ಮಡಿಕೇರಿ, ಆ. 31: ಮೀನುಗಾರಿಕೆ ಹಾಗೂ ಮೀನು ಕೃಷಿಯಲ್ಲಿ ತೊಡಗಿರುವ ರೈತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ರೈತರು ಮೀನು ಕೃಷಿಯನ್ನು ಒಂದು ಉಪ ಕಸುಬಾಗಿ ಕೈಗೊಳ್ಳುತ್ತಿದ್ದು, 2013-14 ರಿಂದ 2016-17 ವರೆಗೆ ಒಟ್ಟು 160.72 ಲಕ್ಷದವರೆಗೆ ಮೀನು ಮರಿಗಳನ್ನು ಕೃಷಿಕರಿಗೆ ಸರ್ಕಾರ ನಿಗದಿಪಡಿಸಿದ ದರಗಳಲ್ಲಿ ಸರಬರಾಜು ಮಾಡಲಾಗಿದೆ. ಮೀನುಗಾರಿಕೆ ಚಟುವಟಿಕೆಗಳಿಗೆ ಅಗತ್ಯವಿರುವ ಪೂರಕ ಸಲಕರಣೆಗಳನ್ನು ಸಹಾಯಧನದಲ್ಲಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 153 ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಮೀನು ಮಾರಾಟಗಾರರಿಗೆ ಎರಡು, ಮೂರು, ನಾಲ್ಕು ಚಕ್ರ ವಾಹನಗಳ ಖರೀದಿಗಾಗಿ ಸಹಾಯಧನ ನೀಡಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 26 ಫಲಾನುಭವಿಗಳಿಗೆ ರೂ. 8.41 ಲಕ್ಷ ಸಹಾಯಧನ ವಿತರಣೆ ಮಾಡಲಾಗಿದೆ. 94 ಜನ ಮಹಿಳೆಯರಿಗೆ ಮೀನನ್ನು ಶುದ್ಧವಾಗಿ ಮಾರಾಟ ಮಾಡುವ ನಿಟ್ಟಿನಲ್ಲಿ ಶಾಖ ನಿರೋಧಕ ಪೆಟ್ಟಿಗೆಯನ್ನು ಶೇ. 100 ಸಹಾಯಧನದಲ್ಲಿ ವಿತರಣೆ ಮಾಡಲಾಗಿದೆ. ಮೀನು ಕೃಷಿಕರಿಗೆ ಅಗತ್ಯವಿರುವ ಮಾರ್ಗದರ್ಶನ ಹಾಗೂ ಮೀನುಗಾರಿಕೆಯಲ್ಲಿ ಅಧುನಿಕ ತಂತ್ರಾಜ್ಞಾದ ಬಗ್ಗೆ ಪೂರಕ ಮಾಹಿತಿ ನೀಡಲು ತಾಲೂಕು ಮಟ್ಟದಲ್ಲಿ ತರಬೇತಿ ಕಾರ್ಯಕ್ರಮ, ಕೃಷಿ ಮೇಳಕ್ಕೆ ಪ್ರವಾಸ ಕೈಗೊಳ್ಳಲಾಗಿದೆ. ಮೀನುಮರಿ ಖರೀದಿಗೆ ಸಹಾಯಧನವನ್ನು ಇಲಾಖೆಯಿಂದ ಖರೀದಿಸಲಾದ ಮೀನುಮರಿಗಳಿಗೆ ಒಟ್ಟು 104 ರೈತರಿಗೆ ರೂ. 1.47 ಲಕ್ಷ ಸಹಾಯಧನ ನೀಡಲಾಗಿದೆ. ವಸತಿ ರಹಿತ ಮೀನುಗಾರರಿಗೆ ವಸತಿ ಕಲ್ಪಿಸುವ ಉದ್ದೇಶದಿಂದ ಮತ್ಸ್ಯಾಶ್ರಯ ಯೋಜನೆ ರೂಪಿಸಿದ್ದು, 2013-14 ರಿಂದ 2016-17 ವರೆಗೆ ಜಿಲ್ಲೆಯ ಒಟ್ಟು 57 ಫಲಾನುಭವಿಗಳು ರೂ. 69.30 ಲಕ್ಷ ವೆಚ್ಚದಲ್ಲಿ ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಮೀನುಕೃಷಿ ಕೊಳ ನಿರ್ಮಾಣಕ್ಕಾಗಿ ರಾಷ್ಟ್ರೀಯ ಪ್ರೋಟೀನ್ ಪೂರೈಕೆ ಅಭಿಯಾನ ಯೋಜನೆಯಡಿ ಕಳೆದ ನಾಲ್ಕು ವರ್ಷಗಳಲ್ಲಿ 26 ಫಲಾನುಭವಿಗಳಿಗೆ ಪ್ರತಿ 1 ಎಕರೆ ಕೊಳ ನಿರ್ಮಾಣಕ್ಕಾಗಿ ರೂ. 19.44 ಲಕ್ಷ ಸಹಾಯಧನ ನೀಡಲಾಗಿದೆ. ಜಿಲ್ಲೆಯ ಜಲ ಸಂಪನ್ಮೂಲಗಳಲ್ಲಿ ಮೀನುಗಳ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಹಾಗೂ ಮೀನುಗಾರಿಕೆಯನ್ನು ಅವಲಂಭಿಸಿರುವ ಮೀನುಗಾರರ ಜೀವನೋಪಾಯಕ್ಕಾಗಿ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ಫಾರಂಗಳಿಂದ ಮೀನು ಮರಿಗಳನ್ನು ಖರೀದಿಸಿ ಜಲಾಶಯ/ ನದಿಗಳಲ್ಲಿ ಒಟ್ಟು 10.20 ಲಕ್ಷ ವಿವಿಧ ತಳಿಗಳ ಮೀನು ಮರಿಗಳ ಬಿತ್ತನೆ ಮಾಡಲಾಗಿದೆ. ಹಾರಂಗಿಯಲ್ಲಿರುವ ರಾಜ್ಯದ ಏಕೈಕ ಮಹಶೀರ್ ಮೀನುಮರಿ ಉತ್ಪಾದನಾ ಕೇಂದ್ರದ ಪುನಶ್ಚೇತನವನ್ನು ಆರ್.ಕೆ.ವಿ.ವೈ. ಯೋಜನೆಯಡಿ ರೂ. 1.20 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ವೀರಾಜಪೇಟೆ ಪಟ್ಟಣದಲ್ಲಿ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ನಿಗಮ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ರೂ. 178.91 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರಾಟ ಕೇಂದ್ರ ನಿರ್ಮಾಣ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.