ನಾಪೋಕ್ಲು, ಆ. 31: ಎಸ್‍ಡಿಪಿಐ ವತಿಯಿಂದ ಇಲ್ಲಿನ ಮಾರುಕಟ್ಟೆ ಮೈದಾನದಲ್ಲಿ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ ಅಭಿಯಾನ ನಡೆಯಿತು. ಸಭೆಯಲ್ಲಿ ಎಸ್‍ಡಿಪಿಐ ಜಿಲ್ಲಾ ಅಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ಗೋವು ಪವಿತ್ರ ಎನ್ನುವ ಬಿಜೆಪಿ ಮತ್ತು ಸಂಘಪರಿವಾರ ಕೇರಳದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದರೆ ಗುಣಮಟ್ಟದ ಗೋಮಾಂಸ ವ್ಯವಸ್ಥೆ ಕಲ್ಪಿಸುವದಾಗಿ ಭಾಷಣ ಮಾಡುತ್ತಾರೆ.

ಗೋವಾದಲ್ಲಿ ಗೋಮಾಂಸ ಕೊರತೆಯಾದರೆ ಕರ್ನಾಟಕದಿಂದ ಆಮದು ಮಾಡಲಿದೆ ಎಂದು ಗೋವಾ ಮುಖ್ಯಮಂತ್ರಿ ಬಹಿರಂಗವಾಗಿ ಹೇಳಿಕೆಯನ್ನು ಕೊಡುತ್ತಾರೆ. ಉತ್ತರಪ್ರದೇಶದಲ್ಲಿ ಬಿಜೆಪಿ ಶಾಸಕರು ಸೇರಿದಂತೆ ಅನೇಕರು ಅರಬಿ ಹೆಸರಿನಲ್ಲಿ ಗೋಮಾಂಸ ರಫ್ತು ಸಂಸ್ಥೆಗಳನ್ನು ನಡೆಸುತ್ತಿದ್ದು, ಇದರಿಂದ ಕೋಟಿಗಟ್ಟಲೆ ಲಾಭ ಗಳಿಸುತ್ತಿದೆ ಎಂದು ಆರೋಪಿಸಿದರು. ಗೋ ರಕ್ಷಕರಿಗೆ ನೈಜ ಗೋ ಪ್ರೇಮ ಇದ್ದರೆ ಉತ್ತರ ಪ್ರದೇಶದಲ್ಲಿರುವ ಕಂಪನಿಗಳ ಮೇಲೆ ಧಾಳಿ ನಡೆಸಲಿ ಎಂದು ಸವಾಲು ಹಾಕಿದರು. ಗುಂಪು ಹಿಂಸಾ ಹತ್ಯೆಯ ವಿರುದ್ಧ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರೂ ಹೋರಾಟ ಮಾಡಬೇಕೆಂದು ಕರೆ ನೀಡಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಮಾತನಾಡಿ, ಗೋವಿನ ಹೆಸರಿನಲ್ಲಿ ಭಾವನಾತ್ಮಕವಾಗಿ ಹಿಂದೂ ಮತ್ತು ಮುಸಲ್ಮಾನರನ್ನು ವಿಭಜಿಸುವ ರಾಜಕೀಯ ಷಡ್ಯಂತ್ರವನ್ನು ಬಿಜೆಪಿ ಮತ್ತು ಪರಿವಾರ ರೂಪಿಸುತ್ತಿದೆ. ಕರ್ನಾಟಕದಲ್ಲಿ ಇನ್ನು ಮುಂದೆ ಗೋವಿನ ಹೆಸರಿನಲ್ಲಿ ಯಾರಾದರು ಧಾಳಿ ಮಾಡಲು ಮುಂದಾದರೆ ಎಸ್‍ಡಿಪಿಐ ಕಾರ್ಯಕರ್ತರು ಸಾಂವಿಧಾನಿಕವಾಗಿ ತಡೆಯಲಿದೆ ಎಂದರು.

ಈ ಸಂದರ್ಭ ನಾಪೋಕ್ಲು ಭಾಗದ 15 ಯುವಕರು ಎಸ್‍ಡಿಪಿಐ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷದ ದಕ್ಷಿಣ ಕನ್ನಡ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಕೇರಳ ರಾಜ್ಯದ ಜಲೀಲ್ ಸಖಾಫಿ, ನಸೀರ್ ಮುಸ್ಲಿಯಾರ್, ಪಿಎಫ್‍ಐ ಜಿಲ್ಲಾಧ್ಯಕ್ಷ ಹ್ಯಾರಿಸ್, ವಕೀಲ ಅಬೂಬಕ್ಕರ್ ಮಾತನಾಡಿದರು. ಸಭೆಯಲ್ಲಿ ಪಕ್ಷದ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಕಾರ್ಯದರ್ಶಿ ಬಶೀರ್, ಮಡಿಕೇರಿ ನಗರಸಭಾ ಸದಸ್ಯ ಮನ್ಸೂರ್, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶೌಕತ್ ಅಲಿ, ಕೊಳಕೇರಿ ಘಟಕದ ಅಧ್ಯಕ್ಷ ಅಶ್ರಫ್, ಇಬ್ರಾಹೀಂ ಕೊಟ್ಟಮುಡಿ ಸೇರಿದಂತೆ ಮತ್ತಿತರರು ಇದ್ದರು.