಚನ ಗಾಯನ ಕಾರ್ಯಕ್ರಮ ಸಭಿಕರ ಕಿವಿಗಳನ್ನು ಇಂಪಾಗಿಸಿತು. ಮೈಸೂರಿನ ಗಾಯಕ ರಾದ ಶುಭಾ ರಾಘವೇಂದ್ರ ಮತ್ತು ತಂಡದವರು ವಚನಗಳನ್ನು ತಮ್ಮ ಅದ್ಭುತ ಕಂಠಸಿರಿಯೊಂದಿಗೆ ಪ್ರಸ್ತುತ ಪಡಿಸಿದರು. ಕುಶಾಲನಗರದ ಭರತನಾಟ್ಯ ಕಲಾವಿದೆ ಮಂಜು ಭಾರ್ಗವಿ ಅವರಿಂದ ಮೂಡಿಬಂದ ಭರತ ನಾಟ್ಯ ಎಲ್ಲರ ಗಮನ ಸೆಳೆಯಿತು.