ಮಡಿಕೇರಿ, ಆ. 29: ಬಕ್ರೀದ್ ಎಂಬ ಈದುಲ್ ಆಝ್‍ಹಾ ಮುಸ್ಲಿಮರ ಸಂಭಮೋಲ್ಲಾಸ ಹಬ್ಬವಾದರೂ ಆಚರಣೆಯಲ್ಲಿ ಧರ್ಮದ ಚೌಕಟ್ಟನ್ನು ಮೀರಕೂಡದು ಎಂದು ಮಡಿಕೇರಿಯ ಬದ್ರಿಯಾ ಮಸೀದಿಯ ಧರ್ಮಗುರು ಅಬೂಸುಫಿಯಾನ್ ಹೆಚ್.ಐ. ಇಬ್ರಾಹಿಂ ಮದನಿ ಸಮುದಾಯ ಬಾಂಧವರಿಗೆ ಕಿವಿಮಾತು ಹೇಳಿದರು.ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಮಡಿಕೇರಿಯ ಕಾವೇರಿ ಮಿನಿ ಹಾಲ್‍ನಲ್ಲಿ ಇಂದು ನಡೆದ ಬಕ್ರೀದ್ ಆಚರಣೆ ಹೇಗೆ ಏನು ಎಂಬ ವಿಚಾರವಾಗಿ ಅವರು ಉಪನ್ಯಾಸ ನೀಡಿದರು.ಪೂರ್ವ ಪ್ರವಾದಿ ಇಬ್ರಾಹಿಂ ಹಾಗೂ ಅವರ ಪುತ್ರ ಇಸ್ಮಾಯಿಲ್‍ರವರ ತ್ಯಾಗ ಬಲಿದಾನಗಳ ಹಬ್ಬವೇ ಬಕ್ರೀದ್ ಆಗಿದ್ದು, ಭಗವಂತನೊಂದಿಗೆ ಕಾಡಿ ಬೇಡಿ ದೊರೆತ ಕಣ್ಮಣಿ ಪುತ್ರ ಇಸ್ಮಾಯಿಲ್ ಎಂಬ ಬಾಲಕನನ್ನು ದೈವಾಜ್ಞೆಗನುಸಾರವಾಗಿ ಬಲಿ ಅರ್ಪಿಸಲು ಮುಂದಾದ ಪ್ರವಾದಿ ಇಬ್ರಾಹಿಂ ಅವರು ಪರೀಕ್ಷೆಯಲ್ಲಿ ವಿಜಯಿಯಾದ ಸುದಿನವೇ ಬಕ್ರೀದ್ ಎಂದು ಅಬೂಸುಫಿಯಾನ್ ಹೇಳಿದರು.

ಪುತ್ರ ಮರಳಿ ದೊರೆತ ಸಂತೋಷಾರ್ಥ ದೈವಾಜ್ಞೆಯಂತೆ ಆಡನ್ನು ಅಲ್ಲಾಹನಿಗೆ ಬಲಿ ಅರ್ಪಿಸಿದುದರ ಧ್ಯೋತಕವಾಗಿ ಬಕ್ರೀದ್‍ನಂದು ಎಲ್ಲ ಮುಸ್ಲಿಂ ಬಾಂಧವರು ತಮ್ಮ ಶಕ್ತ್ಯಾನುಸಾರ ಆಡುಗಳನ್ನು ಕುಯ್ದು ಬಡಬಗ್ಗರಿಗೆ, ಬಂಧುಮಿತ್ರರಿಗೆ, ನೆರೆಯವರಿಗೆ ಹಂಚುವದು ಪುಣ್ಯ ಕಾರ್ಯವೆಂದ ಇಬ್ರಾಹಿಂ ಮದನಿ ಹಬ್ಬದ ಮುನ್ನಾ ದಿನ ‘ಅರಫಾ’ ಎಂಬ ವಿಶೇಷ ದಿನವಾದುದರಿಂದ ಅಂದು ಕೈಗೊಳ್ಳುವ ವ್ರತಾಚರಣೆ ಬಹಳ ಮಹತ್ವಪೂರ್ಣವಾದುದು ಎಂದರು.

ಬಕ್ರೀದ್‍ನ ಸಂದರ್ಭ ಮುಸ್ಲಿಮರ ಪುಣ್ಯಸ್ಥಳ ಪವಿತ್ರ ಮಕ್ಕಾದಲ್ಲಿ ವಿಶ್ವದ ಲಕ್ಷಾಂತರ ಭಕ್ತಾಭಿಮಾನಿಗಳು ನೆರೆಯುತ್ತಾರೆ. ಹಣ ಆರೋಗ್ಯ ಇರುವ ಪ್ರತಿಯೋರ್ವ ಮುಸ್ಲಿಮನು ಕಡ್ಡಾಯವಾಗಿ ಪವಿತ್ರ ಹಜ್ ಕರ್ಮ ನಿರ್ವಹಿಸಬೇಕಾಗುತ್ತದೆ. ಭಕ್ತಿಯಿಂದ ಹಜ್ ನಿರ್ವಹಿಸಿದಾತನ ಎಲ್ಲ ಪಾಪಗಳು ಪರಿಹರಿಸಲ್ಪಡಲಿವೆ ಎಂದು ಅವರು ಹೇಳಿದರು.

ಹಬ್ಬದ ಸಂದರ್ಭ ವಿಕಲಚೇತನರಿಗೆ, ವಿಧವೆÀಯರಿಗೆ ಹಾಗೂ ಕಡು ಬಡವರಿಗೆ ಆರ್ಥಿಕ ನೆರವನ್ನು ನೀಡಿದಲ್ಲಿ ಹೆಚ್ಚಿನ ಪುಣ್ಯ ಲಭ್ಯವೆಂದು ದಾನದ ಮಹತ್ವವನ್ನು ವಿವರಿಸಿದರು.

(ಮೊದಲ ಪುಟದಿಂದ)

ಜಮಾಅತ್ ಆಶ್ರಯದಲ್ಲಿ ಮಹಿಳಾ ಕಾಲೇಜು

ಮಡಿಕೇರಿ ಬದ್ರಿಯಾ ಜಮಾಅತ್‍ನ ಅಧೀನದಲ್ಲಿ ಸಮುದಾಯದ ಮಹಿಳೆಯರಿಗೆ ಅನುಕೂಲವಾಗುವಂತೆ ಅರಬಿ ಕಾಲೇಜು ಶಿಕ್ಷಣ ಪ್ರಾರಂಭಿಸಲಾಗಿದ್ದು, ಅರ್ಹ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಬೂಸುಫಿಯಾನ್ ವಿನಂತಿಸಿಕೊಂಡರು.

ಕಾರ್ಯಕ್ರಮದಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು. ಅಲ್ ಅಮೀನ್ ಸಂಸ್ಥೆಯ ಅಧ್ಯಕ್ಷ ಎಫ್.ಎ. ಮೊಹಮದ್ ಹಾಜಿ, ಕೋಶಾಧಿಕಾರಿ ಲತೀಫ್ ಹಾಜಿ ಮುಂತಾದವರು ಉಪಸ್ಥಿತರಿದ್ದರು. ಸಮಿತಿಯ ಪದಾಧಿಕಾರಿ ಎಂ.ಇ. ಮಹಮದ್ ವಂದಿಸಿದರು.