ಸೋಮವಾರಪೇಟೆ, ಆ.29 : ಸಂವಿಧಾನ ರಚನೆಗೆ 12ನೇ ಶತಮಾನದಲ್ಲಿನ ವಚನ ಸಾಹಿತ್ಯ ಮೂಲ ಮೆಟ್ಟಿಲು ಎಂದು ಹೇಳಿ ಕೊಳ್ಳುವ ದೇಶದಲ್ಲಿ, ಸಂವಿಧಾನದಲ್ಲಿನ ವಚನ ಸಾರವನ್ನು ಇಂದಿಗೂ ಆಚರಣೆಗೆ ತರದೇ ಇರುವದು ದುರಂತ ಎಂದು ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೋ. ಪಿ.ಎಲ್. ಧರ್ಮ ವಿಷಾದಿಸಿದರು.

ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕದ ವತಿಯಿಂದ ತಾಲೂಕಿನ ಕಿರಿಕೊಡ್ಲಿ ಶಾಲಾ ಆವರಣದಲ್ಲಿರುವ ಭದ್ರಮ್ಮ ಮಹಾಂತಪ್ಪ ಸಭಾಂಗಣದಲ್ಲಿ ವಚನ ದಿನದ ಅಂಗವಾಗಿ ಆಯೋಜಿಸಿದ್ದ ಯಜಮಾನ್ ಪುಟ್ಟಪ್ಪ ಚನ್ನವೀರಮ್ಮ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರಳತೆಯೇ ವಚನ ಸಾಹಿತ್ಯದ ಬಲ. ವಚನ ಸಾಹಿತ್ಯಗಳು ಜನರ ಬದುಕಿನೊಂದಿಗೆ ಹಾಸು ಹೊಕ್ಕಾಗಿ ದೆಯೇ ಹೊರತು ಹಿಂಬಾಲಕರನ್ನು ಸೃಷ್ಟಿಸಿಲ್ಲ. ಇಂತಹ ಸಿದ್ದಾಂತಗಳಿಗೆ ಕಾಲಮಿತಿಯನ್ನು ನಿಗದಿಗೊಳಿಸಲೂ ಸಾಧ್ಯವಿಲ್ಲ. ವಚನ ಸಾಹಿತ್ಯ ನಿರಂತರವಾಗಿದ್ದು ಮನುಕುಲದ ಒಳಿತಿಗೆ ಅವುಗಳನ್ನು ನಾವುಗಳು ಅಂತರ್ಗತ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಮಠಾಧೀಶರಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ವರ್ಗ, ಜಾತಿ, ವರ್ಣರಹಿತ ಸಮಾಜದ ಪರಿಕಲ್ಪನೆಯಿಂದ ಅನುಭವ ಮಂಟಪವನ್ನು ರಚಿಸಿ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುಂದಾದವರು ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ವಹಿಸಿದ್ದರು. ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಕಲ್ಲುಮಠದ ಮಹಾಂತ ಸ್ವಾಮೀಜಿ, ವಿರಕ್ತ ಮಠದ ವಿಶ್ವೇಶ್ವರ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ಮನೆಹಳ್ಳಿ ಮಠದ ಶಿವಲಿಂಗ ಸ್ವಾಮೀಜಿ, ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಅನಂತಶಯನ, ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಕುಟ್ಟಪ್ಪ, ಕಾಫಿ ಬೆಳೆಗಾರ ಎ.ಪಿ. ಶಂಕರಪ್ಪ, ವೀರಶೈವ ಮಹಾಸಭಾದ ಸಿ.ವಿ. ವಿಶ್ವನಾಥ್, ಸುರೇಶ್, ಯತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.